Advertisement

ಕಲ್ಲಿನ ಬದುಗಳಲ್ಲಿ ಶುದ್ಧವಾಯ್ತು ಕಲ್ಮಶ ನೀರು

03:34 PM Dec 14, 2022 | Team Udayavani |

ಧಾರವಾಡ: ಒಂದು ಕಾಲಕ್ಕೆ ಹಿತ್ತಲ ಕೈ ತೋಟಕ್ಕೆ ಬಳಕೆಯಾಗಿದ್ದ ನೀರು ಇಂದು ಚರಂಡಿ ಹಿಡಿದಿದೆ. ಚರಂಡಿಯೇ ಇಲ್ಲದ ಗ್ರಾಮ, ಪಟ್ಟಣಗಳಲ್ಲಿ ಕೊಳಚೆ ಹೊಂಡಗಳೇ ನಿರ್ಮಾಣವಾಗಿವೆ. ಸ್ವಚ್ಛ ನೀರು, ಗಾಳಿ ಇದ್ದ ಗ್ರಾಮಗಳಲ್ಲಿ ಇಂದು ಕಾಂಕ್ರೀಟ್‌ನ ವಿಸ್ತಾರ ನೆಲೆಗೊಂಡಿದ್ದು, ಬಳಕೆಯಾದ ಕೊಳಚೆ ನೀರು ಜಲಮೂಲಗಳನ್ನೇ ಖರಾಬು ಮಾಡುತ್ತಿದೆ.

Advertisement

ಹೌದು, ಶುದ್ಧ ಗಾಳಿ, ನೀರು, ವಾತಾವರಣಗಳ ಆಗರವಾಗಿದ್ದ ಗ್ರಾಮಗಳಲ್ಲಿ ಕಳೆದ ಎರಡು ದಶಕಗಳಿಂದ ನಡೆದ ಅಭಿವೃದ್ಧಿ ಕಾರ್ಯಗಳು ಮತ್ತು ಕ್ರಾಂಕ್ರೀಟೀಕರಣದಿಂದ ಇಂಗಬೇಕಿದ್ದ ಕೊಳಚೆ ನೀರು ದೊಡ್ಡ ಪ್ರಮಾಣದಲ್ಲಿ ಗ್ರಾಮಗಳಿಂದ ಹೊರ ಬಂದು ಜಲಮೂಲಗಳನ್ನೇ ಹಾಳು ಮಾಡುತ್ತಿದೆ. ಇದೀಗ ಇಂತಿಪ್ಪ ಕೊಳಚೆಯನ್ನು ಪರಿಶುದ್ಧ ಮಾಡಲು ಧಾರವಾಡ ಜಿಲ್ಲಾ ಪಂಚಾಯಿತಿ ಗಟ್ಟಿ ಹೆಜ್ಜೆ ಇಟ್ಟಿದೆ.

ಏನಿದು ಶುದ್ಧೀಕರಣ ತಂತ್ರ?

ಜಿಲ್ಲೆಯಲ್ಲಿನ 144 ಗ್ರಾಪಂಗಳ 354 ಗ್ರಾಮಗಳಲ್ಲೂ ಬೂದು ನೀರು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಇದನ್ನು ತಡೆದು, ಬೂದು ನೀರನ್ನು ಪರಿಶುದ್ಧ ನೀರನ್ನಾಗಿ ಪರಿವರ್ತಿಸುವ ಪ್ರಯತ್ನಕ್ಕೆ ಧಾರವಾಡ ಜಿಪಂ ಮುಂದಾಗಿದೆ. ಮನೆ ಮನೆಗಳಿಂದ ಬರುವ ಬೂದು ನೀರನ್ನು ಸಂಸ್ಕರಿಸಲು 150-180 ಮೀಟರ್‌ ಉದ್ದದ ಕಲ್ಲಿನ ಕಟೋಡಿ (ಕನ್‌ಸ್ಟ್ರಕ್ಟೆಡ್‌ ವೆಟ್‌ಲ್ಯಾಂಡ್‌)ಗಳನ್ನು 6-7 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ನೀರನ್ನು ಸಂಸ್ಕರಿಸಲಾಗುತ್ತಿದೆ. ಇಂತಹ ಒಂದು ಘಟಕ ಅಂದಾಜು 200-250 ಮನೆಗಳ ನೀರನ್ನು ಶುದ್ಧೀಕರಣ ಮಾಡಬಲ್ಲದು.

