ದೋಹಾ: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಶುಕ್ರವಾರದಿಂದ ಕತಾರ್ ನ ದೋಹಾದಲ್ಲಿ ಆರಂಭವಾಗಿದೆ. ಮೂರು ಲೆಜೆಂಡ್ಸ್ ತಂಡಗಳನ್ನು ಒಳಗೊಂಡಿರುವ ಲೀಗ್ ನ ಆರಂಭಿಕ ಪಂದ್ಯದಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ಹಾಗೂ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡಗಳು ಮುಖಾಮುಖಿಯಾಗಿದೆ.
12 ಓವರ್ ನಲ್ಲಿ ಅಬ್ದುಲ್ ರಜಾಕ್ ಎಸೆದ ಎಸೆತ ಗೌತಮ್ ಗಂಭೀರ್ ಅವರ ಹೆಲ್ಮೆಟ್ ಗೆ ಬಡಿಯಿತು. ಕೂಡಲೇ ಶಾಹಿದ್ ಅಫ್ರಿದಿ ಗಂಭೀರ್ ಅವರ ಬಳಿ ತೆರಳಿ ಅವರ ಹೆಗಲು ಮುಟ್ಟಿ ಏಟಾಯಿತೇ? ಎಂದು ಕೇಳಿ ಅವರನ್ನು ವಿಚಾರಿಸಿದ್ದಾರೆ.
ಈ ಕ್ಷಣ ಮಾತ್ರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರಣ ಕ್ರಿಕೆಟ್ ಲೋಕದಲ್ಲಿ ಗಂಭೀರ್ – ಅಫ್ರಿದಿ ಅವರ ಬಗ್ಗೆ ಅನೇಕ ವಿವಾದತ್ಮಕ ವಿಚಾರಗಳು ನಡೆದಿದೆ. 2007 ರಲ್ಲಿ ಭಾರತ – ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಗಂಭೀರ್ – ಅಫ್ರಿದಿ ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇದಾದ ಬಳಿಕ ಯಾವಾಗೆಲ್ಲ ಗಂಭೀರ್ – ಅಫ್ರಿದಿ ಎದುರಾದರೆ ಮೈದಾನದಲ್ಲಿ ಕೆಲ ಹೊತ್ತು ಕಿಚ್ಚು ಏಳುವ ಸನ್ನಿವೇಶಗಳು ಆಗುತ್ತಿತ್ತು.
ನಿನ್ನೆ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟಾಸ್ ನ ಸಂದರ್ಭದಲ್ಲಿ ಗಂಭೀರ್ ಅಫ್ರಿದಿ ಅವರಿಗೆ ಹಸ್ತಲಾಘವ ಮಾಡುವ ವೇಳೆ ಕೊಟ್ಟ ರಿಯಕ್ಷನ್ ಕೂಡ ವೈರಲ್ ಆಗಿದೆ.
ಈ ಮುಖಾಮುಖಿಯಲ್ಲಿ ಅಫ್ರಿದಿ ಅವರ ತಂಡ 9 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಪಂದ್ಯ ರೋಮಂಚನಕಾರಿಯಾಗಿ ಸಾಗಿತ್ತು. ಮೊದಲು ಏಷ್ಯಾ ಲಯನ್ಸ್ 20 ಓವರ್ ನಲ್ಲಿ 165 ರನ್ ಗಳಿಸಿತು. ಸವಾಲು ಪಡೆದು ಬ್ಯಾಟಿಂಗ್ ಗಳಿದ ಇಂಡಿಯಾ ಮಹಾರಾಜಸ್ ರಾಬಿನ್ ಉತ್ತಪ್ಪ, ಮುರಳಿ ವಿಜಯ್, ಯೂಸೂಫ್ ಪಠಾಣ್, ಕೈಫ್ ನಂತಹ ಅನುಭವಿ ಆಟಗಾರರನ್ನು ಬಹುಬೇಗನೇ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಆದರೆ ನಾಯಕ ಗಂಭೀರ್ 39 ಎಸೆತಗಳಲ್ಲಿ 54 ರನ್ ಗಳನ್ನು ಸಿಡಿಸಿ ತಂಡಕ್ಕೆ ಚೇತರಿಕೆಯ ಆಟವನ್ನು ನೀಡಿದರೂ ಅವರ ಜೊತೆಯಾಗಿ ಬೇರೊಬ್ಬ ಆಟಗಾರ ನಿಲ್ಲದೇ ತಂಡ 8 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ ಸೋಲಿಗೆ ಶರಣಾಯಿತು.