Advertisement

ನೀರಿನ ಬಿಲ್ ವಸೂಲಿಯಲ್ಲಿ ನಗರಸಭೆ ಸಿಬ್ಬಂದಿ ನಿರ್ಲಕ್ಷ ; 5.32 ಕೋಟಿ ನೀರಿನ ತೆರಿಗೆ ಬಾಕಿ

03:26 PM Aug 20, 2020 | sudhir |

ಹಾವೇರಿ: ನೀರಿನ ಕರ ವಸೂಲಿ ಮಾಡುವಲ್ಲಿ ಸ್ಥಳೀಯ ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯ ತೋರುತ್ತಿರುವುದರಿಂದ ವರ್ಷದಿಂದ ವರ್ಷಕ್ಕೆ ನೀರಿನ ಕರ ಬಾಕಿ ಉಳಿಯುತ್ತಲೇ ಬರುತ್ತಿದೆ. ಅಲ್ಲದೇ, ಕೋವಿಡ್ ಹಿನ್ನೆಲೆಯಲ್ಲಿ ಜನರು ತೆರಿಗೆ ಕಟ್ಟಲು ಹಿಂದೇಟು ಹಾಕಿದ್ದರಿಂದ ಸ್ಥಳೀಯ ನಗರಸಭೆಗೆ 5.32 ಕೋಟಿ ರೂ. ನೀರಿನ ತೆರಿಗೆ ಬಾಕಿ ಉಳಿದಿದೆ. ಇದರಿಂದಾಗಿ ಇತರೆ ಅಭಿವೃದ್ಧಿ
ಕಾಮಗಾರಿಗಳಿಗೆ ಹಿನ್ನಡೆಯಾಗುತ್ತಿದೆ. ನಗರಸಭೆ ಸಿಬ್ಬಂದಿ ಪ್ರತಿವರ್ಷ ಕಾಟಾಚಾರಕ್ಕೆ ಒಂದಿಷ್ಟು ಕರ ವಸೂಲಿ ಮಾಡಿ ಕೈ ತೊಳೆದುಕೊಳ್ಳುವ ಪ್ರವೃತ್ತಿ ಮುಂದುವರೆಸುತ್ತಿದ್ದು, ಇದರಿಂದಾಗಿ ನಗರಸಭೆಗೆ ಭಾರಿ ಪ್ರಮಾಣದಲ್ಲಿ ನೀರಿನ ಕರ ವಸೂಲಿಯಾಗದೇ ಬಾಕಿ ಉಳಿದಿದೆ. ಕಳೆದ ಐದಾರು ತಿಂಗಳಿನಿಂದ ಕೋವಿಡ್ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಕರ ವಸೂಲಿಗೆ
ಮುಂದಾಗಿಲ್ಲ. ಅಲ್ಲದೇ, ಆರ್ಥಿಕ ಪರಿಸ್ಥಿತಿ ಹದಿಗೆಟ್ಟ ಹಿನ್ನೆಲೆಯಲ್ಲಿ ಬಹುತೇಕ ಜನರು ನೀರಿನ ತೆರಿಗೆ ಪಾವತಿಗೆ ಹಿಂದೇಟು ಹಾಕಿದ್ದರಿಂದ ನಿಯಮಿತವಾಗಿ ತೆರಿಗೆ ವಸೂಲಿಯಾಗದೇ ಬಾಕಿ ಉಳಿಯುತ್ತಿದೆ.

Advertisement

ಜಿಲ್ಲಾ ಕೇಂದ್ರವಾಗಿರುವ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿದ್ದು, ಸುಮಾರು ಎಂಟು ಸಾವಿರಕ್ಕೂ ಹೆಚ್ಚು ನಳದ ಸಂಪರ್ಕ ನೀಡಲಾಗಿದೆ. ನಗರದಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ 24×7 ನೀರಿನ ಸಂಪರ್ಕ ನೀಡುವ ಕಾರ್ಯ ಆರಂಭಗೊಂಡಿದ್ದು, ಈಗಾಗಲೇ ನೀಡಿರುವ ನೀರಿನ ಸಂಪರ್ಕ ಕಡಿತಗೊಳಿಸಿ ಹಂತ ಹಂತವಾಗಿ 24×7 ನೀರಿನ ಸಂಪರ್ಕ ನೀಡಲಾಗುತ್ತಿದೆ. ಆದರೆ, ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಇನ್ನೂ ಕೂಡ 24×7 ನೀರಿನ ಯೋಜನೆಗೆ ಚಾಲನೆ ದೊರಕಿಲ್ಲ.

