Advertisement

ಕಸ ವಿಲೇವಾರಿ ಘಟಕದ ವಿರುದ್ಧ ತೀವ್ರ ಪ್ರತಿಭಟನೆ

11:42 AM Dec 05, 2021 | Team Udayavani |

ದೊಡ್ಡಬಳ್ಳಾಪುರ: ತಾಲೂಕಿನ ಚಿಗರೇನಹಳ್ಳಿಯಲ್ಲಿನ ಎಂಎಸ್‌ ಜಿಪಿ ಕಸ ವಿಲೇವಾರಿ ಘಟಕಕ್ಕೆ ಬಿಬಿಎಂಪಿ ವ್ಯಾಪ್ತಿಯಿಂದ ಕಸ ತಂದು ಸುರಿಯುತ್ತಿರುವುದನ್ನು ವಿರೋಧಿಸಿ ಗ್ರಾಮಸ್ಥರು ನಡೆಸುತ್ತಿರುವ ಧರಣಿ ಶನಿವಾರವೂ ಸಹ ಮುಂದಿವರೆದಿತ್ತು.

Advertisement

ಈ ನಡುವೆ ಓಮಿಕ್ರಾನ್‌ ಸೋಂಕಿನ ಕಾರಣ ಜಿಲ್ಲಾಧಿಕಾರಿ ಜಾರಿಗೆ ತಂದಿದ್ದ ನೂತನ ಕೋವಿಡ್‌ ನಿಯಮ ಮುಂದಿಟ್ಟುಕೊಂಡು ಪ್ರತಿಭಟನಾ ಧರಣಿಗೆ ಅಧಿಕಾರಿಗಳು ಹಾಗೂ ಪೊಲೀಸರು ತಡೆಯೊಡ್ಡಿ, ಬಲಪ್ರಯೋಗಿಸುವ ಮೂಲಕ ಹೋರಾಟ ಸ್ಥಗಿತಗೊಳಿಸಿದರು. ಧರಣಿ ಸ್ಥಳಕ್ಕೆ ಶನಿವಾರ ಬೆಳಗ್ಗೆ ತಹಶೀಲ್ದಾರ್‌ ಟಿ.ಎಸ್‌. ಶಿವರಾಜು, ಡಿವೈಎಸ್ಪಿ ನಾಗರಾಜು ಅವರು ಭೇಟಿ ನೀಡಿ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿಭಟನಾ ಧರಣಿಯನ್ನು ಹಿಂಪಡೆಯುವಂತೆ ಸೂಚಿಸಿದರು.

ಇದನ್ನೂ ಓದಿ:- ಮುಂದಿನ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿಯವರೇ ಸಿಎಂ: ಸಚಿವ ಈಶ್ವರಪ್ಪ

ಆದರೆ ಪ್ರತಿಭಟನಾಕಾರರು ಒಪ್ಪದೇ ಧರಣಿ ಮುಂದುವರೆಸುತ್ತಿದ್ದಾಗ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ನೇತೃತ್ವದಲ್ಲಿ ಮಾರ್ಷಲ್‌ಗ‌ಳು ಹಾಗೂ ಸ್ಥಳೀಯ ಪೊಲೀಸರು ಧರಣಿನಿರತರು ಹಾಕಿದ್ದ ಶಾಮಿಯಾನವನ್ನು ತೆರವುಗೊಳಿಸಲು ಮುಂದಾದರು. ಈ ವೇಳೆ ಧರಣಿನಿರತರು ಮಾರ್ಷಲ್‌ಗ‌ಳ ನಡುವೆ ವಾಗ್ವಾದ ನಡೆಯಿತು. ಸುಮಾರು 50 ಜನರನ್ನು ಬಂಧಿಸಿ ಧರಣಿ ಸ್ಥಳದಿಂದ ಬೇರೆಡೆಗೆ ಕರೆದೊಯ್ದರು.

