ಲಕ್ನೋ: ಉತ್ತರಪ್ರದೇಶದ ಆರಿಫ್ ಖಾನ್ ಮತ್ತು ಸಾರಸ್ ಕ್ರೇನ್ ನಡುವಿನ ಸ್ನೇಹ ಜಗಜ್ಜಾಹೀರಾಗಿರುವುದು ಗೊತ್ತೇ ಇದೆ. ಇದೀಗ ಇಂಥದ್ದೇ ಮತ್ತೊಂದು ಮಾನವ – ಪಕ್ಷಿಯ ಒಡನಾಟ ಬೆಳಕಿಗೆ ಬಂದಿದೆ.
ಉತ್ತರಪ್ರದೇಶದ ಮೌ ಜಿಲ್ಲೆಯ ರಾಮಸಮುಜ್ ಯಾದವ್ ಅವರು ಸಾರಸ್ ಕ್ರೇನ್ ನೊಂದಿಗೆ ಆತ್ಮೀಯ ಒಡನಾಟವನ್ನು ಹೊಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಮ್ಮೆ ಹೊಲದಲ್ಲಿ ಕಾಣಲು ಸಿಕ್ಕಿದ್ದ ಸಾರಸ್ ಕ್ರೇನ್ ಗೆ ನಾನು ಆಹಾರವನ್ನು ಹಾಕಿದೆ. ಮತ್ತೊಂದು ದಿನ ಅದೇ ಸಾರಸ್ ಕ್ರೇನ್ ಮತ್ತೆ ನನ್ನ ಬಳಿ ಬಂದಿದೆ. ಆಗಲೂ ನಾನು ಇರಲಿ ಎಂದು ಆಹಾರವನ್ನು ಹಾಕಿದ್ದೇನೆ. ಆ ಬಳಿಕದಿಂದ ನಾನು ಎಲ್ಲಿ ಹೋದರು, ನನ್ನ ಹಿಂದೆಯೇ ಸಾರಸ್ ಕ್ರೇನ್ ಬರುತ್ತದೆ. ಗ್ರಾಮದಲ್ಲಿ ಆರಾಮವಾಗಿ ಪಕ್ಷಿ ಓಡಾಡುತ್ತದೆ ಎಂದು ಈ ಒಡನಾಟದ ಬಗ್ಗೆ ರಾಮಸಮುಜ್ ಯಾದವ್ ಹೇಳುತ್ತಾರೆ.
ರಾಮಸಮುಜ್ ಯಾದವ್ ಓಡಿದರೂ ಅವರ ಹಿಂದೆ ಸಾರಸ್ ಕ್ರೇನ್ ಓಡೋಡಿ ಬರುವುದನ್ನು ವಿಡಿಯೋದಲ್ಲಿ ನೋಡಬಹುದು.
ಉತ್ತರಪ್ರದೇಶದ ಆರಿಫ್ ಖಾನ್ ಮತ್ತು ಸಾರಸ್ ಕ್ರೇನ್ ನಡುವಿನ ಸ್ನೇಹ ಎಲ್ಲರಿಗೂ ಗೊತ್ತೇ ಇದೆ. ಖಾನ್ ಈ ಪಕ್ಷಿಯನ್ನು ಸಾಕುತ್ತಿರುವುದು ಸುದ್ದಿಯಾಗುತ್ತಿದ್ದಂತೆ, ಅರಣ್ಯ ಇಲಾಖೆ ಅಧಿಕಾರಿಗಳು ಸಾರಸ್ ಕ್ರೇನ್ ಅನ್ನು ತಮ್ಮ ವಶಕ್ಕೆ ಪಡೆದು, ಕಾನ್ಪುರ ಝೂನಲ್ಲಿ ಇಟ್ಟಿದ್ದಾರೆ. ಇತ್ತೀಚೆಗೆ ಖಾನ್ ಸಾರಸ್ – ಕ್ರೇನ್ ನ್ನು ಭೇಟಿಯಾಗುವ ವಿಡಿಯೋ ವೈರಲ್ ಆಗಿತ್ತು.