Advertisement

ಜಲ ಸಂರಕ್ಷಣೆಗೆ ಮರುಪೂರಣ ಬಾವಿ

08:37 PM Jun 11, 2021 | Team Udayavani |

ವರದಿ : ರಣಪ್ಪ ಗೋಡಿನಾಳ

Advertisement

ಕನಕಗಿರಿ: ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಪೋಲಾಗುವ ನೀರನ್ನು ಭೂಮಿಯಲ್ಲಿ ಇಂಗಿಸಿ ಅಂತರ್ಜಲಮಟ್ಟ ಹೆಚ್ಚಿಸುವ ಕಾರ್ಯ ಗ್ರಾಮೀಣ ಪ್ರದೇಶದಲ್ಲಿ ನಡೆದಿದೆ.

ಅಂತರ್ಜಲಮಟ್ಟ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದ್ದು, ನರೇಗಾ ಯೋಜನೆಯಡಿ “ಬೋಲ್ಡರ್‌ ಚೆಕ್‌’ ಹಾಗೂ “ರಿಚಾರ್ಜ್‌ ವೆಲ್‌’ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಯೋಜನೆ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಸಹಯೋಗದಲ್ಲಿ ಅನುಷ್ಠಾನಗೊಳ್ಳುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ 1,438 ಕಾಮಗಾರಿ ನಡೆಸುವ ಕ್ರಿಯಾಯೋಜನೆ ತಯಾರಿಸಿದ್ದು, ಈಗಾಗಲೇ 35 ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ.

ಮೊದಲ ಹಂತದಲ್ಲಿ ಸುಳೇಕಲ್‌, ಜೀರಾಳ, ಹುಲಿಹೈದರ್‌, ಚಿಕ್ಕಮಾದಿನಾಳ, ಮುಸಲಾಪುರ, ಗೌರಿಪುರ ಹಾಗೂ ಹಿರೇಖೇಡ ಗ್ರಾಪಂಗಳಲ್ಲಿ ಯೋಜನೆ ಜಾರಿಯಲ್ಲಿದೆ. ಸುಳೇಕಲ್‌, ಜಿರಾಳ, ಹುಲಿಹೈದರ್‌, ಚಿಕ್ಕಮಾದಿನಾಳದಲ್ಲಿ ಆರಂಭಿಸಿದ ಕೆಲ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ.

ಹಿರೇಖೇಡ ಹಾಗೂ ಮುಸಲಾಪುರ, ಗೌರಿಪುರ ಗ್ರಾಪಂನಲ್ಲಿ ಆರಂಭವಾಗಬೇಕಿದೆ. ಉಳಿದ ಗ್ರಾಪಂಗಳಲ್ಲೂ ಎರಡನೇ ಹಂತದಲ್ಲಿ ಕಾಮಗಾರಿ ಶುರುವಾಗಲಿವೆ. ಏನಿದು ಕಾಮಗಾರಿ?: ಗ್ರಾಮೀಣ ಪ್ರದೇಶದ ಹಳ್ಳ, ನಾಲಾದಲ್ಲಿ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯವರು ನೀರು ಇಂಗಿಸಲು ವೈಜ್ಞಾನಿಕವಾಗಿ ಅನುಕೂಲಕರವಾದ ಪಾಯಿಂಟ್‌ (ಸ್ಥಳ) ಗುರುತಿಸುತ್ತಾರೆ.

