Advertisement

ತ್ಯಾಜ್ಯ ನಿರ್ವಹಣೆ; ಆ್ಯಂಟೊನಿ ಸಂಸ್ಥೆಯ ಗುತ್ತಿಗೆ ಅವಧಿ ಮತ್ತೆ ವಿಸ್ತರಣೆ?

04:10 PM Jun 27, 2023 | Team Udayavani |

ಲಾಲ್‌ಬಾಗ್‌: ನಗರದ ತ್ಯಾಜ್ಯ ನಿರ್ವಹಣೆ ನಡೆಸುತ್ತಿರುವ “ಆ್ಯಂಟೊನಿ ವೇಸ್ಟ್‌ ಹ್ಯಾಂಡ್ಲಿಂಗ್‌ ಸಂಸ್ಥೆ’ಯ ಗುತ್ತಿಗೆ ಅವಧಿ ಮುಂದಿನ ತಿಂಗಳು ಕೊನೆಗೊಳ್ಳಲಿದ್ದು ಹೊಸ ವ್ಯವಸ್ಥೆ ಆರಂಭಕ್ಕೆ ಮಾತ್ರ ಇನ್ನೂ ಕಾಲ ಕೂಡಿಬಂದಿಲ್ಲ! ಹೀಗಾಗಿ ಆ್ಯಂಟೊನಿ ಸಂಸ್ಥೆಗೆ ಮತ್ತೆ ಗುತ್ತಿಗೆ ಅವಧಿಯನ್ನು ಕೆಲವು ತಿಂಗಳು ಮುಂದುವರಿಸುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದೆ.

Advertisement

ತ್ಯಾಜ್ಯ ನಿರ್ವಹಣೆಗಾಗಿ ಆ್ಯಂಟೊನಿ ಸಂಸ್ಥೆಯ ಏಳು ವರ್ಷಗಳ ಅವಧಿ 2022ರ ಜನವರಿಗೆ ಅಂತ್ಯಗೊಂಡಿತ್ತು. ಮುಂದೆ ಹೊಸ ಟೆಂಡರ್‌ ಆಗುವವರೆಗೆ ಮತ್ತೆ ಆ್ಯಂಟನಿ ಸಂಸ್ಥೆಗೆ 2023 ಜ. 31ರ ವರೆಗೆ (1 ವರ್ಷ) ವಿಸ್ತರಿಸಲಾಗಿತ್ತು. ಅನಂತರವೂ 6 ತಿಂಗಳುಗಳ ಕಾಲ ಗುತ್ತಿಗೆ ಅವಧಿ ವಿಸ್ತರಣೆಗೊಂಡಿದೆ. ಇದರಂತೆ ಆಗಸ್ಟ್‌ನಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಬೇಕಿತ್ತು.

ಸದ್ಯದ ಮಾಹಿತಿ ಪ್ರಕಾರ, ಆಗಸ್ಟ್‌ ಸಹಿತ ಮೂರು ತಿಂಗಳು ಆ್ಯಂಟಿನಿ ಸಂಸ್ಥೆಗೆ ಗುತ್ತಿಗೆ ಅವಧಿ ವಿಸ್ತರಣೆಗೆ ಅನುಮತಿ ನೀಡುವ ಬಗ್ಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಉದ್ದೇಶಿಸಲಾಗಿದೆ.
ಈ ಮೂರು ತಿಂಗಳ ಒಳಗೆ ತ್ಯಾಜ್ಯ ನಿರ್ವಹಣೆಗೆ ಹೊಸ ವ್ಯವಸ್ಥೆ ಜಾರಿಗೆ ಎಲ್ಲ ಸಿದ್ಧತೆ ನಡೆಸುವುದು ಇದರ ಉದ್ದೇಶ. ಒಂದು ವೇಳೆ ಗುತ್ತಿಗೆ ಅವಧಿ ವಿಸ್ತರಣೆಗೆ ಸರಕಾರ ನಿರಾಕರಿಸಿದರೆ ಜಿಲ್ಲಾಧಿಕಾರಿಯವರ ವಿಶೇಷ ಅನು ಮೋದನೆಯೊಂದಿಗೆ 2 ತಿಂಗಳ ಅವಧಿ ಯವರೆಗೆ ವಿಸ್ತರಣೆ ನಡೆಸಿ ಆ ವೇಳೆ ಹೊಸ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.

