Advertisement

ಪ್ರತಿ ಬೇಸಿಗೆಯಲ್ಲೂ ಜಲಕ್ಷಾಮ

06:46 AM Mar 19, 2019 | |

ಶಹಾಬಾದ: ನಗರದಿಂದ ಕೇವಲ ನಾಲ್ಕು ಕಿ.ಮೀ. ದೂರದಲ್ಲಿರುವ ತೊನಸಿನಹಳ್ಳಿ (ಎಸ್‌) ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿವ ನೀರಿಗಾಗಿ ಹಾಹಾಕಾರ ಭುಗಿಲೆಳುತ್ತದೆ. ಈ ವೇಳೆ ಗ್ರಾಮಸ್ಥರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸುಮಾರು ಏಳು ಸಾವಿರ ಜನಸಂಖ್ಯೆ ಹೊಂದಿರುವ ತೊನಸಿನಹಳ್ಳಿ (ಎಸ್‌) ಗ್ರಾಪಂ ಕೇಂದ್ರ ಸ್ಥಾನ ಹೊಂದಿದ್ದು, ತರನಳ್ಳಿ ಹಾಗೂ ಗೋಳಾ ಗ್ರಾಮವನ್ನು ಒಳಗೊಂಡಿದೆ. ಮೂರು ಗ್ರಾಮಗಳು ಸೇರಿ ಒಟ್ಟು 22 ಸದಸ್ಯ ಬಲವನ್ನು ಹೊಂದಿದೆ. ತೊನಸಿನಹಳ್ಳಿ (ಎಸ್‌) ಗ್ರಾಮ ಆರು ಸದಸ್ಯರನ್ನು ಹೊಂದಿದೆ.

Advertisement

ಪಾತಾಳಕ್ಕಿಳಿದ ಬಾವಿ ನೀರು: ಬೇಸಿಗೆ ಬಂದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತದೆ. ಆದರೂ ಇಲ್ಲಿವರೆಗೂ ಯಾರು ಶಾಶ್ವತ ಕ್ರಮ ಕೈಗೊಂಡಿಲ್ಲ. ಹೀಗಾಗಿ ಗ್ರಾಮಸ್ಥರು ನೀರಿಗಾಗಿ ನಿತ್ಯ ಅಲೆಯುವಂತಾಗಿದೆ. 

ಗ್ರಾಮದಲ್ಲಿರುವ ಹಾರ ಬಾವಿ, ಊರಾನ ಬಾವಿ, ಮಠದ ಬಾವಿ ಸೇರಿದಂತೆ ಜಲಮೂಲಗಳು ಬತ್ತಿ ಹೋಗಿವೆ. ಇರುವ ಒಂದೆರಡು ಕೊಳವೆ ಬಾವಿಗಳಲ್ಲಿನ ನೀರು ಪಾತಾಳಕ್ಕೆ ಇಳಿದಿದೆ.

 ಗ್ರಾಮಸ್ಥರ ಆರೋಪ: ಸುಮಾರು ದಶಕಗಳಿಂದ ಇಲ್ಲಿನ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಕೇಳುವ ಬೇಡಿಕೆ ಎಂದರೆ “ಅದು ಸಮರ್ಪಕ ಕುಡಿಯುವ ನೀರು ಒದಗಿಸಿ’. ಆದರೆ ಜನಪ್ರತಿನಿಧಿ ಗಳು ಮಾತ್ರ ಭರವಸೆ ನೀಡುತ್ತ ಬಂದಿದ್ದಾರೆ ಹೊರತು ಇಲ್ಲಿಯವರೆಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ.

ಮಳೆಗಾಲ, ಚಳಿಗಾಲ ಬಂದಾಗ ಮಾತ್ರ ಅಂತರ್ಜಲ ಹೆಚ್ಚಾಗಿ ಬೋರ್‌ ವೆಲ್‌ ಹಾಗೂ ಬಾವಿಯಲ್ಲಿ ನೀರು ಬರುತ್ತದೆ. ಆ ನೀರು ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ದಾಹ ತಣಿಸುವುದಿಲ್ಲ. ಜಲಕ್ಷಾಮದ ಬಗ್ಗೆ ಗ್ರಾಪಂ, ತಾಪಂ, ಜಿಪಂ ಅಧಿ ಕಾರಿಗಳು ಹಾಗೂ ಶಾಸಕರ ಗಮನಕ್ಕೂ ತಂದರೂ ಇಲ್ಲಿಯವರೆಗೆ ಯಾರೋಬ್ಬರೂ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪ.

