Advertisement

ಸ್ವಚ್ಛ ಮಂಗಳೂರಿನ ರಸ್ತೆ ಬದಿಯಲ್ಲೇ ನರಕ ದರ್ಶನ!

12:24 AM Nov 01, 2021 | Team Udayavani |

ಮಹಾನಗರ: ಸ್ವಚ್ಛ ಮಂಗಳೂರಿನ ಪರಿಕಲ್ಪನೆಯಲ್ಲಿ ಸ್ಮಾರ್ಟ್‌ ಸಿಟಿಯಾಗಿ ಬದಲಾಗುತ್ತಿರುವ ಮಂಗಳೂರಿಗೆ ತ್ಯಾಜ್ಯದ ಸಮಸ್ಯೆ ಇತ್ಯರ್ಥವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹಲವು ಸಮಸ್ಯೆಗಳ ಮಧ್ಯೆಯೇ, ಇದೀಗ ನಗರದ ವಿವಿಧೆಡೆ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವರ್ಗಾವಣೆ ಮಾಡುವ ಕಾರಣದಿಂದ ಸಾರ್ವಜನಿಕರಿಗೆ ತ್ಯಾಜ್ಯದ ನರಕ ದರ್ಶನವಾಗುತ್ತಿದೆ!

Advertisement

ನಗರದಲ್ಲಿ ತ್ಯಾಜ್ಯ ನಿರ್ವಹಣೆ ಮಾಡು ತ್ತಿರುವ ಸಣ್ಣ ವಾಹನಗಳಿಂದ ದೊಡ್ಡ ವಾಹನಗಳಿಗೆ ತ್ಯಾಜ್ಯವನ್ನು ನಗರದ ವಿವಿಧ ಕಡೆ ಗಳ ಜನನಿಬಿಡ ರಸ್ತೆ ಬದಿಯಲ್ಲಿಯೇ ವರ್ಗಾವಣೆ ಮಾಡುತ್ತಿರುವ ಪರಿಪಾಠ ನಿತ್ಯ ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ನಗರದ ಆರೋಗ್ಯ ದೃಷ್ಟಿ ಯಿಂದಲೂ ಇದು ಮಾರಕ ಎಂಬ ಅಭಿಪ್ರಾಯವಿದೆ.

ಪಾಂಡೇಶ್ವರ ಕೇಂದ್ರ ಅಂಚೆ ಕಚೇರಿ ಮುಂಭಾಗ, ಫಾರಂ ಮಾಲ್‌ನ ಕಾರ್ಗೊ ಪ್ರವೇಶ ದ್ವಾರ, ಜೈಲು ರಸ್ತೆ, ಕೆಪಿಟಿ ಬಳಿ, ಕಂಕನಾಡಿ ಸಮೀಪ, ನಂದಿಗುಡ್ಡೆ ಸಹಿತ ಹಲವು ಭಾಗದಲ್ಲಿ ಇಂತಹ ಚಟುವಟಿಕೆಗಳು ಕಂಡುಬರುತ್ತಿವೆ.

ರಸ್ತೆ ಬದಿ ವಾಸನೆ; ಆರೋಗ್ಯ ಆತಂಕ!
ತ್ಯಾಜ್ಯ ವರ್ಗಾವಣೆ ಮಾಡುವ ಸ್ಥಳದ 100 ಮೀಟರ್‌ ಅಂತರದಲ್ಲಿಯೇ ವಿದ್ಯಾಸಂಸ್ಥೆ, ವಿವಿಧ ಅಂಗಡಿ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜತೆಗೆ ಆ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ತೆರಳುತ್ತಿರುತ್ತಿವೆ. ಸುಮಾರು 10ರಷ್ಟು ಸಣ್ಣ ವಾಹನದಿಂದ ದೊಡ್ಡ ವಾಹನಕ್ಕೆ ತ್ಯಾಜ್ಯ ಡಂಪ್‌ ಮಾಡುವ ಪ್ರಕ್ರಿಯೆ ರಸ್ತೆ ಬದಿಯಲ್ಲಿಯೇ ನಡೆಯುವುದರಿಂದ ಆ ವ್ಯಾಪ್ತಿಯಲ್ಲೆಲ್ಲ ಕೆಟ್ಟ ವಾಸನೆ ವ್ಯಾಪಿಸುತ್ತಿದೆ.

ವಿದ್ಯಾರ್ಥಿಗಳು ಸಹಿತ ಬಹುತೇಕ ಮಂದಿ ಇಲ್ಲಿ ನಡೆದಾಡಲೂ ತ್ರಾಸಪಡು ವಂತಾಗುತ್ತದೆ. ತ್ಯಾಜ್ಯ ಒಂದು ವಾಹನ ದಿಂದ ಇನ್ನೊಂದು ವಾಹನಕ್ಕೆ ಡಂಪ್‌ ಮಾಡುವಾಗ ಬಹುಪಾಲು ರಸ್ತೆ ಬದಿಯಲ್ಲಿಯೇ ಬಿದ್ದಿರುತ್ತದೆ. ಇದಕ್ಕೆ ಮಳೆ ನೀರು ಬಿದ್ದರೆ ಮತ್ತಷ್ಟು ವಾಸನೆ ವ್ಯಾಪಿಸು ತ್ತದೆ. ಇದು ಆರೋಗ್ಯ ಸಮಸ್ಯೆಗೂ ಕಾರಣ ವಾಗುವ ಆತಂಕವಿದೆ. ಜತೆಗೆ ಇಲ್ಲಿ ಬೀದಿ ನಾಯಿಗಳ ಸಂಖ್ಯೆಯೂ ಹೆಚ್ಚಾಗಿವೆ.

