ಗುಜರಾತ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್‌ನ ಭಾವನಗರದಲ್ಲಿ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಸಮಾಜಕ್ಕಾಗಿ ಕೊಡುಗೆ ನೀಡುವಂತೆ ದಂಪತಿಗಳಿಗೆ ಕರೆ ನೀಡಿದರು.
ಇಲ್ಲಿನ ಜವಾಹರ್ ಮೈದಾನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು, ಈ ವೇಳೆ ತಂದೆಯನ್ನು ಕಳೆದುಕೊಂಡ 551 ಯುವತಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ಸಂಭ್ರಮದ ಕ್ಷಣಕ್ಕೆ ಪ್ರಧಾನಿ ಮೋದಿ ಸಾಕ್ಷಿಯಾದರು.
ನವಜೋಡಿಗಳಿಗೆ ಶುಭ ಹಾರೈಸಿದ ಪ್ರಧಾನಿ ಸಾಮೂಹಿಕ ವಿವಾಹ ಈ ಸಂದರ್ಭದಲ್ಲಿ, ಮನೆಗೆ ಬಂದ ನಂತರ ಸಂಬಂಧಿಕರ ಒತ್ತಡದಲ್ಲಿ ಪ್ರತ್ಯೇಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿ ದುಂದುವೆಚ್ಚ ಮಾಡಬೇಡಿ ಬದಲಾಗಿ ಆ ಹಣವನ್ನು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಸಂಗ್ರಹಿಸಿಡಿ ಎಂದು ಸಲಹೆ ನೀಡಿದ್ದಾರೆ.
“ಗುಜರಾತ್ ಜನತೆ ಕ್ರಮೇಣ ಸಾಮೂಹಿಕ ವಿವಾಹದ ಈ ಪದ್ಧತಿಯನ್ನು ಇಷ್ಟಪಡುತ್ತಿದ್ದಾರೆ. ಮೊದಲು, ಜನರು ಕೇವಲ ಪ್ರದರ್ಶನಕ್ಕಾಗಿ ಅದ್ಧೂರಿ ಸಮಾರಂಭವನ್ನು ಆಯೋಜಿಸಲು ಹಣವನ್ನು ಸಾಲವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ, ಜನರು ಜಾಗೃತರಾಗಿದ್ದಾರೆ. ಅವರು ಈಗ ಸಾಮೂಹಿಕ ವಿವಾಹ ಕಾರ್ಯಕ್ರಮಗಳತ್ತ ಮುಖ ಮಾಡಿದ್ದಾರೆ,” ಎಂದು ಪ್ರಧಾನಿ ಮೋದಿ ಹೇಳಿದರು.