Advertisement

ವ್ಯರ್ಥವಾಗುತ್ತಿದೆ ಲಕ್ಷಾಂತರ ರೂ. ಮೌಲ್ಯದ ಸರಕಾರಿ ಆಸಿಪಾಸ್ತಿ 

11:07 AM Oct 27, 2018 | |

ಪುತ್ತೂರು: ಪುತ್ತೂರಿಗೆ ಯಾವುದೇ ಸರಕಾರಿ ವ್ಯವಸ್ಥೆಗಳು ಬರುವ ಸಂದರ್ಭದಲ್ಲಿ ಅದರ ಅನುಷ್ಠಾನಕ್ಕೆ ಜಾಗವಿಲ್ಲ ಎನ್ನುವ ಕೂಗು ಕಂದಾಯ ಇಲಾಖೆಯ ಕಡೆಯಿಂದ ಬರುತ್ತದೆ. ಆದರೆ ಇರುವ ಸರಕಾರಿ ಜಾಗ, ಕಟ್ಟಡ ನಿರುಪಯುಕ್ತವಾಗಿ ವ್ಯರ್ಥವಾಗುತ್ತಿದ್ದರೂ ಅದಕ್ಕೆ ಉತ್ತರವೇ ಇಲ್ಲಿಲ್ಲ!

Advertisement

ನಗರದ ದರ್ಬೆ ಸಮೀಪ ಸರಕಾರಿ ಅಧಿಕಾರಿಗಳ ವಸತಿ ಕಟ್ಟಡಗಳಿವೆ. ಇದರಲ್ಲಿ ನ್ಯಾಯಾಧೀಶರಿಗೆ ಸಂಬಂಧಪಟ್ಟ ವಸತಿ ಕಟ್ಟಡಗಳು ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ. ಲಕ್ಷಾಂತರ ರೂ. ವೆಚ್ಚದ ಸರಕಾರಿ ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಸೂಕ್ತ ನಿರ್ವಹಣೆಯ ಕೊರತೆಯಿಂದ ಕಟ್ಟಡಗಳು ಶಿಥಿಲಗೊಳ್ಳುತ್ತಿವೆ. ಜತೆಗೆ ಈ ಕಟ್ಟಡಗಳು ಈಗ ಅನೈತಿಕ ವ್ಯವಹಾರದ ಆಶ್ರಯತಾಣವಾಗಿ ಪರಿವರ್ತನೆಗೊಂಡಿದೆ.

ನ್ಯಾಯಾಧೀಶರ ವಸತಿಗೆ ಸಂಬಂಧಪಟ್ಟ ಈ ಮೂರು ವಸತಿ ಕಟ್ಟಡಗಳಲ್ಲಿ 2 ಕಟ್ಟಡಗಳನ್ನು 1966ರಲ್ಲಿ ನಿರ್ಮಿಸಲಾಗಿದ್ದರೆ, ಇನ್ನೊಂದು ಕಟ್ಟಡವನ್ನು 1980ರಲ್ಲಿ ನಿರ್ಮಿಸಲಾಗಿದೆ. ಸುಮಾರು 50 ಸೆಂಟ್ಸ್‌ ಜಾಗದಲ್ಲಿರುವ ಕಟ್ಟಡದಲ್ಲಿ ಸಾಕಷ್ಟು ಸ್ಥಳಾವಕಾಶಗಳಿವೆ. ಆದರೆ ನಿರ್ವಹಣೆಯ ಕೊರತೆಯಿಂದ ಕಟ್ಟಡ ಶಿಥಿಲಗೊಳ್ಳುತ್ತಿದೆ. ಕೆಲವು ಕಡೆ ಛಾವಣಿ ಕುಸಿತ ಉಂಟಾಗಿದೆ. ಆದರೆ ಬಳಸಿಕೊಳ್ಳುವ ಇರಾದೆ ಇದ್ದರೆ ಸಮರ್ಪಕಗೊಳಿಸುವಷ್ಟು ಸುಸ್ಥಿತಿಯಲ್ಲಿದೆ.

