ಮುಂಬೈ: ವಾಣಿಜ್ಯ ನಗರಿ ಮುಂಬಯಿಯ ಬೀದಿಯಲ್ಲಿ ಲೈವ್ ವಿಡಿಯೋ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಯುವತಿಗೆ (ಯೂಟ್ಯೂಬರ್) ಕಿರುಕುಳ ನೀಡಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ನೆಟ್ಟಿಗರು ತೀಕ್ಷ್ಣ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ವಂದೇ ಭಾರತ್’ ಸಂಚಾರ; ಚೆನ್ನೈ-ಬೆಂಗಳೂರು-ಮೈಸೂರು ಶತಾಬ್ದಿ ಎಕ್ಸ್‌ಪ್ರೆಸ್ ರದ್ದುಗೊಳಿಸುವ ಚಿಂತನೆ
ಮುಂಬಯಿಯ ರಸ್ತೆಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದ ದಕ್ಷಿಣ ಕೊರಿಯಾದ ಯುವತಿಗೆ ಇಬ್ಬರು ಯುವಕರು ಕೈಹಿಡಿದೆಳೆದು ಕಿರುಕುಳ ನೀಡುತ್ತಿರುವ ದೃಶ್ಯ ವೈರಲ್ ವಿಡಿಯೋದಲ್ಲಿ ದಾಖಲಾಗಿದೆ.
ಬುಧವಾರ ರಾತ್ರಿ 8ಗಂಟೆಗೆ ಮುಂಬಯಿಯ ಖಾರ್ ಪ್ರದೇಶದಲ್ಲಿ ದಕ್ಷಿಣ ಕೊರಿಯಾದ ಯುವತಿ ಲೈವ್ ಸ್ಟ್ರೀಮ್ ಮಾಡುತ್ತಿದ್ದಾಗ ಇಬ್ಬರು ಯುವಕರು ಆಕೆಯ ಬಳಿ ಬಂದಾಗ ಅದರಲ್ಲೊಬ್ಬಾತ ಯುವತಿಯ ಕೈಹಿಡಿದು ಬಲವಂತವಾಗಿ ಎಳೆದೊಯ್ದಿದ್ದ. ಆದರೆ ಆಕೆ ತೀವ್ರ ವಿರೋಧ ವ್ಯಕ್ತಪಡಿಸಿ ಮುಂದೆ ನಡೆದು ಹೋಗುತ್ತಿರುವ ದೃಶ್ಯದ ವಿಡಿಯೋವನ್ನು ಟ್ವೀಟರ್ ಬಳಕೆದಾರರೊಬ್ಬರು ಶೇರ್ ಮಾಡಿರುವುದಾಗಿ ವರದಿ ತಿಳಿಸಿದೆ.
ಆಕೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲೂ ಇಬ್ಬರು ಯುವಕರು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದು, ಅರೆಬರೆ ಇಂಗ್ಲಿಷ್ ಭಾಷೆಯಲ್ಲಿ ಲಿಫ್ಟ್ ಕೊಡುವುದಾಗಿ ಆಫರ್ ನೀಡಿದ್ದರು. ಆದರೆ ಆಕೆ ತನಗೇನೂ ಸಹಾಯ ಬೇಕಾಗಿಲ್ಲ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಇಬ್ಬರ ಬಂಧನ:
ದಕ್ಷಿಣ ಕೊರಿಯಾ ಯುವತಿಗೆ ಕಿರುಕುಳ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಮುಂಬಯಿ ಪೊಲೀಸರು ತನಿಖೆ ನಡೆಸಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಿ, ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿರುವುದಾಗಿ ವರದಿ ತಿಳಿಸಿದೆ.