ಕೋಲಾರ: ಜಿಲ್ಲೆಗೆ ಏ.27 ರಂದು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ನರಸಾಪುರ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿರುವ ನರೇಗಾ ಕಾಮಗಾರಿಗಳನ್ನು ಜಿಪಂ ಸಿಇಒ ಎಚ್.ವಿ.ದರ್ಶನ್ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೋವಿಡ್ ಲಾಕ್‌ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕೂಲಿ
ಕಾರ್ಮಿಕರಿಗೆ ಕೆಲಸ ನೀಡುವ ಉದ್ದೇಶದಿಂದ ನರೇಗಾದಡಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಬೇಕಿದೆ. ಕೆರೆ, ರಾಜಕಾಲುವೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ವ್ಯವಸ್ಥೆ: ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಮಂದಿ ಉದ್ಯೋಗವಿಲ್ಲದೆ ಉಳಿದುಕೊಂಡಿದ್ದು, ಅಂತಹವರನ್ನು ಗುರುತಿಸಿ ಕೂಲಿ ಕೆಲಸವನ್ನು ಕಲ್ಪಿಸಿಕೊಡಬೇಕು. ಕೆಲಸದ ವೇಳೆ ಅವರಿಗೆ ಮಾಸ್ಕ್ಗಳು, ಕುಡಿಯುವ ನೀರಿನ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಬೇಕು ಎಂದು ಸೂಚಿಸಿದರು.
ಪಿಡಿಒ ಮಹೇಶ್‌ಕುಮಾರ್ ಮಾತನಾಡಿ, ಈ ಸಾಲಿನಲ್ಲಿ ರಸ್ತೆ, ಕಾಲುವೆ, ದನದದೊಡ್ಡಿ ಮತ್ತು ಮನೆಗಳ ನಿರ್ಮಾಣ ಸೇರಿ 4 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಒಟ್ಟು 2000 ಮಾನವ ಸೃಜಿಸಲಾಗಿದ್ದು, ಇನ್ನೂ ಹೆಚ್ಚಿನ ಕಾಮಗಾರಿ ಆರಂಭಿಸಿ ಕೂಲಿಕಾರ್ಮಿಕರನ್ನು ಪಡೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ನರಸಾಪುರ ಗ್ರಾಪಂ ಅಧ್ಯಕ್ಷೆ ಶೈಲಾರಾಜ್, ಗ್ರಾಪಂ ಸದಸ್ಯರಾದ ರಾಜಣ್ಣ, ನಟರಾಜ್, ನರಸಾಪುರ ಎಸ್‌ಎಫ್ ಎಸ್‌ಸಿ ಸೊಸೈಟಿ ಅಧ್ಯಕ್ಷ ಮುನಿರಾಜು, ಜಿಪಂ ಸಹಾಯಕ ಕಾರ್ಯದರ್ಶಿ ವೆಂಕಟಾಚಲಪತಿ, ತಾಪಂ ಪ್ರಭಾರ ಸಹಾಯಕ ನಿರ್ದೇಶಕ ಅಶೋಕ್‌ಕುಮಾರ್, ಎಂಜಿನಿಯನರ್ ಕಿರಣ್, ಸಹಾಯಕ ಯೋಜನಾಧಿಕಾರಿ ವಸಂತ್‌ಕುಮಾರ್, ತಾಂತ್ರಿಕ ಸಂಯೋಜಕ ರಾಜು ಮತ್ತಿತರರು ಉಪಸ್ಥಿತರಿದ್ದರು.