ಸರಕಾರಿ ಆಸ್ತಿ ವ್ಯರ್ಥವಾಗುತ್ತಿರುವ ಕುರಿತು ಚಿಕ್ಕಮುಟ್ನೂರು ಕಲಿಯುಗ ಸೇವಾ ಸಮಿತಿಯು ಕಳೆದ 4 ವರ್ಷಗಳಿಂದ ಹೋರಾಟವನ್ನೇ ನಡೆಸುತ್ತಿದೆ. ಕಟ್ಟಡವನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿ ಅದರ ಪ್ರಗತಿಯ ಕುರಿತು ಬೆನ್ನುಹತ್ತಿದೆ. ಆದರೆ ಯಾವುದೇ ರೀತಿಯ ಅಂತಿಮ ಫ‌ಲಿತಾಂಶ ದೊರೆತಿಲ್ಲ.

ಅನುಮೋದನೆ ಸಿಗದ ಸಮಸ್ಯೆ
2014 -15ರ ಸಾಲಿನಲ್ಲಿ ಈ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ 3 ಕೋಟಿ ರೂ. ಮಂಜೂರಾಗಿತ್ತು. ಆದರೆ ಪುತ್ತೂರಿನಲ್ಲಿ ಜಿಲ್ಲಾ ನ್ಯಾಯಾಲಯ ಆಗುವ ಸಂದರ್ಭದಲ್ಲಿ ಹೆಚ್ಚುವರಿ 8 ವಸತಿಗೃಹಗಳು ಬೇಕಾಗುವುದರಿಂದ ಅದಕ್ಕೆ ಮತ್ತೆ 6 ಕೋಟಿ ರೂ. ಆವಶ್ಯಕತೆ ಇದೆ ಎಂದು ಪ್ರಸ್ತಾವನೆ ಕಳುಹಿಸಲಾಗಿತ್ತು. ಬನ್ನೂರು ಆನೆಮಜಲಿನಲ್ಲಿ ಪ್ರತ್ಯೇಕ ನ್ಯಾಯಾಲಯ ಸಂಕೀರ್ಣವೂ ನಿರ್ಮಾಣವಾಗುವುದರಿಂದ 2017 -18ನೇ ಸಾಲಿನಲ್ಲಿ ಇಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣಕ್ಕೆ 5.35 ಕೋಟಿ ರೂ. ಪ್ರಸ್ತಾವನೆಯನ್ನು ಮತ್ತೆ ಕಳುಹಿಸಲಾಗಿದೆ.

Advertisement

ಪ್ಲ್ಯಾನ್‌ ಬದಲಾವಣೆ ಮಾಡಿರುವ ಕಾರಣದಿಂದ ಆಡಳಿತಾತ್ಮಕ ಅನುಮೋದನೆ ಲಭಿಸದೆ ಇನ್ನೂ ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಹಾಲಿ ಲೋಕೋಪಯೋಗಿ ಇಲಾಖೆಯ ಮೇಲಧಿಕಾರಿಗಳ ಕಡೆಯಿಂದ ಯಾವುದೇ ಸೂಚನೆಗಳು ಬಾರದಿರುವುದರಿಂದ ಮತ್ತು ಹೊಸದಾಗಿ ಅಭಿವೃದ್ಧಿ ಕಾರ್ಯಕ್ಕೆ ಅನುಮೋದನೆ ಸಿಗದೇ ಇರುವುದರಿಂದ ಹಳೆಯ ಕಟ್ಟಡವನ್ನು ತೆರವುಗೊಳಿ ಸಲು ಸಾಧ್ಯವಾಗಿಲ್ಲ ಎನ್ನುವುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮಾತು.

