Advertisement

ಜಲ ಆತಂಕ: ಲಕ್ಯಾ ಡ್ಯಾಂ ನೀರು ಗಗನ ಕುಸುಮ!

03:20 PM Mar 28, 2023 | Team Udayavani |

ಮಹಾನಗರ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಈ ಬಾರಿ ಮತ್ತೆ ಎದುರಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ, ತುಂಬೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕನಿಷ್ಠ ಮಟ್ಟಕ್ಕೆ ಇಳಿಯುವ ಆತಂಕ ಎದುರಾಗಿದೆ. ಪರ್ಯಾಯವಾಗಿ ಲಕ್ಯಾ ಅಣೆಕಟ್ಟಿನ ನೀರನ್ನು ಮಂಗಳೂರಿಗೆ ತರುವ ಬಹುದೊಡ್ಡ ಕನಸು ಈಗ ಗಗನಕುಸುಮವಾಗಿದೆ!

Advertisement

ಮಂಗಳೂರಿಗೆ ನೀರಿನ ಕೊರತೆ ಎದುರಾದಾಗ ಆಪತ್ಪಾಂಧವ ನಾಗಿ ಕಾಣಿಸಿಕೊಳ್ಳುತ್ತಿದ್ದುದು ಕುದುರೆಮುಖ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟು. ಆದರೆ ಲಕ್ಯಾಂ ಅಣೆಕಟ್ಟಿನಿಂದ ಗ್ರ್ಯಾವಿಟಿ (ಗುರುತ್ವಾಕರ್ಷಕ)ಯಲ್ಲಿ ನೀರು ಸರಬರಾಜು ಹೊರತುಪಡಿಸಿ, ಪಂಪಿಂಗ್‌ ಮಾಡಲು ಸುಪ್ರಿಂ ಕೋರ್ಟ್‌ ಅವಕಾಶ ನೀಡದ ಹಿನ್ನೆಲೆ ಹಾಗೂ ಡ್ಯಾಂನಿಂದ ಮಂಗಳೂರಿಗೆ ಇರುವ ಪೈಪ್‌ಲೈನ್‌ನಲ್ಲಿ ಹೂಳು ತುಂಬಿಕೊಂಡ ಕಾರಣ ಈ ಬಾರಿಯೂ  ಅಲ್ಲಿನ ನೀರು ಸಿಗುವುದು ಕಷ್ಟ.

ಕೆಲವು ವರ್ಷಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಸುರತ್ಕಲ್‌ಗೆ ಲಭ್ಯವಾಗಿದ್ದ ಲಕ್ಯಾ ಅಣೆಕಟ್ಟಿನ ನೀರನ್ನು ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಬಳಕೆ ಮಾಡುವ ಸಂಬಂಧ ಮಹಾನಗರ ಪಾಲಿಕೆಯು ಸುಪ್ರಿಂಕೋರ್ಟ್‌ ಗೆ ಅನುಮತಿ ಕೋರಿ ಮನವಿ ಸಲ್ಲಿಸಿತ್ತು. ಆದರೆ ಲಕ್ಯಾ ಅಣೆಕಟ್ಟಿನಿಂದ ನೀರನ್ನು ಗ್ರ್ಯಾವಿಟಿ (ಗುರುತ್ವ ಬಲ) ಮೂಲಕವಷ್ಟೇ ತರಬೇಕು ಹಾಗೂ ಪಂಪಿಂಗ್‌ ಮಾಡಲು ಅವಕಾಶ ನೀಡುವುದಿಲ್ಲ ಎಂದು ಸುಪ್ರಿಂ ಕೋರ್ಟ್‌ ತಿಳಿಸಿರುವ ಕಾರಣ ಆಶಾಭಾವ ಇಲ್ಲವಾಗಿದೆ.

ಪೈಪ್‌ನಲ್ಲಿ ಪಾಚಿ!
ಗ್ರ್ಯಾವಿಟಿ ಆಧಾರದಲ್ಲಿಯೇ ನೀರು ಹರಿಯುವುದರಿಂದ ಈ ನೀರು ಸುರತ್ಕಲ್‌ ವ್ಯಾಪ್ತಿಗೆ ತಲುಪುವಾಗ ಅದರ ಪ್ರಮಾಣ ಕಡಿಮೆಯಾಗಿರುತ್ತದೆ. ಯಾಕೆಂದರೆ, ಈ ಪೈಪ್‌ಗ್ಳು ಹಳೆಯದ್ದಾಗಿರುವುದರಿಂದ ನೀರು ಸರಬರಾಜಾಗುವ ಧಾರಣಾ ಸಾಮರ್ಥ್ಯ ಕುಂಠಿತವಾಗುತ್ತದೆ. ಜತೆಗೆ ಪೈಪ್‌ನ ಒಳಗೆ ಪಾಚಿ, ಕೆಲವು ಕಡೆ ಹೂಳು ತುಂಬಿಕೊಂಡು ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ.

