Advertisement

ಬೊಳ್ಮಲೆ: ಪಂಜ ಹೊಳೆ ನೀರಿಗೆ ನೆಲೆ, ಸಮೃದ್ಧ ಬೆಳೆ

03:00 PM Jan 12, 2018 | Team Udayavani |

ಸುಬ್ರಹ್ಮಣ್ಯ: ಕಡು ಬೇಸಗೆಯೇ ಇದ್ದರೂ ಇಲ್ಲಿನ ಮಂದಿಗೆ ನೀರಿನ ಸಮಸ್ಯೆ ಬಾರದು. ಅಷ್ಟು ಮಾತ್ರವಲ್ಲ, ಕೃಷಿಗೆ
ಬಳಕೆಯಾಗಿ ನೂರಾರು ಎಕ್ರೆ ಭೂಮಿಯ ಫ‌ಸಲು ನಳನಳಿಸುತ್ತ ಸಮೃದ್ಧವಾಗಿ ಕಾಣುತ್ತದೆ. ಇದೆಲ್ಲ ಸಾಧ್ಯವಾಗಿದ್ದು ಅಂತರ್ಜಲ ವೃದ್ಧಿ ಕಾರ್ಯಕ್ರಮ ಅನುಷ್ಠಾನದಿಂದ.

Advertisement

ಪಂಜ -ಸುಬ್ರಹ್ಮಣ್ಯ ರಸ್ತೆಯ ಸಮೀಪ ಪಂಜ ಹೊಳೆಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ಯೋಜನೆಯಲ್ಲಿ ಶಾಸಕರ ಶಿಫಾರಸಿನ ಮೇರೆಗೆ ಬೊಳ್ಮಲೆ-ಬಸ್ತಿಕಾಡು ಪ್ರದೇಶದಲ್ಲಿ ಸ್ಥಳೀಯರ ಕ್ಷಿಪ್ರ ಕಾಮಗಾರಿ ಮೂಲಕ ನಿರ್ಮಾಣಗೊಂಡಿದ್ದ ಕಿಂಡಿ ಅಣೆಕಟ್ಟೆಗೆ ಹಲಗೆ ಅಳವಡಿಸುವ ಕೆಲಸ ತಿಂಗಳ ಹಿಂದೆ ಪೂರ್ಣಗೊಂಡಿದೆ. ಇದಕ್ಕೆ ಪ್ರತಿವರ್ಷ ಹಲಗೆ ಅಳವಡಿಸುವ ಕಾರ್ಯವನ್ನು ಸ್ಥಳೀಯರು ನಡೆಸುತ್ತಾರೆ. ಈ ಬಾರಿಯೂ ಈ ಕೆಲಸ ಪೂರ್ಣವಾಗಿದ್ದು, ನೂರಾರು ಎಕ್ರೆಯಲ್ಲಿ ಅಂತರ್ಜಲ ವೃದ್ಧಿಯಾಗಿದೆ.

ಅಂತರ್ಜಲ ವೃದ್ಧಿ
ಇದು ಪಂಜ ಹಾಗೂ ಬಳ್ಪ ಗ್ರಾ.ಪಂ. ಗಳ ವ್ಯಾಪ್ತಿಯಲ್ಲಿ ಅನೇಕ ಕೃಷಿಕರಿಗೆ ವರದಾನವಾಗಿದೆ. ಇಲ್ಲಿನ ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತಿದೆ. ಮಳೆ ನಿಂತ ಮೇಲೂ ಇಲ್ಲಿ ನೀರು ಕಡಿಮೆಯಾಗುವುದಿಲ್ಲ ಎಂದು ಸ್ಥಳೀಯ ಫ‌ಲಾನುಭವಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಪಂಜ ಗ್ರಾ.ಪಂ. ವ್ಯಾಪ್ತಿಯ ಕೂತ್ಕುಂಜ ಗ್ರಾಮದ ಬಸ್ತಿಕಾಡು ಎಂಬ ಪ್ರದೇಶದಲ್ಲಿ 20ಕ್ಕೂ ಮಿಕ್ಕಿದ ಮನೆಗಳಿಗೆ ಕಿಂಡಿ ಅಣೆಕಟ್ಟೆ ಮೇಲಿಂದ ರಸ್ತೆ ವ್ಯವಸ್ಥೆಯೂ ಆಗಿದೆ. ಈ ಭಾಗದ ನಾಗರಿಕರು ಮುಖ್ಯ ರಸ್ತೆಗೆ ಸಂಪರ್ಕಿಸಲು ಸುತ್ತು ಬಳಸಿ ಪ್ರಯಾಣಿಸಬೇಕಾಗಿತ್ತು. ಆದರೆ ಬೊಳ್ಮಲೆಯಿಂದ ಬಸ್ತಿಕಾಡುಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟೆ ನಿರ್ಮಾಣವಾದ್ದರಿಂದ ಅದರ ಮೇಲೆ ಬಸ್ತಿಕಾಡು ಪ್ರದೇಶಕ್ಕೆ ತೆರಳಲು ಉಪಯುಕ್ತವಾಗಿದೆ. ನದಿ, ತೋಡುಗಳಿಗೂ ಅಲ್ಲಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲು ಜನಪ್ರತಿನಿಧಿಗಳು, ಇಲಾಖೆಗಳು ಗಮನ ಹರಿಸಬೇಕು. ಫ‌ಲಾನುಭವಿಗಳೇ ಶ್ರಮದಾನದ ಮೂಲಕ ಹಲಗೆ ಅಳವಡಿಸುವ, ನಿರ್ವಹಿಸುವ ಕೆಲಸ ಮಾಡುವುದರಿಂದ ಹೆಚ್ಚುವರಿ ವೆಚ್ಚವೂ ಇಲ್ಲ. ಪಂಜ ಮತ್ತು ಬಳ್ಪ ಗ್ರಾಮಗಳ 150ಕ್ಕೂ ಅಧಿಕ ಮನೆಗಳಿಗೆ ಈ ಕಿಂಡಿ ಅಣೆಕಟ್ಟಿನಿಂದ ಪರೋಕ್ಷ ಪ್ರಯೋಜನವಾಗಿದೆ. ಕಳೆದ ವರ್ಷ ಮಾರ್ಚ್‌ ತನಕ ಈ ಭಾಗದವರಿಗೆ ಸಮೃದ್ಧ ನೀರು ದೊರಕಿತ್ತು. ಈ ಬಾರಿ ಬಾವಿ, ಕೆರೆಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದೆ. ಪ್ರಾಣಿ-ಪಕ್ಷಿಗಳಿಗೂ ಕುಡಿಯುವ ನೀರಿಗೆ ಆಸರೆಯಾಗಿದೆ.

