Advertisement

ಗ್ರಾ.ಪಂ.ಗಳಲ್ಲಿ ಇನ್ನು ತ್ಯಾಜ್ಯ ಘಟಕ ಕಡ್ಡಾಯ

10:06 AM Feb 22, 2020 | mahesh |

ಮಂಗಳೂರು: ಗ್ರಾಮೀಣ ಪ್ರದೇಶಗಳನ್ನು ಬೃಹತ್ತಾಗಿ ಕಾಡಲಾರಂಭಿಸಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇನ್ನು ಮುಂದೆ ಎಲ್ಲ ಗ್ರಾಮ ಪಂಚಾಯತ್‌ಗಳು ತ್ಯಾಜ್ಯ ನಿರ್ವಹಣೆ ಅಥವಾ ವಿಂಗಡಣ ಘಟಕ ಹೊಂದುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಮೊದಲ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಗಳಲ್ಲಿ ಇದನ್ನು ಜಾರಿಗೊಳಿಸಲಾಗುತ್ತಿದೆ. ಈ ನಾಲ್ಕು ಜಿಲ್ಲೆಗಳು 2016ರ ಅಕ್ಟೋಬರ್‌ನಲ್ಲೇ “ಬಯಲುಶೌಚ ಮುಕ್ತ ಜಿಲ್ಲೆಗಳು’ ಎಂದು ಘೋಷಿಸಿ ಕೊಂಡಿದ್ದು, ತ್ಯಾಜ್ಯ ವಿಲೇವಾರಿ ಯಲ್ಲಿಯೂ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಮೊದಲ ಹಂತದಲ್ಲಿ ಈ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ. ಶೇ. 100 ಗುರಿ ಸಾಧಿಸುವಂತೆ ಪಂ.ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಸೂಚನೆ ನೀಡಿದೆ.

ಕನಿಷ್ಠ 500 ಚದರಡಿ ಅಗತ್ಯ
ಜಾಗ, ಹಣಕಾಸು ಕೊರತೆ ಮೊದಲಾದ ಕಾರಣಗಳನ್ನು ನೀಡಿ ಯಾವುದೇ ಗ್ರಾ.ಪಂ. ಘಟಕ ಸ್ಥಾಪಿಸಲು ಹಿಂದೇಟು ಹಾಕಿದರೆ ಕ್ರಮ ಕೈಗೊಳ್ಳಲು ಕೆಲವು ಜಿಲ್ಲೆಗಳಲ್ಲಿ ತೀರ್ಮಾನಿಸಲಾಗಿದೆ. ದ.ಕ. ಜಿಲ್ಲೆಯ ಗ್ರಾ.ಪಂ.ಗಳಿಗೆ ಮಾರ್ಚ್‌ ಅಂತ್ಯದ ಗಡುವು ನೀಡಲಾಗಿದೆ. ಆದೇಶ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲು ಎಪ್ರಿಲ್‌ನಲ್ಲಿ “ನಡಾವಳಿ’ಯನ್ನು ರೂಪಿಸಲು ನಿರ್ಧರಿಸಲಾಗಿದೆ. ಪ್ರತೀ ಗ್ರಾ.ಪಂ. ಕನಿಷ್ಠ 500 ಚದರ ಅಡಿ ವಿಸ್ತೀರ್ಣದ ತ್ಯಾಜ್ಯ ನಿರ್ವಹಣ ಘಟಕ ಹೊಂದಿರಲೇಬೇಕು. ತನ್ನಿಂದ ಮಂಜೂರಾದ ಘಟಕಗಳಿಗೆ ಸರಕಾರವೇ ಅನುದಾನ ನೀಡುತ್ತಿದೆ. ಆದರೆ ಮುಂದಕ್ಕೆ ಗ್ರಾ.ಪಂ.ಗಳು ತಮ್ಮ ಅನುದಾನದಲ್ಲೇ ಘಟಕ ಆರಂಭಿಸುವಂತೆ ತಿಳಿಸಲಾಗಿದೆ.

ಒಣ ತ್ಯಾಜ್ಯಕ್ಕೆ ಆದ್ಯತೆ
ಒಣ ಮತ್ತು ಹಸಿ ತ್ಯಾಜ್ಯಗಳೆರಡರ ನಿರ್ವಹಣೆ ಅಸಾಧ್ಯವೆಂದಾದರೆ ಅಂತಹ ಗ್ರಾ.ಪಂ.ಗಳು ಮೊದಲು ಒಣ ತ್ಯಾಜ್ಯವನ್ನು ಸಂಗ್ರಹಿಸಿ ವ್ಯವಸ್ಥಿತವಾಗಿ ವಿಂಗಡಿಸಬೇಕು. ಸ್ಥಳಾವಕಾಶದ ಕೊರತೆ ಇದ್ದರೆ ಎರಡು-ಮೂರು ಪಂಚಾಯತ್‌ಗಳು ಸೇರಿ ಒಂದು ಘಟಕ ಸ್ಥಾಪಿಸಬಹುದು. ಅದೂ ಅಸಾಧ್ಯವಾದಲ್ಲಿ ತಮ್ಮ ವ್ಯಾಪ್ತಿಯ ಪಾಳು ಬಿದ್ದಿರುವ ಯಾವುದೇ ಕಟ್ಟಡವನ್ನು ಬಳಸಿಕೊಳ್ಳುವಂತೆ ಸ್ಪಷ್ಟ ಸೂಚನೆ ಇದೆ.