ಆದರೆ, ಸದ್ಯ 24×7 ನೀರಿನ ಸಂಪರ್ಕ ನೀಡುವ ಕಾರ್ಯ ಕೆಲವೊಂದು ಬಡಾವಣೆಗಳಲ್ಲಿ ಪ್ರಗತಿಯಲ್ಲಿದ್ದು, ಇದರ ಸಂಪರ್ಕ ಪಡೆಯುತ್ತಿರುವ ನಿವಾಸಿಗಳು ಹಿಂದಿನ ಬಾಕಿ ಉಳಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಕೆಲವು ಬಡವಾವಣೆಗಳಲ್ಲಿ ನೀರು
ಸಮರ್ಪಕವಾಗಿ ಸರಬರಾಜು ಆಗದ ಕಾರಣ ಜನರು ತೆರಿಗೆ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾತುಗಳು ಹೇಳಿ ಬಂದಿವೆ.

ತೆರಿಗೆ ಹಣ ಸಕಾಲಕ್ಕೆ ಬಂದರೆ ಅದನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆದರೆ ಸ್ಥಳೀಯ ನಗರಸಭೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ನೀರಿನ ಕರ ವಸೂಲಿಯಾಗದೇ 5.32 ಕೋಟಿ ರೂ. ಬಾಕಿ ಉಳಿದಿದೆ. ಇಲ್ಲಿಯ ವರೆಗೆ 50.90 ಲಕ್ಷ ರೂ. ಮಾತ್ರ ತೆರಿಗೆ ಹಣ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದ್ದು, ಶೇ.8.72 ರಷ್ಟು ತೆರಿಗೆ ವಸೂಲಿಯಾಗಿದೆ. ಈ ಬಗ್ಗೆ ನಗರಸಭೆ ಅಧಿ ಕಾರಿಗಳು ಸೂಕ್ತ ಕ್ರಮ ವಹಿಸಬೇಕಿದೆ. ಇನ್ನು ಸ್ವಯಂಘೋಷಿತ ತೆರಿಗೆ (ಎಸ್‌ಎಎಸ್‌)
ವಸೂಲಿಯಲ್ಲಿ ಸ್ಥಳೀಯ ನಗರಸಭೆ ಶೇ.62.29 ರಷ್ಟು ಸಾಧನೆ ತೋರಿದ್ದು ಸ್ವಲ್ಪ ಸಮಾಧಾನ ತಂದಿದೆ.

ಇಲ್ಲಿಯವರೆಗೆ ಬಾಕಿ ಇದ್ದ 3.32 ಕೋಟಿ ರೂ. ತೆರಿಗೆ ಹಣದಲ್ಲಿ 1.86 ಕೋಟಿ ರೂ. ವಸೂಲಿಯಾಗಿದೆ. ಇನ್ನೂ 1.25 ಕೋಟಿ ರೂ. ಬಾಕಿ ಉಳಿದಿದೆ. ನಗರಸಭೆಯ 31 ವಾರ್ಡ್‌ಗಳಿಗೆ ಚುನಾವಣೆ ನಡೆದು ಎರಡು ವರ್ಷ ಕಳೆದಿದ್ದರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಗೊಂದಲ ಹಿನ್ನೆಲೆಯಲ್ಲಿ ಚುನಾಯಿತ ಸದಸ್ಯರಿಗೆ ಯಾವುದೇ ಅಧಿ ಕಾರವಿಲ್ಲದೇ ನಾಮಕಾವಸ್ತೆ ಎಂಬಂತಾಗಿದೆ. ಪೌರಾಯುಕ್ತರು, ಅಧಿಕಾರಿಗಳು ಇದ್ದರೂ ಕೂಡ ದೈನಂದಿನ ಕರ್ತವ್ಯದ ಹೊರತಾಗಿ ವಿಶೇಷವಾಗಿ ಅಭಿವೃದ್ಧಿಯತ್ತ ಗಮನ
ಹರಿಸಲು ಸಾಧ್ಯವಾಗುತ್ತಿಲ್ಲ. ಜನರು ಸಮಸ್ಯೆ ಹೊತ್ತು ನಗರಸಭೆಗೆ ಬಂದರೆ ಸ್ಪಂದಿಸುವವರೇ ಇಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

Advertisement

– ವೀರೇಶ ಮಡ್ಲುರ

 

Advertisement

Udayavani is now on Telegram. Click here to join our channel and stay updated with the latest news.

Next