ಕೋಟೇಶ್ವರ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ರಾ. ಹೆದ್ದಾರಿ ಹಾಗೂ ಒಳಭಾಗಗಳಲ್ಲಿ ಸುರಿಯುತ್ತಿರುವ ತ್ಯಾಜ್ಯ ವಿಲೇವಾರಿ ಮಾಡಿರುವ ಗ್ರಾ.ಪಂ.ಗೆ ಮತ್ತೆ ತಲೆ ಎತ್ತಿರುವ ಮೂಟೆಗಟ್ಟಲೆ ತ್ಯಾಜ್ಯವು ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟುಮಾಡಿದ್ದು ಮುಂಬರುವ ಮಳೆಗಾಲದಲ್ಲಿ ಈ ಭಾಗದಲ್ಲಿ ವಾಸವಾಗಿರುವ ಮಂದಿ ಭಯದ ಪರಿಸರದಲ್ಲಿ ಜೀವಿಸಬೇಕಾದ ಸಂದಿಗ್ಧ ಪರಿಸ್ಥಿತಿ ಬಂದೊದಗಿದೆ.
ಮಳೆಗಾಲದ ಮೊದಲು ರಾ.ಹೆ.ಯ ಇಕ್ಕೆಲಗಳಲ್ಲಿ ಮೂಟೆಗಟ್ಟಲೆ ಎಸೆದು ಹೋದ ತ್ಯಾಜ್ಯ ವಸ್ತುಗಳನ್ನು ವಿಲೇವಾರಿಗೊಳಿಸಿ ಆ ಭಾಗದ ಪ್ರದೇಶದಲ್ಲಿ ಎಚ್ಚರಿಕೆಯ ಫಲಕ ಹಾಕಿ ಜನಜಾಗೃತಿಯ ಮುನ್ನೆಚ್ಚರಿಕೆ ನೀಡಲಾಗಿದ್ದರೂ ಇದೀಗ ಮತ್ತೆ ಅದೇ ಹಳೆ ಚಾಳಿ ಆರಂಭವಾಗಿದ್ದು ಅಲ್ಲಲ್ಲಿ ತ್ಯಾಜ್ಯಗಳನ್ನು ಎಸೆದು ಸಾಗುವ ಮಂದಿಯ ಈ ವರ್ತನೆಗೆ ಪಂಚಾಯತ್ ವ್ಯವಸ್ಥೆ ಕೈಚೆಲ್ಲಿ ಕುಳಿತುಕೊಳ್ಳಬೇಕಾಗಿದೆ.
ಇಲ್ಲಿನ ಹಿಂದೂ ರುದ್ರಭೂಮಿಯ ಎದುರಿನ ರಸ್ತೆಯಲ್ಲಿ ಆರಂಭಗೊಳ್ಳುತ್ತಿರುವ ಬೃಹತ್ ಕಟ್ಟಡದ ಸನಿಹದ ಒಳಚರಂಡಿಯನ್ನು ತ್ಯಾಜ್ಯ ವಿಲೇವಾರಿ ಹಾಕಲು ಕೆಲವೊಂದು ಮಂದಿ ಬಳಸುತ್ತಿರುವುದು ತೀರಾ ಅಸಹನೀಯ ವರ್ತನೆಯಾಗಿ ಮೂಡಿಬಂದಿದೆ. ಅದೆಷ್ಟೋ ಬಾರಿ ಜನಜಾಗೃತಿ ಸಭೆ, ಬ್ಯಾನರ್‌ಗಳ ಮೂಲಕ ಎಚ್ಚರಿಕೆ ನೀಡಲಾಗಿದ್ದರೂ ಮತ್ತೆ ಮಳೆಗಾಲದ ಆರಂಭದ ಈ ಹಂತದಲ್ಲಿ ಚರಂಡಿಯಲ್ಲಿ ತ್ಯಾಜ್ಯ ಎಸೆಯುತ್ತಿರುವುದು ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಕಾರಣವಾಗುತ್ತಿದೆ.
