Advertisement

ತ್ಯಾಜ್ಯ ವಿಲೇವಾರಿ: ಪಾಲನೆಯಾಗುತ್ತಿಲ್ಲ ಜಿಲ್ಲಾಧಿಕಾರಿ ಆದೇಶ 

02:26 PM Dec 14, 2017 | Team Udayavani |

ನಗರ:ತ್ಯಾಜ್ಯ ಸಂಗ್ರಹದಲ್ಲಿ ಜಿಲ್ಲೆಯಲ್ಲಿ ಪುತ್ತೂರು ನಗರಸಭೆಗೆ ಮೊದಲ ಸ್ಥಾನ ಎಂಬ ಮಾತು ಎಷ್ಟರಮಟ್ಟಿಗೆ ಸತ್ಯ ಎನ್ನುವುದೇ ದೊಡ್ಡ ಪ್ರಶ್ನೆ. ಕಾರಣ, ತ್ಯಾಜ್ಯ ಸಂಗ್ರಹ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆದೇಶವೇ ಇಲ್ಲಿ ಜಾರಿಯಾಗಿಲ್ಲ.

Advertisement

ಪುತ್ತೂರು ನಗರಸಭೆಯ ತ್ಯಾಜ್ಯ ಸಮಸ್ಯೆ ಕೆಲವು ಸಂದರ್ಭ ದೊಡ್ಡ ಸುದ್ದಿಯಾಗುತ್ತದೆ. ಡಂಪಿಂಗ್‌ ಯಾರ್ಡ್‌ಗೆ ಬೆಂಕಿ ಬಿದ್ದಾಗ, ತ್ಯಾಜ್ಯ ಸಂಗ್ರಹ ಮಾಡದೇ ಇದ್ದಾಗ ಕಸದ ವಾಸನೆ ಎಲ್ಲರ ಮೂಗಿಗೂ ಹೊಡೆಯಲು ಶುರುವಾಗುತ್ತದೆ. ಆದರೆ ಈಗಲೂ ತ್ಯಾಜ್ಯ ಸುದ್ದಿಯಾಗುತ್ತಲೇ ಇದೆ. ಆದರೆ ಇದು ಗಂಭೀರ ಸಮಸ್ಯೆ ಎಂದು ಯಾರಿಗೂ ಅನ್ನಿಸದೇ ಇರುವುದು ವಿಪರ್ಯಾಸ. ಸಮಸ್ಯೆ ಬಿಗಡಾಯಿಸಿ ದಾಗ ಮಾತ್ರ ಎಚ್ಚೆತ್ತುಕೊಳ್ಳುತ್ತಾರೆ; ಅಧಿಕಾರಿಗಳು, ಜನಪ್ರತಿನಿಧಿಗಳನ್ನು ದೂಷಿಸುತ್ತಾರೆ. ಒಮ್ಮೆಗೆ ಅಧಿಕಾರಿ, ಜನಪ್ರತಿನಿಧಿಗಳ ಭೇಟಿ, ಕಾನೂನು ಕ್ರಮದ ಭರವಸೆ… ಅಲ್ಲಿಗೆ ಮುಗಿದೇ ಹೋಯಿತು. ಮತ್ತೆ ನೆನಪಾಗಬೇಕಾದರೆ ಸಮಸ್ಯೆ ಮತ್ತೂಮ್ಮೆ ಬಿಗಡಾಯಿಸಬೇಕು.

ಬನ್ನೂರು ಡಂಪಿಂಗ್‌ ಯಾರ್ಡ್‌ಗೆ ಬೆಂಕಿ ಬಿದ್ದಾಗ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ, ಈ ಕೆಳಗಿನ ಕಾರಣಗಳನ್ನು ಪಟ್ಟಿ ಮಾಡಿದ್ದರು:
1. ವೈಜ್ಞಾನಿಕವಾಗಿ ಮೂಲದಲ್ಲಿಯೇ ಕಸವನ್ನು ಬೇರ್ಪಡಿಸಿ ಸಂಗ್ರಹಿಸುತ್ತಿಲ್ಲ.
2. ಸಂಗ್ರಹಿಸಿದ ಕಸವನ್ನು ವಿಂಡ್ರೋ ಕಾಂಪೋಸ್ಟಿಂಗ್‌ ಮಾಡದೇ ನೇರವಾಗಿ ನೆಲಭರ್ತಿ ಜಾಗದಲ್ಲಿ ಹಾಕಲಾಗುತ್ತಿದೆ.
3. ವರ್ಮಿ ಕಾಂಪೋಸ್ಟಿಂಗ್‌ ಸಲುವಾಗಿ ತೊಟ್ಟಿಗಳಿದ್ದರೂ ಉಪಯೋಗಿಸುತ್ತಿಲ್ಲ.

