ಶಹಾಬಾದ: ಸಕಲ ಜೀವರಾಶಿಗಳ ಅಸ್ತಿತ್ವಕ್ಕೆ ಕಾರಣವಾದ ಅಮೂಲ್ಯವಾದ ಜಲ ಸಂಪತ್ತಿನ ಸಂರಕ್ಷಣೆ ಕೇವಲ ಸರ್ಕಾರ, ಕೆಲವು ವ್ಯಕ್ತಿ, ಸಂಘ-ಸಂಸ್ಥೆಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬರ ಹೊಣೆಯಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯ ಪಟ್ಟರು.
ಝಾಪೂರ್ ಸರ್ಕಾರಿ ಪ್ರಾಥಮಿಕ ಶಾಲೆ ಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಏರ್ಪಡಿಸಲಾಗಿದ್ದ “ವಿಶ್ವ ಜಲ ಸಪ್ತಾಹ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಲ ಎಂಬುದು ಕೇವಲ ಎರಡಕ್ಷರದ ಪದವಲ್ಲ. ಅದು ಜೀವ ಕೊಡುವ ಶಕ್ತಿ, ಉಸಿರು, ಫಲವಾಗಿದೆ. ಜಲಸಂಪತ್ತು ಹಾಳಾಗದಂತೆ ತಡೆದು, ಅದನ್ನು ಮುಂದಿನ ಪೀಳಿಗೆಗೆ ಬಳಸುವದಕ್ಕೆ ಅವಕಾಶ ನಿಡುವುದೇ ಜಲಸಂರಕ್ಷಣೆ ಆಗಿದೆ. ಭೂಮಂಡಲದಲ್ಲಿ ಒಟ್ಟು ಬಳಕೆಗೆ ಲಭ್ಯತೆಯ ನೀರಿನ ಪ್ರಮಾಣ ತುಂಬಾ ಕಡಿಮೆಯಿದ್ದು, ಅದರ ಸದ್ಬಳಕೆಯಾಗಬೇಕು ಎಂದರು.
ಅರಣ್ಯನಾಶ, ಅತಿಯಾದ ಅಂತರ್ಜಲ ಬಳಕೆ, ಪರಿಸರ ಮಾಲಿನ್ಯ, ಅವೈಜ್ಞಾನಿಕ ನೀರಿನ ಬಳಕೆ, ಮಾನವನ ದುರಾಶೆಯಂತಹ ಮುಂತಾದ ಕಾರಣಗಳಿಂದ ಇದು ಬರಿದಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ, ನೀರಿಗಾಗಿ ವಿಶ್ವದ ತೃತೀಯ ಯುದ್ಧ ಜರುಗಿದರೆ ಆಶ್ಚರ್ಯ ಪಡಬೇಕಾಗಿಲ್ಲ. ಅದಕ್ಕಾಗಿ ಜಲಸಂರಕ್ಷಣೆ ಒಂದು ವ್ಯಾಪಕವಾದ ಚಳವಳಿಯಾಗಬೇಕು. ಪ್ರತಿಯೊಬ್ಬರಲ್ಲಿ ಜಲ ಸಂರಕ್ಷಣೆ ಪ್ರಜ್ಞೆ ಮೈಗೂಡಬೇಕಾಗಿದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ದೇವೇಂದ್ರಪ್ಪ ಗಣಮುಖೀ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ ಮಾಂಗ್, ಗ್ರಾಪಂ ಸದಸ್ಯರಾದ ಪೀರಪ್ಪ ದೊಡ್ಡಮನಿ, ಮಲ್ಲಮ್ಮ ಪೂಜಾರಿ, ನಾಗನ ಗೌಡ ಪಾಟೀಲ, ಅಣ್ಣಾರಾಯ ಪೂಜಾರಿ, ನಾಗರಾಜ ನಾಟಿಕಾರ, ಜೈಭೀಮ ಸರಡಗಿ, ಅರುಣಕುಮಾರ ಕಟ್ಟಿಮನಿ, ಹಣಮಂತ್, ಸಾಯಬಣ ಹೊಸಮನಿ, ಭೀಮರಾಯ ನಾಟಿಕಾರ್, ಶಿವಯೋಗಿ ಹೊಸಮನಿ, ರಾಹುಲ್, ಶಾಂತಾಬಾಯಿ ಹಿರೇಮಠ, ವೀರವ್ವ ಹಿರೆಕೆನ್ನೂರ್, ಲಕ್ಕುನಾಯಕ್ ಇದ್ದರು.