Advertisement

ನೀರಿನ ಕರ ಏರಿಕೆ ಸದ್ಯಕ್ಕಿಲ್ಲ

12:47 PM May 21, 2017 | |

ದಾವಣಗೆರೆ: ಸದ್ಯ ನೀರಿನ ಕರ ಏರಿಸದಿರಲು ತೀರ್ಮಾನಿಸಿರುವ ಮಹಾನಗರ ಪಾಲಿಕೆ, ಎಲ್ಲಾ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಶನಿವಾರ ಪಾಲಿಕೆಯ ಸಭಾಂಗಣದಲ್ಲಿ ಮೇಯರ್‌ ಅನಿತಾಬಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ನೀರಿನ ಕರ ಏರಿಕೆ ಸಂಬಂಧ ಸರ್ಕಾರದ ಪ್ರಸ್ತಾವನೆ ಚರ್ಚೆ ವೇಳೆ ಸದಸ್ಯರು, ಸದ್ಯ ಬರಗಾಲದಿಂದಾಗಿ ನೀರಿನ ಸಮಸ್ಯೆ ಇದೆ.

Advertisement

ಈಗ ಕರ ಏರಿಕೆ ಮಾಡುವುದು ಬೇಡ. ಮಳೆ ಬಂದ ನಂತರ ಮಾಡೋಣ ಎಂಬ ಅಭಿಪ್ರಾಯಕ್ಕೆ ಮೇಯರ್‌ ಸಮ್ಮತಿಸಿದರು. ವಿಷಯ ಪ್ರಸ್ತಾಪಿಸಿದ ಸದಸ್ಯ ದಿನೇಶ್‌ ಕೆ. ಶೆಟ್ಟಿ, ನೀರಿನ ಕರ ಏರಿಕೆ ಮಾಡಬೇಕು ಎಂಬ ಸರ್ಕಾರ ನಿರ್ಧಾರ ಸರಿಯಿದ್ದರೂ ಸಹ ಪ್ರಸ್ತುತ ನೀರಿನ ಸಮರ್ಪಕ ಪೂರೈಕೆ ಆಗುತ್ತಿಲ್ಲ.

ಮೂರು ವರ್ಷಗಳ ಸತತ ಬರಗಾಲದ ಹಿನ್ನೆಲೆಯಲ್ಲಿ ನೀರಿನ ತೀವ್ರ ಅಭಾವ ಉಂಟಾಗಿದೆ. ಮುಂದೆ ಮಳೆಯಾದ ನಂತರ ನೋಡೋಣ. ಆದರೆ, ಪಾಲಿಕೆ ವ್ಯಾಪ್ತಿಯಲ್ಲಿ 93 ಸಾವಿರ ಮನೆಗಳಿವೆ. ಆದರೆ, 45 ಸಾವಿರ ನಲ್ಲಿ ಮಾತ್ರ ಅಳವಡಿಸಲಾಗಿದೆ. ಉಳಿದ ಮನೆಗಳಲ್ಲಿ ನಲ್ಲಿ ಸಂಪರ್ಕವಿಲ್ಲದಿದ್ದರೂ ನೀರು ಕೊಡುತ್ತಿದ್ದೇವೆ.

ಎಲ್ಲರಿಗೂ ನಲ್ಲಿ ಅಳವಡಿಸಿ. ಇನ್ನು ವಾಣಿಜ್ಯ ಬಳಕೆ ನಲ್ಲಿಗಳ ಸಂಖ್ಯೆ ಸಹ ಹೆಚ್ಚಿಸಿ ಎಂದರು. ಇದಕ್ಕೆ ದನಿಗೂಡಿಸಿದ ಇನ್ನೋರ್ವ ಸದಸ್ಯ ಶಿವನಹಳ್ಳಿ ರಮೇಶ್‌, ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1.44 ಲಕ್ಷ ಮನೆ ಇವೆ. ಇವುಗಳ ಪೈಕಿ ಕೇವಲ 46 ಸಾವಿರ ನಲ್ಲಿ ಇವೆ. ಅಲ್ಲಿಗೆ ಶೇ.33ರಷ್ಟು ಮಾತ್ರ ನಲ್ಲಿ ಅಳವಡಿಸಲಾಗಿದೆ.

