ಪದೇ ಪದೆ ವಿವಾದಕ್ಕೆ ಕಾರಣವಾಗುತ್ತಿರುವ ಬಂಟ್ವಾಳ ತಾಲೂಕು ಸಜೀಪನಡು ಗ್ರಾಮದ ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆಯನ್ನು ದ.ಕ. ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ. ಘಟಕದಲ್ಲಿ ಹಸಿ ಕಸ ಹಾಕು ವಂತಿಲ್ಲ ಎಂದು ಸಜೀಪನಡು ಗ್ರಾಮ ಪಂಚಾಯತ್ ವಾದಿಸಿದರೆ, ಬಂಟ್ವಾಳ ಪುರ ಸಭೆಯು ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ವ್ಯವಸ್ಥೆಗಳನ್ನು ಮಾಡುತ್ತಿದೆ.
ಈ ರೀತಿ ಹಸಿ ಕಸ ಹಾಕಬಹುದೇ ಇಲ್ಲವೇ ಎಂಬ ಬಗ್ಗೆ ಸ್ಪಷ್ಟತೆಯೂ ಇಲ್ಲವಾಗಿದೆ. ಕಳೆದ ಹಲವು ವರ್ಷಗಳಿಂದ ಇದು ಪದೇ ಪದೆ ವಿವಾದವನ್ನು ಸೃಷ್ಟಿಸಿ ಗೊಂದಲಕ್ಕೆ ಕಾರಣವಾಗುತ್ತಿದೆ. ದ. ಕ. ಜಿಲ್ಲಾಧಿಕಾರಿಯವರು ಹಸಿ ಕಸವನ್ನು ಹಾಕಬಾರದು ಎಂದು ಪುರಸಭೆಗೆ ಆದೇಶ ನೀಡಿದ್ದಾರೆ ಎಂದು ಸಜೀಪನಡು ಗ್ರಾ.ಪಂ.ನವರು ವಾದಿಸುತ್ತಿದ್ದು ಈಗ ಮತ್ತೆ ಪುರಸಭೆಯ ವಿರುದ್ಧ ಪ್ರತಿಭಟನೆಗೆ ಇಳಿದಿದ್ದಾರೆ.
ಈ ಹಿಂದೆ ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆಯ ವಿಚಾರ ವಿಧಾನಸಭಾ ಕಲಾಪದಲ್ಲೂ ಚರ್ಚೆಯಾಗಿದ್ದು, ಗ್ರಾ.ಪಂ. ಮತ್ತು ಪುರಸಭೆ ಪರಸ್ಪರ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವಂತೆ ಸಭಾಪತಿಯವರು ಸಲಹೆ ನೀಡಿದ್ದರು. ಬಳಿಕ ಬಂಟ್ವಾಳ ಹಾಗೂ ಮಂಗಳೂರು ಶಾಸಕರು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಒಣ ಕಸವನ್ನು ಮಾತ್ರ ಕಂಚಿನಡ್ಕ ಪದವು ಘಟಕದಲ್ಲಿ ಹಾಕುವಂತೆ ಪುರಸಭೆಗೆ ಸೂಚಿಸಲಾಗಿತ್ತು. ಆದರೆ ಪುರಸಭೆ ಮಾತ್ರ ಹಸಿ ಕಸವನ್ನೂ ಈ ಘಟಕಕ್ಕೆ ತಂದು ಸುರಿಯುತ್ತಿರುವುದು ಸ್ಥಳೀಯ ಗ್ರಾಮಸ್ಥರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಡಿಸಿ ನೇತೃತ್ವದಲ್ಲಿ ಸಭೆ ನಡೆಯಿತಾದರೂ ಈ ವಿಚಾರವಾಗಿ ಯಾವ ನಿರ್ಧಾರಕ್ಕೆ ಬರಲಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ. ಈ ಹಿಂದಿನ ಸಭೆಯಲ್ಲಿ ಒಣ ಕಸ ಮಾತ್ರ ಹಾಕುವಂತೆ ಕೈಗೊಂಡ ನಿರ್ಣಯ ಚಾಲ್ತಿಯಲ್ಲಿದೆಯೇ ಅಥವಾ ಘಟಕದಲ್ಲಿ ಹಸಿ ಕಸವನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬಹುದು ಎಂದು ಡಿಸಿ ಆದೇಶಿಸಿದ್ದಾರೆಯೇ ಎಂಬುದರ ಕುರಿತಂತೆ ಗೊಂದಲ ಮುಂದುವರಿದಿದೆ.
