ಸುರಪುರ: ದಾರಿಹೋಕರಿಗೆ ನೀರಿನ ಅರವಟ್ಟಿಗೆ ವ್ಯವಸ್ಥೆ ಮಾಡುವುದು ಸಹಜ. ಆದರೆ ದೇವಸ್ಥಾನ ಕಮೀಟಿಯವರು ದೇವಸ್ಥಾನದ ಸುತ್ತಮುತ್ತಲಿನ ಗಿಡ-ಮರಗಳಿಗೆ ನೀರಿನ ಬಟ್ಟಲು ಕಟ್ಟಿ ಪಕ್ಷಿಗಳಿಗೆ ಕುಡಿಯವ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದು ಡಿವೈಎಸ್ಪಿ ಡಾ| ದೇವರಾಜ ನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಕುಂಬಾರಪೇಟ ಹತ್ತಿರದ ನಾಗಲಾಪುರ ವೀರಾಂಜನೇಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಯಾರಿಕೆಯಾದರೆ ಮನುಷ್ಯ ನೀರನ್ನು ಖರೀದಿಸಿಯಾದರೂ ಕುಡಿಯುತ್ತಾನೆ. ಆದರೆ ಪಕ್ಷಿಗಳು ತೊಂದರೆ ಎದುರಿಸುತ್ತವೆ. ಕುಡಿಯುವ ನೀರಿಗಾಗಿ ಸಾಕಷ್ಟು ಅಲೆದಾಟ ನಡೆಸುತ್ತಿವೆ. ಅದರಲ್ಲೂ ಬೇಸಿಗೆಯಲ್ಲಿ ನೀರು ಸಿಗುವುದು ಕಷ್ಟ. ಪಕ್ಷಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿರುವುದು ಪುಣ್ಯದ ಕೆಲಸ ಎಂದು ತಿಳಿಸಿದರು.
ಪತ್ರಕರ್ತ ಅಶೋಕ ಸಾಲವಡಗಿ ಮಾತನಾಡಿ, ನೀರು ಕೇವಲ ಮನುಷ್ಯನಿಗೆ ಮಾತ್ರವಲ್ಲ ಭೂಮಿ ಮೇಲೆ ಜೀವಿಸುವ ಪ್ರತಿಯೊಂದು ಜೀವಿಗೂ ಅಗತ್ಯವಾಗಿದೆ. ಒಂದು ಹನಿ ನೀರು ಜೀವ ರಕ್ಷಣೆಗೆ ಆಧಾರವಾಗಿದೆ. ಹೀಗಾಗಿ ನೀರು ಅಮೃತಕ್ಕೆ ಸಮಾನ. ಮನುಷ್ಯರಿಗೆ ವ್ಯವಸ್ಥೆ ಮಾಡುವುದಕ್ಕಿಂತ ಪಕ್ಷಗಳಿಗೆ ನೀರಿನ ವ್ಯವಸ್ಥೆ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.
ಇದೇ ವೇಳೆ ಮುಖ್ಯಮಂತ್ರಿ ಪದಕ ಪುರಸ್ಕೃತರಾದ ಡಿವೈಎಸ್ಪಿ ಡಾ| ದೇವರಾಜ ನಾಯ್ಕ ಮತ್ತು ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಅರ್ಚಕ ಸೀತಾರಾಮ ಐ.ಜಿ., ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ದೇವಸ್ಥಾನ ಕಮೀಟಿ ಅಧ್ಯಕ್ಷ ಸಂಜೀವ ದರಬಾರಿ, ಕಾರ್ಯದರ್ಶಿ ಮುದ್ದಪ್ಪ ಅಪ್ಪಾಗೋಳ, ಮಹಾದೇವಪ್ಪ ಗುತ್ತೇದಾರ, ಮಲ್ಲಯ್ಯ ದೇವರು, ಸಿದ್ದು ಗುಡ್ಡಕಾಯಿ ಇತರರಿದ್ದರು.