ಗುತ್ತಿಗೆ ವಿಸ್ತರಣೆ ಯಾಕೆ?
ಹೊಸ ವ್ಯವಸ್ಥೆಯ ಪ್ರಕಾರ ಮಂಗಳೂರು ಪಾಲಿಕೆಯೇ ತ್ಯಾಜ್ಯ ನಿರ್ವಹಣೆಗೆ ಬೇಕಾದ ಎಲ್ಲ ವಾಹನ ಗಳನ್ನು ಖರೀದಿಸುತ್ತದೆ. ಇದರಂತೆ ವಾಹನ ಖರೀದಿ ಪ್ರಕ್ರಿಯೆ ಬಹುತೇಕ ಮುಕ್ತಾಯವಾಗಿದೆ.

ವಾಹನಕ್ಕೆ ಬೇಕಾದ ಚಾಲಕರು, ಲೋಡರ್ನವರನ್ನು ಮಾತ್ರ ಹೊರಗುತ್ತಿಗೆ ಆಧಾರದಲ್ಲಿ ಪಡೆಯಲು ನಿರ್ಧರಿಸಲಾಗಿದೆ. ಇದರ ಟೆಂಡರ್‌ ಕೆಲವೇ ದಿನದಲ್ಲಿ ಅಂತಿಮವಾಗಲಿದೆ. ಹೀಗಾಗಿ ಕಾರ್ಯಾಚರಣೆ ಹಾಗೂ ನಿರ್ವಹಣೆ ಹೊರ ಗುತ್ತಿಗೆ ನೆಲೆ ಯಲ್ಲಿ ನಡೆಯಲಿದೆ. ಈ ಪ್ರಕ್ರಿಯೆ ಪೂರ್ಣವಾಗಲು ಕನಿಷ್ಠ 2 ತಿಂಗಳ ಅಗತ್ಯವಿದೆ!

Advertisement

ಸ್ವತ್ಛತೆಗೆ ಪೌರಕಾರ್ಮಿಕರು
ಪಾಲಿಕೆ ವ್ಯಾಪ್ತಿಯ ಎಲ್ಲ ರಸ್ತೆ, ಗಿಡಗಂಟಿ ತೆರವು ಚರಂಡಿ ಸ್ವತ್ಛತೆ ಎಲ್ಲವನ್ನು ಇದೀಗ ಆ್ಯಂಟೊನಿ ಸಂಸ್ಥೆಯವರು ಮಾಡುತ್ತಿದ್ದಾರೆ. ಹೊಸ ವ್ಯವಸ್ಥೆ ಬಂದ ಬಳಿಕ ಪಾಲಿಕೆಯಿಂದ ನೇರ ನೇಮಕಾತಿ/ಪಾವತಿ ಆಧಾರದಲ್ಲಿ ಆಯ್ಕೆಯಾದ ಪೌರಕಾರ್ಮಿಕರು ಈ ಕೆಲಸ ಮಾಡಲಿದ್ದಾರೆ. ರಸ್ತೆ, ಸಣ್ಣ ಚರಂಡಿ ಸಹಿತ ಎಲ್ಲ ಕಡೆಯ ಸ್ವತ್ಛತೆ ಇವರಿಂದಲೇ ನಡೆಯಲಿದೆ.