ಇದನ್ನೂ ಓದಿ:100 ಕೋಟಿ ಕೋವಿಡ್ ವ್ಯಾಕ್ಸಿನ್ ದಾಖಲೆ ಬರೆಯುತ್ತಿದ್ದೇವೆ : ಜೆ.ಪಿ.ನಡ್ಡಾ
ಒಂದು ವೇಳೆ ಹಸಿ ಕಸ ಹಾಕದೇ ಇರುವ ಹಿಂದಿನ ನಿರ್ಣಯವೇ ಚಾಲ್ತಿಯಲ್ಲಿದ್ದರೆ ವಿಲೇವಾರಿ ಘಟಕದಲ್ಲಿ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಘಟಕ ನಿರ್ಮಾಣಕ್ಕೆ ಹೇಗೆ ಅನುಮತಿ ಸಿಕ್ಕಿದೆ ಎಂಬುದು ಗ್ರಾ.ಪಂ.ನ ಪ್ರಶ್ನೆಯಾಗಿದೆ. ಹೀಗಾಗಿ ಜಿಲ್ಲಾಡಳಿತವೇ ಇದನ್ನು ಸ್ಪಷ್ಟಪಡಿಸಬೇಕಿದೆ. ಕಂಚಿನಡ್ಕಪದವು ತ್ಯಾಜ್ಯ ವಿಲೇವಾರಿ ಘಟಕದ ಸಮಸ್ಯೆ ಪದೇ ಪದೆ ವಿವಾದಕ್ಕೆ ಕಾರಣವಾಗುತ್ತಿದ್ದರೂ ಜಿಲ್ಲಾಡಳಿತ ಈ ಸಮಸ್ಯೆಗೊಂದು ಶಾಶ್ವತ ಪರಿಹಾರ ಕಲ್ಪಿಸದಿರುವುದು ದುರದೃಷ್ಟಕರ. ಪುರಸಭೆ ಹಸಿ ಕಸವನ್ನು ಈ ಘಟಕದಲ್ಲಿ ಹಾಕಬಾರದು ಎಂದರೆ ಮತ್ತೆಲ್ಲಿ ಹಾಕಬೇಕು ಎಂಬುದಕ್ಕೂ ಉತ್ತರವಿಲ್ಲ. ಇಲ್ಲಿ ಹಸಿ ಹಾಕುತ್ತಿರುವುದರಿಂದ ನಮಗೆ ಬಹಳಷ್ಟು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಅಳಲು ತೋಡಿಕೊಳ್ಳುತ್ತಲೇ ಬಂದಿ ದ್ದಾರೆ. ಆದರೆ ಇವ್ಯಾವುದಕ್ಕೂ ಜಿಲ್ಲಾಡಳಿತ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಈ ಹಿಂದೆ ಘಟಕದ ಮುಂಭಾಗ ಸ್ಥಳೀಯರು ನಡೆಸಿದ ಪ್ರತಿಭಟನೆ ವೇಳೆ ಒಂದಿಷ್ಟು ಗದ್ದಲ ಸೃಷ್ಟಿಯಾಗಿದ್ದೇ ಅಲ್ಲದೆ ಪೊಲೀಸರು ಮಧ್ಯ ಪ್ರವೇಶಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮತ್ತೆ ಅಂತಹ ಸ್ಥಿತಿ ನಿರ್ಮಾಣವಾಗುವ ಮೊದಲು ಜಿಲ್ಲಾಡಳಿತ ಎರಡೂ ಸ್ಥಳೀಯಾಡಳಿತ ಸಂಸ್ಥೆಗಳ ಪ್ರಮುಖರ ಜತೆ ಚರ್ಚಿಸಿ ಸೂಕ್ತ ತೀರ್ಮಾನಕ್ಕೆ ಬರಬೇಕಿದೆ.
-ಸಂ