ಶಹಾಬಾದ: ನಗರದಲ್ಲಿನ ತ್ಯಾಜ್ಯ ವಿಲೇವಾರಿ ಮಾಡುವ ನಗರಸಭೆ ಇದೀಗ ಕೋವಿಡ್-19 ಸೋಂಕಿತರು ಬಳಸಿದ ತ್ಯಾಜ್ಯ ಸಂಗ್ರಹಿಸಿ ವಿಲೇವಾರಿ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದಕ್ಕಾಗಿ ಪ್ರತ್ಯೇಕ ವಾಹನ ಮತ್ತು ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ.
ಈ ತ್ಯಾಜ್ಯವನ್ನು ದಿನನಿತ್ಯದ ತ್ಯಾಜ್ಯದೊಂದಿಗೆ ಬೆರೆಸದೇ, ಕಸ ಸಂಗ್ರಹಣ ಮಾಡಿದ ಕೂಡಲೇ ರಾಸಾಯನಿಕ ದ್ರಾವಣ ಸಿಂಪಡಿಸಲಾಗುತ್ತಿದೆ. ಸೋಂಕಿತರು ಮತ್ತು ಕ್ವಾರಂಟೈನ್‌ದಲ್ಲಿ ಇದ್ದವರ ತ್ಯಾಜ್ಯವನ್ನು (ಬಟ್ಟೆ, ಟಿಶ್ಯೂ, ಬಳಸಿ ಬಿಸಾಡುವ ತಟ್ಟೆ ಇತ್ಯಾದಿ) ಎಚ್ಚರಿಕೆಯಿಂದ ವಿಲೇವಾರಿ ಮಾಡಬೇಕೆಂದು ನಗರಸಭೆ ಪೌರಾಯುಕ್ತ ಡಾ| ಕೆ.ಗುರಲಿಂಗಪ್ಪ ಸೂಚಿಸಿದ್ದಾರೆ.
ಇದಕ್ಕಾಗಿ ಸಿಬ್ಬಂದಿಗೆ ಪಿಪಿಇ ಕಿಟ್ ವ್ಯವಸ್ಥೆ ಹಾಗೂ ಸೋಂಕು ತಗುಲದ ಹಾಗೆ ಕನ್ನಡಕ ನೀಡಲಾಗಿದೆ. ತ್ಯಾಜ್ಯ ವಿಲೇವಾರಿ ಜವಾಬ್ದಾರಿಯನ್ನು ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಅವರಿಗೆ ವಹಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ಯಾರಿಗಾದರೂ ಸೋಂಕು ತಗುಲಿದ್ದಲ್ಲಿ ಅವರು ಬಳಸಿದ ವಸ್ತುಗಳು, ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯದೇ ನಗರಸಭೆ ವಾಹನ ಬಂದಾಗ ನೀಡಬೇಕು. ಅದನ್ನು ಸರಿಯಾಗಿ ಎಚ್ಚರಿಕೆ ಕ್ರಮದಿಂದ ನಗರದ ಸಮೀಪದ ಭಂಕೂರ ಗ್ರಾಮದ ಹೊರವಲಯದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವೈಜ್ಞಾನಿಕ ಕ್ರಮದಿಂದ ವಿಲೇವಾರಿ ಮಾಡಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಡಾ| ಕೆ.ಗುರಲಿಂಗಪ್ಪ ತಿಳಿಸಿದ್ದಾರೆ