ವಾಡಿ: ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ಮತ್ತೆ ಅಬ್ಬರಿಸಲು ಆರಂಭಿಸಿರುವ ಮುಂಗಾರು ಮಳೆ ಆರ್ಭಟದಿಂದ ಈ ಭಾಗದ ಕಲ್ಲು ಗಣಿ ಸೇರಿದಂತೆ ಓಣಿ, ಕೇರಿಗಳು ಜಲಾವೃತವಾಗಿವೆ.
ಸತತ ಮಳೆಯಿಂದ ಗಣಿ ಕಾರ್ಮಿಕರ ದಿನಗೂಲಿಗೆ ಪೆಟ್ಟು ಬಿದ್ದರೆ, ಮನೆಗೆ ನೀರು ನುಗ್ಗಿದ ಬಡಾವಣೆಗಳ ಜನರ ಬದುಕು ದುಸ್ತರವಾಗಿದೆ. ಮಳೆ ಹೊಡೆತಕ್ಕೆ ತೊಗರಿ ಫಸಲು ನಾಟಿಯಾಗದೇ ಕೊಳೆತು ಹೋಗಿದ್ದು, ಮರು ಬಿತ್ತನೆಗೂ ರೈತರು ಸಿದ್ಧರಾಗಿದ್ದಾರೆ. ತುಸು ಭರವಸೆ ನೀಡಿದ್ದ ಹೆಸರು ಮಳೆಗೆ ಕೊಚ್ಚಿಕೊಂಡು ಹೋಗುತ್ತಿದೆ. ಬಿಡುವಿಲ್ಲದೇ ಔಷಧ ಸಿಂಪಡಣೆಯಲ್ಲಿ ತೊಡಗಿರುವ ಕೃಷಿಕರು ಬೆಳೆ ರಕ್ಷಣೆಗೆ ಪರದಾಡುತ್ತಿದ್ದಾರೆ.
ದುರಂತ ಎಂದರೆ ಈಗ ಮತ್ತೆ ಸತತವಾಗಿ ಮಳೆ ಆಗುತ್ತಿರುವುದರಿಂದ ಹೊಲಗಳಲ್ಲಿ ನೀರು ಶೇಖರಣೆಯಾಗಿ ಬೆಳೆಗೆ ಧಕ್ಕೆಯಾಗುತ್ತಿದೆ. ಕಾರ್ಮೋಡದ ಒಡಲಿನಿಂದ ಸುರಿಯುತ್ತಿರುವ ಮಳೆಗೆ ಈ ಭಾಗದ ಸುಮಾರು 200ಕ್ಕೂ ಹೆಚ್ಚು ಕಲ್ಲು ಗಣಿಗಳಲ್ಲಿ ಭಾರಿ ಪ್ರಮಾಣದ ನೀರು ಜಮಾವಣೆಯಾಗಿದ್ದು, ಮಿನಿ ಜಲಪಾತಗಳೇ ಸೃಷ್ಟಿಯಾಗಿವೆ. ಹಾಸುಗಲ್ಲುಗಳ ಸಾಗಾಣಿಕೆ ಸಂಪೂರ್ಣ ಸ್ಥಗಿತವಾಗಿದೆ.
ಮುಂಬೈ, ಪುಣೆ, ಸೂರತ್, ಸಾಂಗ್ಲಿ, ಸೊಲ್ಲಾಪುರ ಸೇರಿದಂತೆ ವಿವಿಧ ರಾಜ್ಯಗಳಿಗೆ ರಫ್ತು ಆಗುತ್ತಿದ್ದ ಹಾಸುಗಲ್ಲಿನ ಪರ್ಷಿ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಗಣಿಗಾರಿಕೆ ಸ್ಥಗಿತವಾಗಿದ್ದರಿಂದ ಅಂದಾಜು ಎರಡು ಸಾವಿರ ಗಣಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ.
ಭಾರತ ಕ್ವಾರಿ ಜಲಾವೃತ: ವಾಡಿ ಪುರಸಭೆ ವ್ಯಾಪ್ತಿಯ ವಾರ್ಡ್ 23 ಮತ್ತು ರಾವೂರ ಗ್ರಾಮದ ನಡುವಿನ ಭಾರತ ಕ್ವಾರಿ ಗಣಿ ಉದ್ಯಮದ ಪರಿಸದಲ್ಲಿರುವ ಭಾರತ ಕ್ವಾರಿ ಬಡಾವಣೆಗೆ ಕಲ್ಲು ಗಣಿಗಳಿಂದ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದು, ಇಡೀ ಬಡಾವಣೆ ಜನರು ಜಲ ಸಂಕಟ ಅನುಭವಿಸುತ್ತಿದ್ದಾರೆ. ಮಳೆಯಿಂದ ಗಣಿಗಳು ಭರ್ತಿಯಾಗಿ ನೀರು ಬಡಾವಣೆಗೆ ನುಗ್ಗುತ್ತಿದೆ. ಇದರಿಂದ ಬಡ ಕೂಲಿ ಕಾರ್ಮಿಕರ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿರುವುದು ಕಂಡು ಬಂದಿದೆ. ಯಾವೊಬ್ಬ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ನಮ್ಮ ಕಷ್ಟ ಕೇಳಲು ಓಣಿಗೆ ಬಂದಿಲ್ಲ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.