Advertisement

ಆ ಜಾಗದಲ್ಲಿ 20 ಅಡಿ ಆಳ, 3 ಅಡಿ ಅಗಲದ ಹೊಂಡ ಕೊರೆಯಲಾಗುವುದು. ನಂತರ 3 ಅಡಿ ವ್ಯಾಸ, 1 ಅಡಿ ಎತ್ತರದ ಸಿಮೆಂಟ್‌ ರಿಂಗ್‌ ಗಳನ್ನು ಹೊಂಡದಲ್ಲಿ ಅಳವಡಿಸಲಾಗುವುದು. ರಿಂಗ್‌ಗಳ ಸುತ್ತ ಜಲ್ಲಿಗಳನ್ನು ತುಂಬಿದ ಬಳಿಕ 16ನೇ ರಿಂಗ್‌ ಇರುವ ಜಾಗದಲ್ಲಿ ಸಿಮೆಂಟ್‌ ಸ್ಲ್ಯಾಬ್‌ ಇಟ್ಟು ಮುಚ್ಚಲಾಗುವುದು. ಇದರ ಮೇಲೆ ಜಲ್ಲಿಕಲ್ಲುಗಳನ್ನು ಹರಡಲಾಗುವುದು. ನಂತರ 20ನೇ ಸ್ಲ್ಯಾಬ್‌ ಮೇಲೆ ಮತ್ತೂಂದು ಸಿಮೆಂಟ್‌ (ತೂತು ಹೊಂದಿರುವ) ಸ್ಲ್ಯಾಬ್‌ ನಿಂದ ಮುಚ್ಚಲಾಗುವುದು. ಈ ಹೊಂಡಕ್ಕೆ ಮಳೆ ನೀರು ನಿಧಾನವಾಗಿ ಬರಲು ಅನುಕೂಲವಾಗುವಂತೆ ಅನತಿ ದೂರದಲ್ಲಿ ಬದುಗಳನ್ನು ನಿರ್ಮಿಸಿ ಕಸ-ಕಡ್ಡಿ ತಡೆದು ಕೇವಲ ನೀರು ಹರಿಯುವಂತೆ ಮಾಡಲಾಗುತ್ತದೆ.

ಒಂದು ಕಾಮಗಾರಿಗೆ ಒಂದು ಲಕ್ಷ ರೂ. ಅನುದಾನ ಇರುತ್ತದೆ. ಕೂಲಿ ಕಾರ್ಮಿಕರನ್ನು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆಯವರು ಗುರುತಿಸುತ್ತಾರೆ. ಕಾಮಗಾರಿ ಮುಗಿಯವರೆಗೂ ಸಂಸ್ಥೆ ಮೇಲುಸ್ತುವಾರಿ ವಹಿಸಲಿದೆ. ಇದರ ಜೊತೆಗೆ ಐದು ಇಂಜೆಕ್ಷನ್‌ ವೆಲ್‌ (170-180 ಮೀಟರ್‌ ಆಳದಲ್ಲಿ ನಿರ್ಮಾಣ) ಹಾಗೂ ತಾಲೂಕಿನಲ್ಲಿ ಐದು ವಾಟರ್‌ ಪೂಲ್‌ (ನೀರಿನ ಕೊಳ) ನಿರ್ಮಿಸುವ ಗುರಿ ಹೊಂದಲಾಗಿದೆ. ಎರಡ್ಮೂರು ಹಳ್ಳಗಳು ಕೂಡುವ ಹಾಗೂ ದೊಡ್ಡ ಹಳ್ಳದಲ್ಲಿ ನೀರಿನ ಕೊಳ ನಿರ್ಮಿಸಲಾಗುವುದು.

ಉಪಯೋಗ ಏನು: ಬಯಲು ಸೀಮೆಗೆ ಹೆಸರಾದ ತಾಲೂಕಿನಲ್ಲಿ ಕೆಲವೆಡೆ ಕೊಳವೆಬಾವಿ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇರುವ ಬೋರ್‌ವೆಲ್‌ಗ‌ಳಲ್ಲೂ ಅಂತರ್ಜಲ ಕಡಿಮೆಯಾಗುತ್ತಿದೆ. 20 ಅಡಿ ಆಳದಲ್ಲಿ ರಿಚಾರ್ಜ್‌ ವೆಲ್‌ ನಿರ್ಮಿಸುವುದರಿಂದ ನೀರು ಇಂಗಿಸಲು ಹಾಗೂ ಸುತ್ತಲಿನ ಬೋರ್‌ವೆಲ್‌ಗ‌ಳು ರಿಚಾರ್ಜ್‌ ಆಗಲು ಸಹಕಾರಿ ಆಗಲಿದೆ. ಈಗಾಗಲೇ ಸುಳೇಕಲ್‌, ಜಿರಾಳ ಗ್ರಾಮದಲ್ಲಿ ಉತ್ತಮ ಮಳೆಯಾದ್ದರಿಂದ ನಿರ್ಮಿಸಿದ ರಿಚಾರ್ಜ್‌ ವೆಲ್‌ ಗಳಲ್ಲಿ ನೀರು ಸಂಗ್ರಹಗೊಂಡಿದೆ. ಕೆಲವೆಡೆ ಬಸಿ ನೀರಿನಿಂದ ವಾಲ್‌ಗ‌ಳು ತುಂಬಿಕೊಂಡಿದ್ದರಿಂದ ರೈತರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next