2011ರ ಕನಸು!
ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆಯ ಏಕೈಕ ಮೂಲ ತುಂಬೆಯಲ್ಲಿ 2011ರ ಎಪ್ರಿಲ್‌ನಲ್ಲಿ ನೀರು ಸಂಗ್ರಹ ಕಡಿಮೆಯಾಗಿ ಕೊರತೆಯ ಭೀತಿ ಆವರಿಸಿದಾಗ ಲಕ್ಯಾ ಅಣೆಕಟ್ಟಿನಿಂದ ನೀರು ಪಡೆಯುವ ಬಗ್ಗೆ ಆಗಿನ ಶಾಸಕ ಎನ್‌. ಯೋಗೀಶ್‌ ಭಟ್‌ ಪ್ರಸ್ತಾವನೆ ಮಂಡಿಸಿದ್ದರು. ಈ ಕುರಿತಂತೆ ಪಾಲಿಕೆಯಲ್ಲಿ ನಿರ್ಣಯ ಕೈಗೊಂಡು ಇದರ ಪ್ರತಿಯೊಂದಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಅನುಮತಿಗಾಗಿ ಪಾಲಿಕೆ ಅರ್ಜಿ ಸಲ್ಲಿಸಿತ್ತು. ಕುದುರೆಮುಖ ಗಣಿಗಾರಿಕೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಗಣಿಗಾರಿಕೆ ಪ್ರದೇಶದಲ್ಲಿರುವ ಲಕ್ಯಾ ಅಣೆಕಟ್ಟುನಿಂದ ನೀರು ಪಡೆಯುವುದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ಮಂಗಳೂರು ಪಾಲಿಕೆ ಕೂಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ನೀರು ತರಲು ಅನುಮತಿ ಕೋರಿತ್ತು. ಪಣಂಬೂರಿನಿಂದ ಈಗಾಗಲೇ ಇರುವ ನೀರು ಸರಬರಾಜು ಕೊಳವೆಗೆ ಲಿಂಕ್‌ ಮಾಡಿ ನೀರು ಸಂಗ್ರಹ ಸ್ಥಾವರಗಳಿಗೆ ತರುವ ಪ್ರಸ್ತಾವನೆ ಇದಾಗಿತ್ತು.

Advertisement

ಲಕ್ಯಾಡ್ಯಾಂ ನೀರು ಕಾರ್ಯಸಾಧುವಲ್ಲ
ಲಕ್ಯಾ ಡ್ಯಾಂನ ನೀರನ್ನು ಬಳಕೆ ಮಾಡುವ ಬಗ್ಗೆ ಈ ಹಿಂದೆ ಪಾಲಿಕೆ ಯೋಚನೆ ಮಾಡಿತ್ತು. ಆದರೆ ಇದಕ್ಕೆ ಕಾನೂನಾತ್ಮಕ ತೊಡಕು ಇರುವುದರಿಂದ ಹಾಗೂ ಪೈಪ್‌ಲೈನ್‌ನಲ್ಲಿ ಹೂಳು ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಇದನ್ನು ಉಪಯೋಗಿಸಲು ಕಷ್ಟ ಸಾಧ್ಯ. ನೀರು ಲಭಿಸಿದರೂ ಅದನ್ನು ಶುದ್ಧೀಕರಿಸುವ ಪ್ರಕ್ರಿಯೆ ಪ್ರತ್ಯೇಕ ಆಗಬೇಕಾದ ಕಾರಣದಿಂದ ಸದ್ಯಕ್ಕೆ ಇದು ಕಾರ್ಯಸಾಧುವಲ್ಲ.
– ಪ್ರೇಮಾನಂದ ಶೆಟ್ಟಿ, ಮುಖ್ಯಸಚೇತಕರು,
ಮಂಗಳೂರು ಪಾಲಿಕ