Advertisement

ಆಶಾ ಭಾವನೆ: ಈಗಾಗಲೇ ಗ್ರಾಪಂನವರು ಮುತುರ್ಜಿ ವಹಿಸಿ ನೀರಿನ ಸಮಸ್ಯೆಯಾಗದಂತೆ ತೆಗನೂರ ಗ್ರಾಮದ ಹಳ್ಳದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಅಲ್ಲಿಂದ ಗ್ರಾಮದ ಬಾವಿಗಳಿಗೆ ನೀರು ತುಂಬಿಸಲಾಗುತ್ತಿದೆ. ಆದರೆ ಆ ನೀರು ಸಾಕಾಗುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ ಸಚಿವ ಪ್ರಿಯಾಂಕ ಖರ್ಗೆ, ಶಾಸಕ ಬಸವರಾಜ ಮತ್ತಿಮಡು ಅವರು ಗೋಳಾ (ಕೆ) ಗ್ರಾಮದ ಕಾಗಿಣಾ ನದಿಯಿಂದ ಎಚ್‌ ಕೆಆರ್‌ಡಿಬಿಯ 2 ಕೋಟಿ ಅನುದಾನದಲ್ಲಿ ಶಾಶ್ವತ ಕುಡಿಯುವ ನೀರಿನ ಕಾಮಗಾರಿಗೆ ಚಾಲನೆ ನೀಡಿದ್ದಾರೆ. ಆದರೆ ಅದು ಯಾವಾಗ ಪ್ರಾರಂಭವಾಗುತ್ತದೆ. ಯಾವಾಗ ನೀರು ನಮ್ಮೂರಿಗೆ ಬರುತ್ತದೆ ಎಂದು ಗ್ರಾಮಸ್ಥರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಗ್ರಾಮಕ್ಕೆ ಹೋದಾಗ ಜನರಿಂದ ಬಂದ ಬೇಡಿಕೆ ಎಂದರೆ ಕುಡಿಯುವ ನೀರಿನ
ವ್ಯವಸ್ಥೆ ಮಾಡಿಕೊಡಿ ಎಂದು. ಅದಕ್ಕಾಗಿ ಸತತ ಪರಿಶ್ರಮ ಪಟ್ಟು ಗೋಳಾ(ಕೆ) ಗ್ರಾಮದ ಕಾಗಿಣಾ ನದಿಯಿಂದ ತೊನಸನಹಳ್ಳಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ ಎಚ್‌ಕೆಆರ್‌ಡಿಬಿಯಿಂದ ಎರಡು ಕೋಟಿ ಅನುದಾನ ಮಂಜೂರಾತಿ ಮಾಡಿಸಿದ್ದೇನೆ. ಕೆಲವೇ ದಿನಗಳಲ್ಲಿ ಕಾಮಗಾರಿ ಪ್ರಾರಂಭವಾಗುತ್ತದೆ. ಗ್ರಾಮಸ್ಥರಲ್ಲಿ ಯಾವುದೇ ಅನುಮಾನ ಬೇಡ.
 ಬಸವರಾಜ ಮತ್ತಿಮಡು, ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ

ಅಂತರ್ಜಲ ಮಟ್ಟ ಸಂಪೂರ್ಣ ಕುಸಿದ ಪರಿಣಾಮ ಗ್ರಾಮದ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಗ್ರಾಪಂನಿಂದ 12 ಕಿ.ಮೀ. ದೂರವಿರುವ ತೆಗನೂರ ಗ್ರಾಮದ ಹಳ್ಳದಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ. ಅಲ್ಲಿಂದ ನೀರು ಪೂರೈಕೆ ಮಾಡುತ್ತಿದ್ದೇವೆ. ಆದರೂ ನೀರಿನ ಸಮಸ್ಯೆಯಿದೆ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ನಿರಂತರ ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇವೆ. ಸದ್ಯದಲ್ಲಿಯೇ ಸಮಸ್ಯೆಗೆ ಪರಿಹಾರ ಸಿಗಲಿದೆ. 
 ವಿಜಯಕುಮಾರ ಮಾಣಿಕ್‌, ತೊನಸನಹಳ್ಳಿ(ಎಸ್‌) ಗ್ರಾಪಂ ಅಧ್ಯಕ್ಷ

„ಮಲ್ಲಿನಾಥ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next