ಅನೈತಿಕ ಚಟುವಟಿಕೆಗಳ ತಾಣ!
ಕಟ್ಟಡಗಳು ಇರುವ ಅಷ್ಟೂ ಜಾಗದಲ್ಲಿ ವ್ಯಾಪಕ ಪೊದೆಗಳು ಬೆಳೆದಿವೆ. ನಿರ್ವಹಣೆ ಇಲ್ಲದೆ ಅನೈತಿಕ ವ್ಯವಹಾರಗಳನ್ನು ನಡೆಸುವವರಿಗೆ ಆಶ್ರಯ ತಾಣವಾಗಿ ಈ ಕಟ್ಟಡಗಳು ಪರಿವರ್ತನೆಗೊಂಡಿದ್ದು, ಕಟ್ಟಡಗಳ ಒಳಗೆ ಕಂಡುಬರುವ ವಸ್ತುಗಳು, ಗೋಡೆ ಬರಹಗಳು ಇದಕ್ಕೆ ಸಾಕ್ಷಿ. ಹೆದ್ದಾರಿಗೂ ಸಮೀಪದಲ್ಲೇ ಇರುವುದರಿಂದ ರಾತ್ರಿಯಾದ ಮೇಲೆ ಅನೈತಿಕ ವ್ಯವಹಾರಗಳನ್ನು ಮಾಡುವವರು ಇಲ್ಲಿ ಕಂಡು ಬರುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

 ಕ್ರಮಕ್ಕೆ ಸೂಚನೆ
ಸರಕಾರಿ ಕಟ್ಟಡ ವ್ಯರ್ಥವಾಗುತ್ತಿರುವ ಕುರಿತು ಗಮನಕ್ಕೆ ಬಂದಿಲ್ಲ. ಇಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್‌ ಇಲಾಖೆಗೆ ಸೂಚನೆ ನೀಡುತ್ತೇನೆ. ಹಳೆಯ ಕಟ್ಟಡವನ್ನು ಕೆಡವಲು ತತ್‌ಕ್ಷಣ ಪಿಡಬ್ಲ್ಯುಡಿ ಇಲಾಖೆಗೆ ಹಾಗೂ ಅದರ ಮೇಲಧಿಕಾರಿಗಳಿಗೆ ಪತ್ರ ಬರೆದು ಸೂಚಿಸಲಾಗುವುದು.
ಎಚ್‌.ಕೆ. ಕೃಷ್ಣಮೂರ್ತಿ
ಪುತ್ತೂರು ಸಹಾಯಕ ಕಮಿಷನರ್‌

ನಿರಂತರ ಒತ್ತಡ
ಸರಕಾರ ವ್ಯವಸ್ಥೆ ವ್ಯರ್ಥವಾಗುತ್ತಿದೆ. ಹೊಸ ಕಟ್ಟಡ ಮಂಜೂರಾದ ಬಳಿಕ ಕಟ್ಟಡವನ್ನು ತೆಗೆಯುತ್ತೇವೆ. ಅನುದಾನ ಬಿಡುಗಡೆಯಾಗುತ್ತಿಲ್ಲ ಎಂದು ಪಿಡಬ್ಲ್ಯುಡಿ ಇಲಾಖೆಯವರು ಹೇಳುತ್ತಿದ್ದಾರೆ. ಹಾಲಿ ಆನೆಮಜಲುನಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುತ್ತಿರುವುದರಿಂದ ನ್ಯಾಯಾಧೀಶರಿಗೆ ಸಂಬಂಧಪಟ್ಟಂತೆ ಆನೆಮಜಲಿನಲ್ಲಿ 3 ಹಾಗೂ ದರ್ಬೆಯಲ್ಲಿ 5 ವಸತಿ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಹೋಗಿದೆ. ಆಡಳಿತಾತ್ಮಕ ಅನುಮೋದನೆ ಹಾಗೂ ಜಾರಿಗೆ ಸರಕಾರದ ಮಟ್ಟದಲ್ಲಿ ನಿರಂತರ ಒತ್ತಡ ಹಾಕುತ್ತಿದ್ದೇವೆ.
– ಸಂಪತ್‌ ಕುಮಾರ್‌ ಜೈನ್‌ ಕಲಿಯುಗ ಸೇವಾ ಸಮಿತಿ, ಚಿಕ್ಕಮುಡ್ನೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next