ಗಾಯಗೊಂಡ ಧರಣಿ ನಿರತರು: ಧರಣಿಯಲ್ಲಿ ಭಾಗಿಯಾಗಿದ್ದ ತಣ್ಣೀರನಹಳ್ಳಿ ಗ್ರಾಮದ ರೈತ ಸುರೇಶ್‌, ಕೊರಟಗೆರೆ ತಾಲೂಕು ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್‌ ಬಾಷ ಲಾಠಿ ಏಟಿನಿಂದ ಗಾಯಗೊಂಡಿದ್ದಾರೆ. ಬಿಬಿಎಂಪಿ ಇಲ್ಲಿನ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ತಂದು ರಾಶಿಹಾಕಿರುವ ಕಸದಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉಂಟಾಗಿರುವ ಅನಾಹುತಗಳನ್ನು ಕಣ್ಣಾರೆಕಂಡಿದ್ದ ಪೊಲೀಸರು ರೈತರ ಮನವೊಲಿಸಿ ಧರಣಿ ಅಂತ್ಯಗೊಳಿಸುವಲ್ಲಿ ವಿಫಲರಾಗಿದ್ದರು. ಇದರಿಂದ ಬೇಸತ್ತಿದ್ದ ಬಿಬಿಎಂಪಿ ಧರಣಿ ಹಿಂಪಡೆಯುವಂತೆ ಮಾಡಿದ್ದ ಮನವಿ ವಿಫ‌ಲವಾಗಿತ್ತು. ಪರಿಣಾಮ ಲಘು ಬಲ ಪ್ರಯೋಗಿಸಿ ಧರಣಿ ಅಂತ್ಯಗೊಳಿಸಿದೆ.

Advertisement

ಮಾರ್ಷಲ್‌ಗ‌ಳ ಬಳಕೆಗೆ ತೀವ್ರ ಖಂಡನೆ: ಪೊಲೀಸ್‌ ಇಲಾಖೆಗಷ್ಟೇ ಧರಣಿ ನಿರತರನ್ನು ಬಂಧಿಸುವ, ಕಾನೂನು ಸುವ್ಯವಸ್ಥೆ ಕಾಪಾಡುವ ಅಧಿಕಾರ ನೀಡಲಾಗಿದೆ. ಆದರೆ ಬಿಬಿಎಂಪಿ ಕೋವಿಡ್‌ ಸಂದರ್ಭದಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಸಲುವಾಗಿ ಒಪ್ಪಂದದ ಆಧಾರ ಮೇಲೆ ನೇಮಕ ಮಾಡಿಕೊಂಡಿರುವ ಮಾರ್ಷಲ್‌ಗ‌ಳ ಮೂಲಕ ಧರಣಿ ನಿರತ ಗ್ರಾಮಸ್ಥರನ್ನು ಬಂಧಿಸಲು ಬಳಸಿಕೊಂಡಿರುವುದು ಖಂಡನೀಯ ಎಂದು ಧರಣಿಯಲ್ಲಿ ಭಾಗವಹಿಸಿದ್ದ ಕೃಷ್ಣ ಮೂರ್ತಿ, ರಾಜಣ್ಣ, ತಿಳಿಸಿದ್ದಾರೆ.

ಪೊಲೀಸ್‌ ಬಲಪ್ರಯೋಗದ ಮೂಲಕ ಧರಣಿ ಹತ್ತಿಕ್ಕುತ್ತಿರುವ ಅಧಿ ಕಾರಿಗಳ ಕ್ರಮವನ್ನು ಕೆ.ವಿ.ಸತ್ಯಪ್ರಕಾಶ್‌, ಭಕ್ತರಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಲಿಂಗಯ್ಯ, ನವ ಬೆಂಗಳೂರು ಹೋರಾಟ ಸಮಿತಿ ಅಧ್ಯಕ್ಷ ಜಿ.ಎನ್‌ .ಪ್ರದೀಪ್‌ ಖಂಡಿಸಿದ್ದು, ಶಾಂತಿಯುತ ಹೋರಾಟಕ್ಕೆ ಅಧಿಕಾರಿಗಳು ಪೊಲೀಸ್‌ ಬಲಪ್ರಯೋಗಿಸಿ ಹಕ್ಕನ್ನು ಕಸಿದುಕೊಂಡಿದ್ದಾರೆ. ಹೋರಾಟ ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ಮತ್ತೆ ಭಾನುವಾರ ಮುಂದುವರೆಯಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next