Advertisement

ಮಿತಿ ಮೀರಿದ ನೀರು; ಜನರ ಕಣ್ಣೀರು

11:42 PM Oct 23, 2019 | Team Udayavani |

ಹುಬ್ಬಳ್ಳಿ: ಮಳೆರಾಯನ ಆರ್ಭಟ ಮುಂದುವರಿದಿದ್ದು, ನದಿಗಳ ನೀರಿನ ಮಟ್ಟ ಏರುತ್ತಲೇ ಇದೆ. ತೀರ ಪ್ರದೇಶದಲ್ಲಿ ಪ್ರವಾಹ ಮಿತಿ ಮೀರಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಮತ್ತೆ ಐವರು ಮೃತಪಟ್ಟಿದ್ದು, ಅಪಾರ ಪ್ರಮಾಣ ಆಸ್ತಿ ಪಾಸ್ತಿ ಹಾನಿಯಾಗಿದೆ.

Advertisement

ಕೃಷ್ಣಾ, ಮಲಪ್ರಭಾ, ಘಟಪ್ರಭಾ, ವೇದಗಂಗಾ, ದೂಧಗಂಗಾ, ತುಂಗಭದ್ರಾ, ವರದಾ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಬೆಳಗಾವಿ, ಬಾಗಲ ಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಲಕ್ಷಾಂತರ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ.

ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಟ್ಟಿಗೆಹಳ್ಳಿ ಬಳಿ ಬಿದರಕೆರೆ ಗ್ರಾಪಂ ವ್ಯಾಪ್ತಿಯ ನೀರು ಗಂಟಿ ಬಸವರಾಜಪ್ಪ (36) ಹಳ್ಳದಲ್ಲಿ ಕೊಚ್ಚಿ ಹೋಗಿ ದ್ದಾನೆ. ಶಿವಮೊಗ್ಗದ ಕೊಪ್ಪದಕೆರೆಯಲ್ಲಿ ಕೊಚ್ಚಿ ಹೋಗಿದ್ದ ಎಮ್ಮೆಹಟ್ಟಿ ಗ್ರಾಮದ ರವಿ (40) ಮೃತ ದೇಹ ಭದ್ರಾ ನದಿ ತೀರದಲ್ಲಿ ಪತ್ತೆಯಾಗಿದೆ.

ಬಳ್ಳಾರಿ ಜಿಲ್ಲೆ ಸಿರಗುಪ್ಪ ತಾಲೂಕಿನ ರಾವಿಹಾಳ ಗ್ರಾಮದ ವಿನೋದ್‌ ಕುಮಾರ್‌ (25) ಗರ್ಜಿಹಳ್ಳದಲ್ಲಿ ಕೊಚ್ಚಿ ಹೋಗಿದ್ದಾನೆ. ಕೃಷ್ಣಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಮದ ಬಾಲಕ ಸಂತೋಷ ಮೃತ ದೇಹ ಮುದುಗೋಟ ಗ್ರಾಮದ ಬಳಿ ಪತ್ತೆಯಾಗಿದೆ.

ಸವದತ್ತಿ ತಾಲೂಕು ಮುನವಳ್ಳಿ ಬಳಿ ಮಲಪ್ರಭಾ ನದಿಯಲ್ಲಿ ಆದಿಲ್‌ ಹುಸೇನ್‌ ಸಾಬ್‌(38) ಶವ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಮಳೆ ಕಡಿಮೆ ಯಾಗಿದ್ದರೂ ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಗೆ ಕೃಷ್ಣಾ ನದಿಗೆ ಅಪಾರ ಪ್ರಮಾಣ ನೀರು ಹರಿದು ಬರುತ್ತಿದ್ದು, ಚಿಕ್ಕೋಡಿ ಉಪವಿಭಾಗದ 6 ಸೇತುವೆ ಗಳು ಮುಳುಗಡೆಯಾಗಿವೆ. ನಿಪ್ಪಾಣಿ, ರಾಮ ದುರ್ಗ, ಮೂಡಲಗಿ, ಗೋಕಾಕ ತಾಲೂಕುಗಳಲ್ಲಿ ಭಾರೀ ಹಾನಿಯಾಗಿದೆ.

Advertisement

ಕೂಡಲಸಂಗಮ ದೇಗುಲ ಮತ್ತೆ ಜಲಾವೃತ
ಬಾಗಲಕೋಟೆ: ಐತಿಹಾಸಿಕ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಮಲಪ್ರಭಾ, ಕೃಷ್ಣಾ ಹಾಗೂ ಘಟಪ್ರಭಾ ನದಿ ನೀರಿನಿಂದ ಜಲಾವೃತಗೊಂಡಿದ್ದು, ದೇವಸ್ಥಾನದ ಭಕ್ತರ ಭೇಟಿ ಸ್ಥಗಿತಗೊಳಿಸಲಾಗಿದೆ. ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿ ಸಂಗಮಗೊಳ್ಳಲಿದ್ದು, ದೇವಸ್ಥಾನದ ಮೆಟ್ಟಿಲುಗಳು ನೀರಿನಲ್ಲಿ ಮುಳುಗಿವೆ. ದೇವಸ್ಥಾನದ ಒಳಗೆ ಸುಮಾರು ಎರಡು ಅಡಿಗೂ ಹೆಚ್ಚು ನೀರು ಬಂದಿದ್ದು, ಇಡೀ ದೇವಸ್ಥಾನದ ಸುತ್ತ ಅಪಾರ ನೀರು ಆವರಿಸಿಕೊಂಡಿದೆ.

109 ಗ್ರಾಮಗಳಲ್ಲಿ ನೆರೆ: ಬಾಗಲಕೋಟೆ ಜಿಲ್ಲೆಯಲ್ಲಿ 109 ಗ್ರಾಮಗಳು ಬಾಧಿತಗೊಂಡಿದ್ದು, 17 ಜಾನುವಾರುಗಳು ಮೃತಪಟ್ಟಿವೆ. 888 ಮನೆಗಳು ಬಿದ್ದಿದ್ದು, ಆರು ಪರಿಹಾರ ಕೇಂದ್ರ ತೆರೆಯಲಾಗಿದೆ. ಹುನಗುಂದ ತಾಲೂಕಿನ 3404 ಜನರಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ರಾಜೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next