ಜಿಲ್ಲೆಯ 354 ಗ್ರಾಮಗಳಿಗೂ ಬೂದು ನೀರು ಸಂಸ್ಕರಣೆಗೆ ಅಂದಾಜು ವಿಸ್ತೃತ ಯೋಜನೆ (ಡಿಪಿಆರ್‌) ಸಿದ್ಧಗೊಂಡು ಸರ್ಕಾರಕ್ಕೆ ಹೋಗಿ ಅನುಮೋದನೆ ಗೊಂಡಿದೆ. ಸ್ವಚ್ಛ ಭಾರತ ಮಿಷನ್‌ (ಗ್ರಾಮೀಣ ವಿಭಾಗದಲ್ಲಿ)ನಿಂದ 17 ಕೋಟಿ ರೂ.ಗಳಷ್ಟು ಅನುದಾನ ಕೂಡ ಇದಕ್ಕೆ ಲಭಿಸಿದ್ದು, ಶೇ.70 ಸ್ವತ್ಛ ಭಾರತ ಮಿಷನ್‌ನಿಂದ ಉಳಿದ ಶೇ.30ರಷ್ಟು 15ನೇ ಹಣಕಾಸು ಅನುದಾನದಲ್ಲಿ ಬರಲಿದೆ. 5 ಸಾವಿರ ಜನಸಂಖ್ಯೆಗಿಂತಲೂ ಕಡಿಮೆ ಇರುವ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ 230 ರೂ.ನಂತೆ ಹಾಗೂ 5 ಸಾವಿರಕ್ಕಿಂತಲೂ ಹೆಚ್ಚಿರುವ ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ 660 ರೂ.ನಂತೆ ಬೂದು ನೀರು ಸಂಸ್ಕರಣೆಗೆ ಅನುದಾನ ಲಭಿಸಲಿದೆ.

Advertisement

ಏನಿದು ಕಲ್ಲಿನ ಕಟೋಡಿ ತಂತ್ರ?

ಇಂಗು ಗುಂಡಿಗಳು ಗ್ರಾಮಗಳಲ್ಲಿ ಈ ಮೊದಲು ಸಾಮಾನ್ಯವಾಗಿದ್ದವು. ಬಚ್ಚಲು ನೀರು ಇಂಗಿಸಲು ಎಲ್ಲರಿಗೂ ಹಿತ್ತಲು ಇತ್ತು. ಇಲ್ಲದವರು ಮಾತ್ರ ಮಣ್ಣಿನ ಕಾಲುವೆಗಳಿಗೆ ಹರಿ ಬಿಡುತ್ತಿದ್ದರು. ಆ ಕೊಳಚೆ ನೀರು ಅಲ್ಲಿಯೇ ಇಂಗಿ ಬಿಡುತ್ತಿತ್ತು. ಆದರೀಗ ಬೂದು ನೀರು ಸ್ವಚ್ಛಗೊಳಿಸಿ ಅದನ್ನು ಮರು ಬಳಸುವುದು ಅಥವಾ ಹಳ್ಳ-ಕೆರೆಗಳಿಗೆ ಬಿಡುವುದಾಗಿದೆ. ನೈಸರ್ಗಿಕವಾಗಿಯೇ ಬೂದು ನೀರು ಶುದ್ಧೀಕರಣಕ್ಕೆ ಕಲ್ಲು ಗೋಡೆಗಳನ್ನು ನಿರ್ಮಿಸಲಾಗುತ್ತದೆ. ಪ್ರತಿ 5-10 ಮೀಟರ್‌ ಗೆ ಒಂದರಂತೆ ತಡೆಗೋಡೆಗಳನ್ನು ನಿರ್ಮಿಸಿ ಚೌಕಾಕಾರದಲ್ಲಿ ಕಲ್ಲಿನ ಕಟೋಡಿಗಳನ್ನು ಹೊಂಡದ ರೂಪ ಅಥವಾ ಕಾಲುವೆ ರೂಪದಲ್ಲಿ ಕಟ್ಟಲಾಗುತ್ತದೆ. ನಂತರ ಆ ಜಾಗದಲ್ಲಿ ಕಾಬಾಳೆ ಸೇರಿದಂತೆ ಕೆಲ ಜಾತಿಯ ಜೊಂಡು ಹುಲ್ಲು ನೆಡಲಾಗುವುದು. ಈ ಸಸ್ಯಗಳು ಬೂದು ನೀರಿನಲ್ಲಿನ ಕಲ್ಮಶಗಳನ್ನು ಹೀರಿಕೊಂಡು ಸ್ವಚ್ಛಗೊಳಿಸಿದ ನೀರನ್ನು ಇಂಗುವಂತೆ, ಹೆಚ್ಚಾಗಿದ್ದರೆ ಹರಿದು ಮುಂದೆ ಸಾಗುವಂತೆ ಮಾಡುತ್ತವೆ. ಈ ತಂತ್ರಜ್ಞಾನ ನೈಸರ್ಗಿಕ ವಾಗಿಯೇ ನಡೆದರೂ ಇಲ್ಲಿ ಶೇ.85 ಬೂದು ನೀರು ಶುದ್ಧೀಕರಣಗೊಂಡು ಜಲಮೂಲ ಸೇರುತ್ತದೆ.