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಇರುವ ತ್ಯಾಜ್ಯ ನಿರ್ವಹಣ ಘಟಕಗಳು ಎಸ್‌ಎಲ್‌ಆರ್‌ಎಂ (ಒಣ ಮತ್ತು ದ್ರವ ಸಂಪನ್ಮೂಲ ನಿರ್ವಹಣ ಕೇಂದ್ರ) ಘಟಕಗಳ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಮಾನವ ಶ್ರಮದಲ್ಲಿ ತ್ಯಾಜ್ಯ ವಿಂಗಡಣೆ ನಡೆಯುತ್ತಿದೆ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಮತ್ತಷ್ಟು ವ್ಯವಸ್ಥಿತವಾಗಿ ನಡೆಸಲು ಉಡುಪಿ, ದ.ಕ. ಜಿಲ್ಲೆಗಳಿಗೆ ಎಂಆರ್‌ಎಫ್ (ಯಾಂತ್ರೀಕೃತ ಒಣತ್ಯಾಜ್ಯ ವಿಂಗಡಣ ಘಟಕ) ಮಂಜೂರಾಗಿದೆ. ಇದು ಗ್ರಾ.ಪಂ.ಗಳ ತ್ಯಾಜ್ಯ ನಿರ್ವಹಣ ಘಟಕಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ.

Advertisement

ತ್ಯಾಜ್ಯ ಘಟಕವೆಂದರೆ ಕಸದ ರಾಶಿ ಹಾಕುವುದಲ್ಲ; ಅದನ್ನು ವ್ಯವಸ್ಥಿತವಾಗಿ ಬೇರ್ಪಡಿಸಿ ಸಂಪನ್ಮೂಲ ವನ್ನಾಗಿಸಿ ಮಾರಾಟ ಮಾಡುವುದು. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು ದ.ಕ. ಜಿಲ್ಲೆಯ ಹೆಚ್ಚಿನ ಗ್ರಾ.ಪಂ.ಗಳು ಆಸಕ್ತಿ ತೋರುತ್ತಿವೆ.
– ಮಂಜುಳಾ, ಸ್ವತ್ಛ ಭಾರತ್‌ ಮಿಷನ್‌ನ ಜಿಲ್ಲಾ ಸಂಯೋಜಕಿ, ದ.ಕ.

ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲೂ ತ್ಯಾಜ್ಯ ನಿರ್ವಹಣ ಘಟಕ ಆರಂಭಿಸಲು ಸೂಚಿಸಲಾಗಿದೆ. 2020ರೊಳಗೆ ಶೇ. 100ರಷ್ಟು ಗುರಿ ಸಾಧಿಸುವ ವಿಶ್ವಾಸವಿದೆ. ಜಿಲ್ಲೆಯ ಎಂಆರ್‌ಎಫ್ ಘಟಕವನ್ನು ಮಂಗಳೂರು ತಾಲೂಕಿನ ಗಂಜಿಮಠದ 2 ಎಕರೆ ಜಾಗದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಶೀಘ್ರ ಡಿಪಿಆರ್‌ (ಸಮಗ್ರ ಯೋಜನಾ ವರದಿ) ಸಿದ್ಧಪಡಿಸಲಾಗುವುದು.
– ಡಾ| ಸೆಲ್ವಮಣಿ ಆರ್‌., ಸಿಇಒ ದ.ಕ. ಜಿ.ಪಂ.

ಉಡುಪಿ ಜಿಲ್ಲೆಯ 158 ಗ್ರಾಮ ಪಂಚಾಯತ್‌ ಗಳ ಪೈಕಿ 100ಕ್ಕೂ ಅಧಿಕ ಗ್ರಾ.ಪಂ. ಗಳಲ್ಲಿ ಒಣ ಕಸ ಸಂಗ್ರಹ ಆರಂಭಿಸ ಲಾಗಿದೆ. ಒಣ ಕಸ ಸಂಗ್ರಹ ಘಟಕ ವನ್ನು ಡಿಸೆಂಬರ್‌ ಗಿಂತ ಮೊದಲು ಪೂರ್ಣ ಗೊಳಿ ಸಲು ಎಲ್ಲ ಗ್ರಾಮ ಪಂಚಾಯತ್‌ಗಳಿಗೆ ಸೂಚನೆ ನೀಡಲಾಗಿದೆ.
– ಶ್ರೀನಿವಾಸ ರಾವ್‌, ಜಿಲ್ಲಾ ನೋಡಲ್‌ ಅಧಿಕಾರಿ, ಸ್ವಚ್ಛ ಭಾರತ್‌ ಮಿಷನ್‌, ಉಡುಪಿ

-  ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next