ಕಲಬುರಗಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಜಿಲ್ಲೆಯ ರೆಸಾರ್ಟ್ ಮತ್ತು ಹೋಟೆಲ್‌ಗಳಲ್ಲಿ ನಡೆಯಬಹುದಾದ ಚಟುವಟಿಕೆಗಳ ಮೇಲೆ ನಿಗಾ ಇರಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ವಾಸಿರೆಡ್ಡಿ ವಿಜಯಾ ಜ್ಯೋತ್ಸ್ನಾ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಕಲಬುರಗಿ-ಯಾದಗಿರಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುವ ಚುನಾವಣೆ ಕುರಿತಂತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರೆಸಾರ್ಟ್ ಮತ್ತು ಹೋಟೆಲ್‌ಗಳಲ್ಲಿ ಸ್ಥಳೀಯ ಸಂಸ್ಥೆಗಳ ಮತದಾರರನ್ನು ಇರಿಸಿ ಕುದುರೆ ವ್ಯಾಪಾರ ರೀತಿಯ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಇರುತ್ತದೆ. ಇದನ್ನು ತಡೆಯಬೇಕೆಂದು ಸೂಚಿಸಿದರು.
ಅಬಕಾರಿ ಇಲಾಖೆ ಡಿವೈಎಸ್‌ಪಿ ಇನಾಮದಾರ್ ಮಾತನಾಡಿ, ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಎರಡು ತಂಡ ಹಾಗೂ ತಾಲೂಕು ಮಟ್ಟದಲ್ಲಿ ಏಳು ಅಬಕಾರಿ ತಂಡ ರಚಿಸಲಾಗಿದೆ. ಕಳೆದ ಏಳು ದಿನಗಳಲ್ಲಿ 113.880 ಲೀಟರ್ ದೇಶಿ ಮದ್ಯ, 96.320 ಲೀಟರ್ ಬೀಯರ್, 30 ಲೀಟರ್ ತಾಡಿ, 15 ಲೀಟರ್ ಕಳ್ಳಭಟ್ಟಿ, ಬೆಲ್ಲದಕೊಳೆ 100 ಲೀಟರ್, 4 ವಾಹನ ಸೇರಿ 2,20,234 ರೂ ಮೊತ್ತದ ಅಕ್ರಮ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಘೋರ ಕೇಸ್ 12, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ 28 ಕೇಸ್, ಅವಧಿ ಮೀರಿ ಅಂಗಡಿ ತೆರೆದು ಮದ್ಯ ಮಾರಾಟ ಮಾಡಿದ ಸಂಬಂಧ 17 ಕೇಸ್ ಹಾಕಲಾಗಿದ್ದು ಒಟ್ಟು 42 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಅಬಕಾರಿ ತಂಡಗಳು ಇನ್ನಷ್ಟು ಚುರುಕಾಗಿ ತಪಾಸಣೆ ಕೈಗೊಳ್ಳುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಮದ್ಯ ಪ್ರಕರಣ ಪತ್ತೆ ಹಚ್ಚಬೇಕು ಎಂದರು.
ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಜಾಹೀರಾತು, ಕಾಸಿಗಾಗಿ ಸುದ್ದಿ ಮುಂತಾದವುಗಳ ಮೇಲೆ ನಿಗಾವಹಿಸಬೇಕು. ಲೀಡ್ ಬ್ಯಾಂಕ್‌ಗಳು ಹೆಚ್ಚಿನ ಮೊತ್ತದ ಹಣ ವಹಿವಾಟು ಸಂಬಂಧ ನಿತ್ಯ ವರದಿ ನೀಡಬೇಕು ಎಂದು ನಿರ್ದೇಶಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ| ದಿಲೀಷ್ ಸಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಡಿಸಿಪಿ ಅಡ್ಮೂರು ಶ್ರೀನಿವಾಸುಲು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಪಿ. ನಂದಗಿರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಜಿ.ಬಿ. ಸಿದ್ದೇಶ್ವರಪ್ಪ ಇದ್ದರು.