ವಿಪರೀತವಾಯಿತು ಕಲ್ಮಶ: ಈ ಹಿಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಗ್ರಾಮಗಳಲ್ಲಿನ ಪರಿಸರ ಮಾಲಿನ್ಯವೂ ವಿಪರೀತವಾಗುತ್ತಿದೆ. ಅತಿಯಾದ ಪ್ಲಾಸ್ಟಿಕ್‌ ಬಳಕೆ, ಸಾಬೂನು-ಮಾರ್ಜಕಗಳು, ಪಾತ್ರೆ ತೊಳೆಯಲು ಕೂಡ ಅತ್ಯಧಿಕ ಪ್ರಮಾಣದಲ್ಲಿ ಸಾಬೂನು ಬಳಕೆ, ಬಟ್ಟೆ ಮನೆಗಳಲ್ಲಿಯೇ ತೊಳೆಯುತ್ತಿರುವುದು, ಅಲ್ಲದೇ ಕಾರು, ಬೈಕ್‌ಗಳನ್ನು ಸ್ವಚ್ಛತೆಯ ನೀರೆಲ್ಲವೂ ಇದೀಗ ಕಾಂಕ್ರೀಟ್‌ ಗಟಾರುಗಳ ಮೂಲಕ ದೊಡ್ಡ ಚರಂಡಿ ಸೇರಿಕೊಂಡು ಗ್ರಾಮದ ಜನನಿಬಿಡ ಪ್ರದೇಶದಲ್ಲಿಯೇ ದುರ್ವಾಸನೆ ಸೃಷ್ಟಿಸುತ್ತಿದೆ. ಇನ್ನು ಶೌಚಾಲಯಗಳು ತುಂಬಿದ ನಂತರ ಹೊರ ಬರುವ ಕೊಳಚೆ ನೀರು ಗಟಾರು ಸೇರುತ್ತಿದೆ. ಅದೂ ಅಲ್ಲದೇ ಕೆಲ ಗ್ರಾಮಗಳಲ್ಲಿ ಶುದ್ಧ ನೀರು ಸಂಗ್ರಹಿಸುತ್ತಿದ್ದ ಗ್ರಾಮದ ಮುಂದಿನ ಕೆರೆಗಳಿಗೆ ಕೊಳಚೆ ನೀರು ಸೇರುತ್ತಿದ್ದು, ದನಕರುಗಳಿಗೆ ಕೊಳಚೆ ನೀರು ಕುಡಿಯುವ ಅನಿವಾರ್ಯತೆ ಎದುರಾಗಿದೆ.