ಕಾಳಾವರ ಗ್ರಾ.ಪಂ. ವ್ಯಾಪ್ತಿಯ ವಕ್ವಾಡಿಯ ಸರಕಾರಿ ಸ್ವಾಮ್ಯದ ರಸ್ತೆ ಪಕ್ಕದ ಜಾಗದಲ್ಲಿ ಮೂಟೆಗಟ್ಟಲೆ ತ್ಯಾಜ್ಯ ಎಸೆದಿರುವುದು ಮುಂಬರುವ ಮಳೆಗಾಲದಲ್ಲಿ ಅಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಾಣುಗಳು ಹರಡುವ ಭೀತಿ ಇದೆ. ತ್ಯಾಜ್ಯ ವಿಲೇವಾರಿಯ ಪ್ರಕ್ರಿಯೆಯು ಇದೀಗ ಎಲ್ಲ ಗ್ರಾ.ಪಂ. ಗಳಿಗೆ ತಲೆನೋವಾಗಿ ಮೂಡಿದ್ದು ಪರಿಹಾರ ಕಂಡುಕೊಳ್ಳುವಲ್ಲಿ ಅಥವಾ ತ್ಯಾಜ್ಯ ವಿಲೇ ವಾರಿ ಘಟಕವನ್ನು ಆರಂಭಿಸಲು ಸೂಕ್ತ ಸರಕಾರಿ ಭೂಮಿ ಇದ್ದರೂ ಅಲ್ಲಿನ ಆಸು ಪಾಸಿನ ನಿವಾಸಿಗಳ ವಿರೋಧದಿಂದಾಗಿ ಆ ಒಂದು ಯೋಜನೆ ಕೈಬಿಡಬೇಕಾಗಿದೆ. ಕುಂದಾಪುರ ಪುರಸಭೆಯ ಬೃಹತ್ ತ್ಯಾಜ್ಯ ವಿಲೇವಾರಿ ಘಟಕವು ಅದರ ಆಸುಪಾಸಿನ ಗ್ರಾ.ಪಂ.ಗಳಿಗೆ ಉಪಯೋಗಿಯಾಗಿದ್ದರೂ ಆ ಘಟಕಕ್ಕೆ ತ್ಯಾಜ್ಯ ಒಯ್ಯಲು ಪುರಸಭೆ ನಿರಾಕರಿಸುತ್ತಿರುವುದು ಪಂಚಾಯತ್‌ಗಳಿಗೆ ಬಗೆಹರಿಯದ ಸಮಸ್ಯೆಯಾಗಿ ಮುಂದುವರಿಯುತ್ತಿದೆ.
ಇತ್ತೀಚಿನ ದಿನಗಳಲ್ಲಿ ನೀರಿನ ಹೊರ ಹರಿವಿಗೆ ಯೋಗ್ಯವಾದ ರೀತಿಯಲ್ಲಿ ಒಳಚರಂಡಿಯ ವ್ಯವಸ್ಥೆ ಗೊಳಿಸಬೇಕಾಗಿರುವ ಗ್ರಾಮ ಪಂಚಾಯತ್‌ಗಳು ಆ ಬಗ್ಗೆ ಹೆಚ್ಚಿನ ಕಾಳಜಿ ವಹಿಸದಿರುವುದು, ತ್ಯಾಜ್ಯ ವಸ್ತುಗಳನ್ನು ಎಸೆಯಲು ಅನಾಗರಿಕ ಪ್ರವೃತ್ತಿಯ ಮಂದಿಗೆ ಹೊಸ ಚೆ„ತನ್ಯ ಕಲ್ಪಿಸಿದಂತಾಗಿದೆ.
ಒಟ್ಟಾರೆ ಸ್ವತ್ಛ ಭಾರತದ ಪರಿಕಲ್ಪನೆಗೆ ಅದೆಷ್ಟೋ ಕಡೆ ಜನಪರ ಕಾಳಜಿ ಯಿಂದ ಸಂಘಟನೆಗಳು ಸೂಕ್ತ ಕ್ರಮ ಕೈಗೊಂಡರೂ ತಮ್ಮ ಮನೆಯ ಕಸವನ್ನು ಬೇರೆಡೆ ಎಸೆಯುವ ಹುಚ್ಚು ಮನಸ್ಸಿನ ವಿಲಕ್ಷಣ ಬುದ್ಧಿಯ ಕೆಲವೊಂದು ಮಂದಿಯ ಈ ಒಂದು ಪ್ರವೃತ್ತಿಯು ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾ, ಟೆ„ಫಾಯ್ಡ ಮುಂತಾದ ಸಾಂಕ್ರಾಮಿಕ ರೋಗಗಳಿಗೆ ಎಡೆಮಾಡಿಕೊಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
– ಡಾ| ಸುಧಾಕರ ನಂಬಿಯಾರ್