ಜಿಲ್ಲಾಧಿಕಾರಿ ಸೂಚನೆಗಳು
ಹಸಿ, ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಬೇಕು. ನಾಗರಿಕರು ಸಹಕರಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವುದು. ಬೈಲಾದಲ್ಲಿ ಇದಕ್ಕೆ ಸೂಕ್ತ ಮಾನದಂಡ ಅನುಸರಿಸುವುದು. ವಿಲೇವಾರಿಗೆ ಪ್ರತ್ಯೇಕ ವಾಹನ, ಮಾನವ ಸಂಪನ್ಮೂಲ ಉಪಯೋಗಿಸುವುದು. ಕಸವನ್ನು ವಾಹನದಲ್ಲಿ ಹಾಕಿ, ಮುಚ್ಚಿಯೇ ಸಾಗಿಸುವುದು ತಪ್ಪಿದಲ್ಲಿ ಪೌರಾಯುಕ್ತರು, ಆರೋಗ್ಯ ನಿರೀಕ್ಷಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವುದು ಎಂದು ಡಿಸಿ ಸೂಚಿಸಿದ್ದರು. ಇದಕ್ಕಾಗಿ ಸಹಾಯಕ ಆಯುಕ್ತರ ಅಧ್ಯಕ್ಷತೆಯ 2017ರ ಮಾರ್ಚ್‌ನಲ್ಲಿ ಸಮಿತಿ ರಚಿಸಿ, ತಿಂಗಳಿಗೊಮ್ಮೆ ಸಭೆ ನಡೆಸುವಂತೆ ಸೂಚಿಸಿದ್ದರು. ಆದರೆ ಇದುವರೆಗೆ ಸಭೆ ನಡೆದ ಮಾಹಿತಿಯಿಲ್ಲ. ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ಕಾನೂನು ಕ್ರಮ ಕೈಗೊಂಡ ನಿದರ್ಶನವಿಲ್ಲ. ಸಹಾಯಕ ಆಯುಕ್ತರ ಅಧ್ಯಕ್ಷತೆಯ ಸಮಿತಿ ಏನು ಮಾಡುತ್ತಿದೆ ಎಂಬದು ಸಾರ್ವಜನಿಕರ ಪ್ರಶ್ನೆ. ತಮ್ಮ ಆದೇಶ ಜಾರಿಗೆ ತರಲು ಮತ್ತೂಮ್ಮೆ ಡಿಸಿಯೇ ಬರಬೇಕೇ?

ವಲಯವೇ ಗುರುತಿಸಿಲ್ಲ
ನಗರ ವ್ಯಾಪ್ತಿಯಲ್ಲಿ 1,000 ಮನೆಗಳ ವಲಯ ನಿರ್ಮಿಸಬೇಕು. ಇದರಲ್ಲಿ ಶೇ. 15ರಷ್ಟು ವಾಣಿಜ್ಯ ತ್ಯಾಜ್ಯ ಎಂದು ಗುರುತಿಸಬೇಕು. ಇದರ ವೆಚ್ಚ, ವಾಹನ ಬಳಕೆಗಳ ಬಗ್ಗೆ ಯೋಜನೆ ತಯಾರಿಸಬೇಕು. ಬಳಿಕ ಸ್ವಸಹಾಯ ಸಂಘದಿಂದ ಅರ್ಜಿ ಆಹ್ವಾನಿಸಿ, ಆರ್ಥಿಕ ಸಾಮರ್ಥ್ಯದ ಆಧಾರದಲ್ಲಿ ಆಯ್ಕೆ ನಡೆಸಬೇಕು. 1,000 ಮನೆಗಳ ಪೈಕಿ ಸಹಕರಿಸದೇ ಇರುವ ಮನೆಗಳ ನೀರು ಸಂಪರ್ಕ ಕಡಿತ ಮಾಡಬಹುದು. ಇದಕ್ಕೂ ಬಗ್ಗದಿದ್ದರೆ ಸ್ವಸಹಾಯ ಸಂಘಗಳಿಗೆ ನಗರಸಭೆಯಿಂದ ಉಳಿಕೆ ಹಣವನ್ನು ಪಾವತಿ ಮಾಡಬೇಕು. ಆದರೆ ಈ ಎಲ್ಲ ಮಾಹಿತಿ ನಗರಸಭೆಯಲ್ಲಿ ಇರಬೇಕು. ಈ ಯಾವುದೇ ಪ್ರಕ್ರಿಯೆ ಅಧಿಕಾರಿಗಳು ನಡೆಸುತ್ತಿಲ್ಲ ಎಂದು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್‌ ದೂರಿದ್ದಾರೆ.