1979-1999ರ ಲಕ್ಯಾ ಅಣೆಕಟ್ಟು
ಕುದುರೆಮುಖ ಗಣಿಗಾರಿಕೆ ಪ್ರದೇಶ ವ್ಯಾಪ್ತಿಯಲ್ಲಿರುವ ಲಕ್ಯಾದಲ್ಲಿ ಲಕ್ಯಾ ಅಣೆಕಟ್ಟು ಇದೆ. ಒಟ್ಟು 2 ಹಂತಗಳಲ್ಲಿ ಇದು ನಿರ್ಮಾಣಗೊಂಡಿತ್ತು. ಪ್ರಥಮ ಹಂತವನ್ನು 1979 ಮೇ 11ರಂದು ಆಗಿನ ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾಗಿದ್ದ ಬಿಜು ಪಟ್ನಾಯಕ್‌ ಉದ್ಘಾಟಿಸಿದ್ದರು. 2ನೇ ಹಂತವನ್ನು 1999ರ ಫೆ. 2ರಂದು ಕೇಂದ್ರ ಉಕ್ಕು ಮತ್ತು ಗಣಿ ಸಚಿವರಾಗಿದ್ದ ನವೀನ್‌ ಪಟ್ನಾಯಕ್‌ ಉದ್ಘಾಟಿಸಿದ್ದರು. ಹೊಸದಿಲ್ಲಿಯ ಜಯಪ್ರಕಾಶ್‌ ಇಂಡಸ್ಟ್ರೀಸ್‌ ಇದನ್ನು ನಿರ್ಮಿಸಿತ್ತು. 1,048 ಮೀಟರ್‌ ಉದ್ದ, 100 ಮೀಟರ್‌ ಎತ್ತರವಿರುವ ಲಕ್ಯಾ ಅಣೆಕಟ್ಟಿನ 254 ಚ.ಘ.ಮೀ. ನೀರು ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. 6.05 ಚದರ ಕಿ.ಮೀ. ವಿಸ್ತೀರ್ಣವಿದ್ದು 18.20 ಚದರ ಕಿಲೋ ಮೀಟರ್‌ ಜಲಾನಯನ ಪ್ರದೇಶವನ್ನು ಹೊಂದಿದೆ. ಲಕ್ಯಾ ಅಣೆಕಟ್ಟಿನಿಂದ ಪಣಂಬೂರಿನ ಕುದುರೆಮುಖ ಕಂಪೆನಿ ಪ್ರದೇಶಕ್ಕೆ 2.3 ಎಂಜಿಡಿ ನೀರು ಸರಬರಾಜು ಆಗುತ್ತಿದೆ. ದಿನವೊಂದಕ್ಕೆ 6 ಎಂಜಿಡಿ ನೀರು ತೆಗೆಯಲೂ ಅವಕಾಶವಿದೆ.

ತುಂಬೆ: 4.80 ಮೀ.ಗೆ ಇಳಿದ ನೀರಿನ ಮಟ್ಟ
ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಮಟ್ಟ ಮಾ. 27ರಂದು 4.80 ಮೀ.ಗೆ ಇಳಿಕೆಯಾಗಿದೆ. ಕಳೆದ ವರ್ಷ ಮಾ. 27ರಂದು 6 ಮೀ., 2021ರಲ್ಲಿ 5.78 ಮೀ., 2020ರಲ್ಲಿ 5.50 ಮೀ., 2019ರಲ್ಲಿ 5.84 ಮೀ., 2018ರಲ್ಲಿ 5.18 ಮೀ. ನೀರು ಸಂಗ್ರಹವಿತ್ತು. ಎಎಂಆರ್‌ ಡ್ಯಾನಿಂದ ಎಪ್ರಿಲ್‌ ಮೊದಲ ವಾರದಲ್ಲಿ ನೀರು ಹರಿಸಿ ತುಂಬೆ ಡ್ಯಾಂನಲ್ಲಿ 6 ಮೀ. ಕಾಯ್ದುಕೊಳ್ಳಲು ಉದ್ದೇಶಿಸಲಾಗಿದೆ. ಈ ವೇಳೆಗೆ ಮಳೆಯಾಗದಿದ್ದರೆ, ಮಂಗಳೂರಿಗೆ ನೀರಿನ ಕೊರತೆ ಬಹುವಾಗಿ ಕಾಡುವ
ಆತಂಕವೂ ಇದೆ.

*ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next