Advertisement

ಡಂಪಿಂಗ್‌ಗೆ ಪ್ರತ್ಯೇಕ ಜಾಗವೇ ಇಲ್ಲ!
ತ್ಯಾಜ್ಯ ಸಾಗಾಟ ಮಾಡುವ ವಾಹನದ ಚಾಲಕರೊಬ್ಬರು “ಸುದಿನ’ ಜತೆಗೆ ಮಾತನಾಡಿ, “ಕೆಲವು ರೂಟ್‌ನಲ್ಲಿ ಸಣ್ಣ ವಾಹನ ಮಾತ್ರ ತೆರಳುತ್ತದೆ. ಆ ವಾಹನದಲ್ಲಿ ತ್ಯಾಜ್ಯ ಭರ್ತಿಯಾದ ಕೂಡಲೇ ಅದನ್ನು ಡಂಪ್‌ ಮಾಡಲು ದೊಡ್ಡ ವಾಹನದವರಿಗೆ ಕರೆ ಮಾಡುತ್ತೇವೆ. ಅವರು ಸಮೀಪದ ಕೆಲವು ಭಾಗದಲ್ಲಿ ಇರುವ ಬಗ್ಗೆ ಮಾಹಿತಿ ನೀಡುತ್ತಾರೆ.

ಹೀಗಾಗಿ ಅಲ್ಲಿಗೆ ತೆರಳಿ ಸಣ್ಣ ವಾಹನದಿಂದ ದೊಡ್ಡವಾಹನಕ್ಕೆ ಡಂಪ್‌ ಮಾಡಿ, ಮತ್ತೊಮ್ಮೆ ತ್ಯಾಜ್ಯ ಸಂಗ್ರಹಕ್ಕೆ ತೆರಳುತ್ತೇವೆ. ಸಾರ್ವಜನಿಕರಿಗೆ ಇದರಿಂದ ಸಮಸ್ಯೆ ಆಗುವುದು ನಿಜ. ಆದರೆ ಡಂಪ್‌ ಮಾಡಲು ಪಾಲಿಕೆ ವತಿಯಿಂದ ಪ್ರತ್ಯೇಕ ಜಾಗ ನೀಡದ ಕಾರಣ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವಿಂಗಡಿಸಲಾಗುತ್ತಿದೆ’ ಎನ್ನುತ್ತಾರೆ.

ಇದನ್ನೂ ಓದಿ:‘ತರಂಗ’ ವಾರಪತ್ರಿಕೆಯ ಸಂಪಾದಕಿ ಡಾ| ಯು. ಬಿ. ರಾಜಲಕ್ಷ್ಮೀ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ತ್ಯಾಜ್ಯ ವರ್ಗಾವಣೆ; ವೈಜ್ಞಾನಿಕವಾಗಿ ನಡೆಯಲಿ
ಸಣ್ಣ ವಾಹನದಿಂದ ದೊಡ್ಡ ವಾಹನಕ್ಕೆ ತ್ಯಾಜ್ಯ ವರ್ಗಾವಣೆ ಮಾಡುವುದು ಅಗತ್ಯವಾಗಿದ್ದರೂ ಪಾಲಿಕೆ ವತಿಯಿಂದ ಪರ್ಯಾಯ ವ್ಯವಸ್ಥೆ ಆಗಬೇಕಿದೆ. ಹೀಗಾಗಿ ಜನದಟ್ಟಣೆ ಇಲ್ಲದ ನಗರದ ನಿಗದಿತ ಸ್ಥಳವನ್ನು ಆಯ್ಕೆ ಮಾಡಿ (ರಸ್ತೆ ಬದಿ ಅಲ್ಲ) ಅಲ್ಲಿ ತ್ಯಾಜ್ಯ ವರ್ಗಾವಣೆ ಮಾಡಬಹುದು. ಅಲ್ಲಿಂದಲೇ ಸಣ್ಣ ವಾಹನದಿಂದ ದೊಡ್ಡ ಲಾರಿಗೆ ತ್ಯಾಜ್ಯ ವರ್ಗಾವಣೆ ಮಾಡಬೇಕು. ಈ ವೇಳೆ ತ್ಯಾಜ್ಯವು ಸ್ವಲ್ಪವೂ ನೆಲಕ್ಕೆ ಬೀಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹೀಗಾಗಿ ವೈಜ್ಞಾನಿಕವಾಗಿ ತ್ಯಾಜ್ಯ ನಿರ್ವಹಣೆಯಾಗಬೇಕಿದೆ.

ಪ್ರತ್ಯೇಕ ಜಾಗಕ್ಕೆ ಕ್ರಮ
ಜನನಿಬಿಡ ಪ್ರದೇಶದ ರಸ್ತೆ ಬದಿಯಲ್ಲಿಯೇ ತ್ಯಾಜ್ಯ ವರ್ಗಾವಣೆ ಮಾಡುತ್ತಿರುವುದು ಈಗಾಗಲೇ ಗಮನಕ್ಕೆ ಬಂದಿದೆ. ಪರ್ಯಾಯ ಜಾಗ ನಿಗದಿಪಡಿಸಲು ನಿರ್ಧರಿಸಿದಾಗ ಅಲ್ಲಿನವರ ವಿರೋಧದಿಂದಾಗಿ ಸಮಸ್ಯೆ ಆಗಿತ್ತು. ಆದರೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಮಸ್ಯೆ ಇತ್ಯರ್ಥ ಪಡಿಸಲು ಪ್ರತ್ಯೇಕ ಜಾಗ ನಿಗದಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಪ್ರೇಮಾನಂದ ಶೆಟ್ಟಿ,
ಮೇಯರ್‌, ಮನಪಾ

 

Advertisement

Udayavani is now on Telegram. Click here to join our channel and stay updated with the latest news.

Next