ನಿರ್ವಹಣೆ ಕಷ್ಟ!
ವಾಹನಗಳನ್ನು ಪಾಲಿಕೆ ಖರೀದಿಸಿ ಅದನ್ನು ಗುತ್ತಿಗೆ ಪಡೆದ ಜನರು ನಿರ್ವಹಿಸಿದರೆ ಅದರ ನಿರ್ವಹಣೆ ಬಗ್ಗೆಯೇ ಈಗ ಪ್ರಶ್ನೆಗಳು ಎದುರಾ ಗಿದೆ. ಸ್ವಂತ ವಾಹನಗಳ ನಿರ್ವಹ ಣೆಯೇ ಇಂದು ಸಮರ್ಪಕವಾಗಿ ನಡೆಯು ತ್ತಿಲ್ಲ; ಹೀಗಿರುವಾಗ ಪಾಲಿಕೆ ವಾಹನಗಳನ್ನು ಗುತ್ತಿಗೆ ಪಡೆದವರು ಯಾವ ರೀತಿ ನಿರ್ವಹಣೆ ಮಾಡಬಹುದು ಎಂಬ ಬಗ್ಗೆ ಹಲವು ಕಾರ್ಪೋರೆಟರ್‌ಗಳು ಆಕ್ಷೇಪ ಎತ್ತಿದ್ದಾರೆ.

ಗುತ್ತಿಗೆ ಅವಧಿ ವಿಸ್ತರಣೆ ಸಾಧ್ಯತೆ
ನಗರದಲ್ಲಿ ಪ್ರಾಥಮಿಕ ಕಸ ಸಂಗ್ರಹ, ಸಾಗಾಣೆಗೆ ಅಗತ್ಯ ವಾಹನಗಳ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಕಾರ್ಯಾಚರಣೆ, ನಿರ್ವಹಣೆಗೆ ಹೊಸ ಟೆಂಡರ್‌ ಕರೆಯುವ ಅಗತ್ಯವಿದ್ದು, ಇದು ಈಗಾಗಲೇ ಅನುಷ್ಠಾನ ಹಂತದಲ್ಲಿದೆ. ಆದರೆ ಇದಕ್ಕೆ ಇನ್ನೂ ಸಮಯ ಬೇಕಾಗಬಹುದು. ಹೀಗಾಗಿ ಆ್ಯಂಟೊನಿ ಸಂಸ್ಥೆಯವರಿಗೆ ಗುತ್ತಿಗೆ ಅವಧಿ ಕೊಂಚ ತಿಂಗಳು ಮುಂದುವರಿಸುವ ಬಗ್ಗೆ ಪಾಲಿಕೆ ಚಿಂತನೆ ನಡೆಸಿದ್ದು, ಸಾಮಾನ್ಯ ಸಭೆಯಲ್ಲಿ ಇದು ಅಂತಿಮವಾಗಲಿದೆ.
-ಪ್ರೇಮಾನಂದ ಶೆಟ್ಟಿ,
ಮುಖ್ಯ ಸಚೇತಕರು, ಮಹಾನಗರ ಪಾಲಿಕೆ

4 ವಲಯ ನಿಗದಿ
ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳನ್ನು 4 ವಲಯಗಳಲ್ಲಿ (ಸುರತ್ಕಲ್‌, ಸೆಂಟ್ರಲ್‌ ಎ, ಸೆಂಟ್ರಲ್‌ ಬಿ, ಕದ್ರಿ) ವಾರ್ಡ್‌ ಗಳನ್ನು ವಿಂಗಡಿಸಿ ಪಾಲಿಕೆಯ ವತಿಯಿಂದ ಖರೀದಿಸಲಾಗುವ ವಾಹನಗಳನ್ನು ಪ್ರತ್ಯೇಕ 4 ಪ್ಯಾಕೇಜ್‌ಗಳಾಗಿ ಮನೆ ಮನೆ ಕಸ ಸಂಗ್ರಹ, ಸಾಗಣೆ ಕೈಗೊಳ್ಳಲಾಗುತ್ತದೆ. ಪಾಲಿಕೆಯಲ್ಲಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಅಂದಾಜು 300-330 ಟನ್‌ ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next