ಕಟಪಾಡಿ: ಜಿಲ್ಲೆಯಲ್ಲಿ ಕೋವಿಡ್ ನಡುವೆ ಡೆಂಗ್ಯೂ ಬಾಧಿತರ ಪ್ರಮಾಣ ಸದ್ದಿಲ್ಲದೆ ಏರುತ್ತಿದ್ದು ಕಟಪಾಡಿಯಾದ್ಯಂತ ಎಲ್ಲೆಂದರಲ್ಲಿ ಸೊಳ್ಳೆ ಉತ್ಪತ್ತಿ ಕೇಂದ್ರವಾಗಿ ಕಂಡು ಬರುತ್ತಿರುವ ತ್ಯಾಜ್ಯದ ರಾಶಿ ಕಂಡು ಸಾರ್ವಜನಿಕರು ಚಿಂತೆಗೀಡಾಗಿದ್ದಾರೆ.
ಕೊಳೆತು ನಾರುವ ತ್ಯಾಜ್ಯವು ಮಳೆಯ ನೀರಿನೊಂದಿಗೆ ಬೆರೆತು ಎಲ್ಲೆಂದರಲ್ಲಿ ಹರಿಯುತ್ತಿದ್ದು ಸಾಂಕ್ರಾಮಿಕ ರೋಗದ ಭೀತಿಯನ್ನು ಎದುರಿಸುವಂತಾಗಿದೆ.
ಹಲವಾರು ಬಾರಿ ಎಚ್ಚರಿಸಿದರೂ, ಕಟಪಾಡಿ ಗ್ರಾ.ಪಂ.ನಲ್ಲಿ ಯಾವುದೇ ರೀತಿಯ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗದೇ ಇದ್ದು, ಸ್ಥಳೀಯರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ.
ಮಣಿಪುರ ಸಂಪರ್ಕದ ಮುಖ್ಯ ರಸ್ತೆಯ ರೈಲ್ವೇ ಮೇಲ್ಸೇತುವೆಯ ಬಳಿ ಇಕ್ಕೆಲಗಳಲ್ಲಿ ಮೂಟೆಗಟ್ಟಲೆ ತ್ಯಾಜ್ಯವು ರಸ್ತೆಯ ಮೇಲೆಯೇ ಹರಿದಾಡುತ್ತಿದೆ. ಗ್ರಾಮಸ್ಥರು ಈ ತ್ಯಾಜ್ಯ ರಾಶಿಯ ವಿರುದ್ಧ ಧ್ವನಿ ಎತ್ತಿದ್ದು, ಕೆಲ ಪ್ರದೇಶಗಳಲ್ಲಿ ಕಾವಲು ಕಾಯ್ದು ಕುಳಿತು ತ್ಯಾಜ್ಯ ಎಸೆತಕ್ಕೆ ಕಡಿವಾಣ ಹಾಕಲು ಯತ್ನಿಸಿದ್ದರು. ಆದರೂ ಸ್ಥಳೀಯಾಡಳಿತ ತ್ಯಾಜ್ಯ ಎಸೆಯುವವರನ್ನು ಪತ್ತೆ ಹಚ್ಚಿ ಯಾವುದೇ ರೀತಿಯ ಸೂಕ್ತ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳದ ಕಾರಣದಿಂದ ಒಮ್ಮೆ ಸ್ವತ್ಛಗೊಂಡ ಪ್ರದೇಶದಲ್ಲಿ ಮತ್ತೆ ತ್ಯಾಜ್ಯ ತಂದು ಸುರಿದು ಉದ್ಧಟತನ ಪ್ರದರ್ಶಿಸುತ್ತಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಾರ್ವಜನಿಕರು, ನಾಗರಿಕರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಮುನ್ನವೇ ಸಂಬಂಧ ಪಟ್ಟ ಇಲಾಖೆಗಳು, ಜಿಲ್ಲಾಡಳಿತವು ಎಚ್ಚೆತ್ತು ಭಯ ಮುಕ್ತ ಜೀವನ ನಡೆಸುವಂತಾಗಲು ಕ್ರಮ ಕೈಗೊಳ್ಳುವಂತೆ ಜನತೆ ಆಗ್ರಹಿಸುತ್ತಿದ್ದಾರೆ.
ವಿಲೇವಾರಿಗೆ ಪ್ರಯತ್ನ
ಸಮಸ್ಯೆಯು ಗಮನಕ್ಕೆ ಬಂದಿದೆ. ತ್ಯಾಜ್ಯ ವಿಲೇವಾರಿ ಘಟಕ ಇಲ್ಲದೆ ಸಮಸ್ಯೆಯು ಎದುರಾಗಿದೆ. ಈ ಬಗ್ಗೆ ಪಿ.ಡಿ.ಒ. ಅವರ ಗಮನಕ್ಕೂ ತಂದು ಎಲ್ಲ ಸದಸ್ಯರ ಸಹಕಾರದೊಂದಿಗೆ ತ್ಯಾಜ್ಯ ವಿಲೇವಾರಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ.
-ಇಂದಿರಾ ಎಸ್ ಆಚಾರ್ಯ,
ಅಧ್ಯಕ್ಷರು, ಕಟಪಾಡಿ ಗ್ರಾ.ಪಂ.