ಇನ್ನು ವಾಣಿಜ್ಯ ಬಳಕೆಯ ಸಂಪರ್ಕಗಳು ಕೇವಲ 600 ಮಾತ್ರ ಇವೆ. ಇವನ್ನು 4000ಕ್ಕೆ ಏರಿಸಿ. ಇದರಿಂದ ಪಾಲಿಕೆಗೆ ಕನಿಷ್ಠ 50 ಲಕ್ಷ ರೂ. ಆದಾಯ ಹೆಚ್ಚಳ ಆಗಲಿದೆ ಎಂದಾಗ, ಆಯುಕ್ತ ಬಿ.ಎಚ್‌. ನಾರಾಯಣಪ್ಪ ಕ್ರಮ ವಹಿಸುವುದಾಗಿ ತಿಳಿಸಿದರು. ಉಪಮೇಯರ್‌ ಮಂಜಮ್ಮ, ಉಪ ಆಯುಕ್ತ ರವೀಂದ್ರ, ಪಾಲಿಕೆ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

ನೀರಗಂಟಿಗಳು ಮಾತೇ ಕೇಳಲ್ಲ….
ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಸದಸ್ಯರು ಗರಂ ಆಗಿದ್ದು ಕಂಡು ಬಂತು. ದಿನೇಶ್‌ ಕೆ. ಶೆಟ್ಟಿ, ನೀರಿನ ಕರ ಏರಿಕೆ ಕುರಿತು ಮಾತನಾಡುವಾಗ ನೀರಗಂಟಿಗಳು ಇಂದು ಯಾರ ಮಾತು ಕೇಳದಂತೆ ಆಗಿದ್ದಾರೆ. ದುಡ್ಡು ಕೊಟ್ಟವರಿಗೆ ನೀರು ಕೊಡುತ್ತಾರೆ.  ಒಂದು ರಸ್ತೆ ನೀರು ಕೊಟ್ಟರೆ, ಇನ್ನೊಂದು ರಸ್ತೆಗೆ ಕೊಡುವುದಿಲ್ಲ.

ಸಮಯ ಪಾಲನೆ  ಮಾಡುವುದಿಲ್ಲ. ನಮ್ಮ ಮಾತಿಗೆ ಬೆಲೆ ಕೊಡುವುದಿಲ್ಲ. ನಾನು 2 ವರ್ಷದ ಹಿಂದೆಯೇ ನನ್ನ ವಾರ್ಡ್‌ನ ನೀರಗಂಟಿ ವಿರುದ್ಧ ದೂರು ನೀಡಿದ್ದೆ. ಆದರೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಮತ್ತೋರ್ವ ಸದಸ್ಯ ಶಿವನಹಳ್ಳಿ ರಮೇಶ್‌, ಒಂದಿಬ್ಬರು ತಪ್ಪಿತಸ್ಥರ ಮೇಲೆ ಕ್ರಮ ವಹಿಸಿ. ಆಗ ಉಳಿದವರು ಎಚ್ಚೆತ್ತುಕೊಂಡು ಪ್ರಾಮಾಣಿಕವಾಗಿ ಕೆಲಸಮಾಡುತ್ತಾರೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಹಾಲೇಶ್‌ ಮಾತನಾಡಿ, ಎಇಇ ಉಮಾಪತಿ ಯಾವುದೇ ಕೆಲಸಕ್ಕೆ ಕರೆದರೂ ಬರುವುದಿಲ್ಲ. ಸೂಚನೆ ಕೊಟ್ಟರೂ ಪಾಲನೆ ಮಾಡುವುದಿಲ್ಲ. ಅವರನ್ನು ಬಿಡುಗಡೆಗೊಳಿಸಿ ಎಂದಾಗ, ರಮೇಶ್‌, ದಿನೇಶ್‌ ಶೆಟ್ಟಿ ಸಹ ದನಿಗೂಡಿಸಿದರು. ಕೊನೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ನಾರಾಯಣಪ್ಪ ತಿಳಿಸಿದ ನಂತರ ಚರ್ಚೆಗೆ ಇತಿಶ್ರೀ ಹಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next