Advertisement

ಪಿಲಾರುಖಾನದ ಕಾನನ ಪ್ರದೇಶದಲ್ಲಿ ತ್ಯಾಜ್ಯ ರಾಶಿ

06:00 AM May 27, 2018 | Team Udayavani |

ಬೆಳ್ಮಣ್‌: ದೇಶದಾದ್ಯಂತ ಸ್ವತ್ಛ ಭಾರತದ  ಪರಿಕಲ್ಪನೆಯ ಕೂಗು ಕೇಳಿಸುತ್ತಿದ್ದರೂ  ಮುದರಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪಿಲಾರುಖಾನದ ಕಾನನ ಪ್ರದೇಶದಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದು, ಮೂಗು ಮುಚ್ಚಿಯೇ ನಡೆದಾಡುವಂತಾಗಿದೆ. 
 
ಪಿಲಾರುಖಾನದ ದಟ್ಟ ಅರಣ್ಯ ಪ್ರದೇಶ ತ್ಯಾಜ್ಯದ ಕೊಂಪೆಯಾಗುತ್ತಿದೆ. ಬೆಳ್ಮಣ್‌ನಿಂದ ಶಿರ್ವ ಸಾಗುವ ರಸ್ತೆಯ ಎರಡು ಬದಿಗಳಲ್ಲೂ ಕಾಣ ಸಿಗುವ ಈ ಕಾನನ ಪ್ರದೇಶದಲ್ಲಿ ಇದೀಗ ತ್ಯಾಜ್ಯವನ್ನು ಎಲ್ಲೆಂದರಲ್ಲಿ  ಎಸೆಯುತ್ತಿರುವ ಪರಿಣಾಮ ಪರಿಸರ ಗಬ್ಬೆದ್ದು ನಾರುತ್ತಿದೆ. ಪಿಲಾರುಖಾನದ ಕಾಡಿನ ಒಳಗಿರುವ ದೇಗುಲದ‌ ದ್ವಾರದ ಪಕ್ಕದಲ್ಲಿಯೇ ತ್ಯಾಜ್ಯ ಸುರಿಯಲಾಗುತ್ತಿದೆ. 

Advertisement

ವಾಹನಗಳಲ್ಲಿ ಬಂದು ಎಸೆಯುತ್ತಾರೆ!
ದೂರದಿಂದ ಬರುವ ಗೂಡ್ಸ್‌ ವಾಹನಗಳು ತ್ಯಾಜ್ಯವನ್ನು ವಾಹನಗಳಲ್ಲಿ ತಂದು ಇಲ್ಲೇ ಸುರಿದು ಹೋಗುತ್ತಾರೆ. ಕಾಡಿನ ಪ್ರದೇಶದ ದಾರಿಯುದ್ದಕ್ಕೂ ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆದಿದ್ದು ಗಬ್ಬೆದ್ದು ನಾರುತ್ತಿದೆ. ಯಾರಿಗೂ ಕಾಣಿಸುವುದಿಲ್ಲ ಎಂಬ ಕಾರಣಕ್ಕೆ ಇಂತಹ ಕೃತ್ಯಗಳು ನಡೆಯುತ್ತಲೇ ಇವೆ. 

ಮಂಗಗಳಿಗೆ ಆಹಾರವಾಗುತ್ತಿವೆ 
ಇಲ್ಲಿನ ತ್ಯಾಜ್ಯಗಳು

ಪಿಲಾರುಖಾನದ ದಟ್ಟ ಕಾನನ ಪ್ರದೇಶದಲ್ಲಿ ಮಂಗಗಳೂ ಹೆಚ್ಚಾಗಿದ್ದು ಇಲ್ಲಿ ರಸ್ತೆಯ ಪಕ್ಕದಲ್ಲಿ  ಎಸೆಯಲಾಗುವ ತರಕಾರಿ ತ್ಯಾಜ್ಯದ ಜೊತೆ ಪ್ಲಾಸ್ಟಿಕ್‌ ತ್ಯಾಜ್ಯಗಳು ಈ ಮಂಗಗಳಿಗೆ ಆಹಾರವಾಗುತ್ತಿದೆ. ಈ ಭಾಗದ ದನ ಕರುಗಳೂ ಈ ತ್ಯಾಜ್ಯಕ್ಕಾಗಿ ಹಾತೊರೆಯುತ್ತಿದ್ದು ತ್ಯಾಜ್ಯದ ಜೊತೆಗೆ ಪ್ಲಾಸ್ಟಿಕ್‌ಗಳನ್ನು ಸೇವಿಸುತ್ತಿದೆ. ಪಿಲಾರು ಖಾನದ ಅರಣ್ಯ ಪ್ರದೇಶ ಆರಂಭಗೊಳ್ಳುವುದರಿಂದ ಸೂಡ ಕ್ರಾಸ್‌ ಬಳಿಯ ವರೆಗೆ ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆಯಲಾಗಿದೆ 

ಗ್ರಾಮ ಪಂಚಾಯತ್‌ ಮೌನ
ಹಲವಾರು ತಿಂಗಳುಗಳಿಂದ ಇಲ್ಲಿ ತ್ಯಾಜ್ಯ ಸುರಿಯುತ್ತಿದ್ದರೂ ಮುದರಂಗಡಿ ಪಂಚಾಯತ್‌ ಆಡಳಿತ ಮೌನ ವಹಿಸಿದೆ. ರಸ್ತೆಯ ಪಕ್ಕದಲ್ಲಿ ಸುರಿಯಲಾಗುವ ತ್ಯಾಜ್ಯಕ್ಕೆ ಬ್ರೇಕ್‌ ಹಾಕಲು ಸ್ಥಳಿಯಾಡಳಿತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ 

ರಸ್ತೆ ಪಕ್ಕದಲ್ಲೇ ತ್ಯಾಜ್ಯ
ಈ ಪರಿಸರದಲ್ಲಿ ಕೆಲವರು ದೂರದಿಂದ ತ್ಯಾಜ್ಯವನ್ನು ತಂದು ಇಲ್ಲಿನ ರಸ್ತೆಯ ಪಕ್ಕದಲ್ಲಿ ಸುರಿದು ಹೋಗುತ್ತಾರೆ. ಕೆಲವೊಂದು ಬಾರಿ ಕೊಳಕು ವಾಸನೆಯೂ ಬರುತ್ತಿದೆ.
– ದಿನೇಶ್‌ ಪೂಜಾರಿ, ಸ್ಥಳೀಯರು.

Advertisement

ತುರ್ತು ಕ್ರಮ ಕೈಗೊಳ್ಳಿ
ರಸ್ತೆಯ ಪಕ್ಕದಲ್ಲಿ ತ್ಯಾಜ್ಯ ಸುರಿಯುತ್ತಿರುವ ಕ್ರಮ ಪ್ರಕೃತಿಗೆ ಮಾರಕವಾಗಿದೆ. ತ್ಯಾಜ್ಯ ಸುರಿಯುವವರ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ. 
– ಸತೀಶ್‌, ಗ್ರಾಮಸ್ಥ

Advertisement

Udayavani is now on Telegram. Click here to join our channel and stay updated with the latest news.

Next