13 ಗ್ರಾಮಗಳಲ್ಲಿ ಬೂದು ನೀರು ಸಂಸ್ಕರಣಾ ಘಟಕ

ಬೂದು ನೀರು ನಿರ್ವಹಣೆಗೆ ಧಾರವಾಡ ತಾಲೂಕಿನ ಕುರುಬಗಟ್ಟಿ, ಮಂಗಳಗಟ್ಟಿ, ಮುಳಮುತ್ತಲ ಗ್ರಾಮಗಳಲ್ಲಿ ಘಟಕ ಸಜ್ಜಾಗಿವೆ. ಹುಬ್ಬಳ್ಳಿ ತಾಲೂಕಿನಲ್ಲಿ ಕೋಳಿವಾಡ, ಬ್ಯಾಹಟ್ಟಿ, ಅಂಚಟಗೇರಿ, ಕುಂದಗೋಳ ತಾಲೂಕಿನ ಕುಬಿಹಾಳ, ಗುರುವಿನಹಳ್ಳಿ, ಕಲಘಟಗಿ ಬೀರವಳ್ಳಿ, ದೇವಲಿಂಗಿಕೊಪ್ಪ, ನವಲಗುಂದ ತಾಲೂಕಿನ ಬೆಳವಟಗಿ, ಅಣ್ಣಿಗೇರಿ ತಾಲೂಕಿನ ನಲವಡಿ, ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದಲ್ಲಿ ಪ್ರಾಯೋಗಿಕ ಘಟಕಗಳು ನಿರ್ಮಾಣವಾಗುತ್ತಿವೆ.

ಮಲತ್ಯಾಜ್ಯ ಕಪ್ಪು ನೀರು ಸಂಸ್ಕರಣೆಗೂ ಒತ್ತು

ಕಪ್ಪು ನೀರು ನಿರ್ವಹಣೆ ಅಂದರೆ ಶೌಚಾಲಯದಿಂದ ಬಂದ ಮಲತ್ಯಾಜ್ಯ ನಿರ್ವಹಿಸಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದಲ್ಲಿ 45ಲಕ್ಷ ರೂ.ವೆಚ್ಚ ಮತ್ತು ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಪಂ ವ್ಯಾಪ್ತಿಯಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕ ನಿರ್ಮಿಸಲಾಗುತ್ತಿದೆ. ಎಲ್ಲೆಂದರಲ್ಲಿ ಮಲತ್ಯಾಜ್ಯ ಬಿಟ್ಟು ಹೋಗುತ್ತಿದ್ದ ಪ್ರತ್ಯೇಕ ವಾಹನಗಳು ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದವು. ಇದೀಗ ಇಂತಹ ಪ್ರತ್ಯೇಕ ಮಲತ್ಯಾಜ್ಯ ನಿರ್ವಹಣಾ ವಾಹನ ಕಂಪನಿಗಳ ಜತೆಗೆ ಒಪ್ಪಂದ ಮಾಡಿಕೊಂಡು ಇದನ್ನು ನಿರ್ವಹಿಸಲಾಗುತ್ತಿದೆ. ಇದನ್ನು ಕೂಡ ನೈಸರ್ಗಿಕವಾಗಿಯೇ ಶುದ್ಧೀಕರಿಸಲಾಗುತ್ತಿದ್ದು, ಒಟ್ಟು 64 ಗ್ರಾಮಗಳಲ್ಲಿನ ಮಲತ್ಯಾಜ್ಯವನ್ನು ನಗರ ವ್ಯಾಪ್ತಿಯ ಎಸ್‌ಟಿಪಿ ಘಟಕಗಳಿಗೆ ಬಿಡುವ ವ್ಯವಸ್ಥೆ ಮಾಡಲಾಗಿದೆ.

ನಗರ ಮಾತ್ರವಲ್ಲ ಇದೀಗ ಹಳ್ಳಿಗಳ ಸ್ವರೂಪವೂ ಬದಲಾಗಿದ್ದು, ಇಲ್ಲಿಯೂ ಕೊಳಚೆ ನೀರು ಉತ್ಪತ್ತಿಯಾಗುತ್ತಿದೆ. ಜಲಮೂಲ, ಜನ ಜಾನುವಾರುಗಳಿಗೆ ಆಗುವ ತೊಂದರೆ ನೀಗಿಸಲು ಬೂದು ನೀರು ಸಂಸ್ಕರಣಾ ಘಟಕ ಸಹಕಾರಿಯಾಗಿದೆ. ಇಡೀ ಜಿಲ್ಲೆಯ ಪ್ರತಿ ಗ್ರಾಮದ ನೀರನ್ನು ಸಂಸ್ಕರಿಸುವ ಗುರಿ ಹೊಂದಿದ್ದೇವೆ.  -ಡಾ|ಸುರೇಶ ಇಟ್ನಾಳ, ಜಿಪಂ ಸಿಇಒ

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next