ಶ್ರಮ ಫ‌ಲ ನೀಡಿದೆ 
ಕಿಂಡಿ ಅಣೆಕಟ್ಟೆ ನಿರ್ವಹಣೆಯನ್ನು ಗ್ರಾಮಸ್ಥರೇ ಮಾಡುತ್ತಿದ್ದಾರೆ. ಪಂಜ ಗ್ರಾಪಂ. ಎಲ್ಲ ಸಹಕಾರ ನೀಡುತ್ತಿದೆ. ಕಿಂಡಿ ಅಣೆಕಟ್ಟೆಯಲ್ಲಿ ನೀರು ನಿಲಿಸುವುದಕ್ಕಾಗಿ ಹಲಗೆ ಹಾಸಲು 50 ಮಂದಿ ಫ‌ಲಾನುಭವಿಗಳು ಪ್ರತಿ ವರ್ಷವೂ ಕೆಲಸ ಮಾಡುತ್ತಾರೆ.

Advertisement

ಆದ್ಯತೆ ನೀಡುತ್ತೇವೆ
ಅಂತರ್ಜಲ ವೃದ್ಧಿಗೆ ಸ್ಥಳೀಯಾಡಳಿತ ಹೆಚ್ಚು ಆದ್ಯತೆ ನೀಡುತ್ತ ಬಂದಿದೆ. ಯೋಜನೆ ಕಾರ್ಯಗತವಾಗಿದ್ದು, ಫ‌ಲ ನೀಡಿದೆ. ಕಿಂಡಿ ಅಣೆಕಟ್ಟೆಯಿಂದಾಗಿ ಮಳೆ ನಿಂತ ಮೇಲೂ ಇಲ್ಲಿ ನೂರಾರು ಎಕ್ರೆ ವ್ಯಾಪ್ತಿಯಲ್ಲಿ ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರು ಏರಿಕೆ ಕಂಡು ಕೃಷಿಕರಿಗೆ ಬಹಳಷ್ಟು ಪ್ರಯೋಜನಾಗಿದೆ. 
ಕಾರ್ಯಪ್ಪ ಗೌಡ ಚಿದ್ಗಲ್ಲು,
  ಅಧ್ಯಕ್ಷರು, ಪಂಜ ಗ್ರಾ.ಪಂ.

ಸಮಸ್ಯೆ ಉಂಟಾಗಿಲ್ಲ
ಅಣೆಕಟ್ಟೆಯಿಂದ ಅಂತರ್ಜಲ ವೃದ್ಧಿಗೊಂಡಿದೆ. ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆ ಕಾಣುತ್ತಿದೆ. ಹೀಗಾಗಿ ಕುಡಿಯುವ ನೀರಿನ ಸಮಸ್ಯೆ ಎಂದೂ ನಮಗೆ ಎದುರಾಗಿಲ್ಲ. ಕಳೆದ ಬೇಸಗೆಯಲ್ಲಿ ನೀರಿನ ಸಮಸ್ಯೆ ಕಂಡುಬಂದಿಲ್ಲ.
ಸಂತೋಷ್‌ ಬಿ.ಎನ್‌.,
   ಫ‌ಲಾನುಭವಿ

 ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next