Advertisement

ಕಾರ್ಮಿಕರ ಕೊರತೆ
ತ್ಯಾಜ್ಯ ವಿಲೇವಾರಿ, ನಿರ್ವಹಣೆಗೆ 100 ಪೌರಕಾರ್ಮಿಕರು ಬೇಕು. ಆದರೆ ಇರುವುದು 16 ಮಾತ್ರ. ಇದರಲ್ಲಿ 6 ಮಂದಿಯನ್ನು ನೀರು ಹಾಗೂ ಕಚೇರಿ ಕೆಲಸಕ್ಕೆ ನೇಮಿಸಲಾಗಿದೆ. 10 ಪೌರಕಾರ್ಮಿಕರಲ್ಲಿ ಹೇಗೆ ಇಷ್ಟು ದೊಡ್ಡ ಪೇಟೆಯ ಕೆಲಸ ಮಾಡಿಸುವುದು? ಔಟ್‌ಸೋರ್ಸ್‌ ಟೆಂಡರ್‌ಗೆ ಆಡಳಿತ ಸಹಕಾರ ನೀಡಿಲ್ಲ. ಹೊಸ ನೇಮಕಾತಿ ಆಗುವ ಸಾಧ್ಯತೆ ಇದೆ. ಬಳಿಕವಷ್ಟೇ ಕ್ರಮ ಕೈಗೊಳ್ಳಲು ಸಾಧ್ಯ.
– ರೂಪಾ ಶೆಟ್ಟಿ, ಪೌರಾಯುಕ್ತೆ, ನಗರಸಭೆ 

ಡಿಸಿ ಆದೇಶ ಜಾರಿಯಾಗಲಿ
ನಾಲ್ಕು ದಿನಕ್ಕೊಮ್ಮೆ ಕಸ ಸಂಗ್ರಹಕ್ಕೆಂದು ಮನೆಗೆ ಬರುತ್ತಾರೆ. ಮನೆಯಿಂದ ಕಸ ಸಂಗ್ರಹ ಮಾಡಿದರೆ, ರಸ್ತೆಗೆ ಬಿಸಾಡುವುದಿಲ್ಲ. ಕಸ ಸಂಗ್ರಹಕ್ಕೆ ಮನೆಗೆ ಬಂದರೆ ಯಾರೂ ವಿರೋಧ ವ್ಯಕ್ತಪಡಿಸುವುದಿಲ್ಲ. ಜಿಲ್ಲಾಧಿಕಾರಿ ಆದೇಶವನ್ನು
ಜಾರಿಗೆ ತಂದರೆ, ದೊಡ್ಡ ಸಮಸ್ಯೆಗೆ ಪರಿಹಾರ ಸಿಗಬಹುದು.
– ಜೀವನ್‌ ದಲ್ಮೇದಾ, ಮರೀಲು

ಕಸ ಸಂಗ್ರಹವೇ ನಡೆಯುತ್ತಿಲ್ಲ
ತ್ಯಾಜ್ಯ ವಿಂಗಡಣೆ ಮಾಡುವುದು ಬಿಡಿ, ಮನೆ-ಮನೆ ಕಸ ಸಂಗ್ರಹವೇ ಸರಿಯಾಗಿ ನಡೆಯುತ್ತಿಲ್ಲ. ಹೀಗಿರುವಾಗ ಮನೆ ಕಸವನ್ನು ಎಲ್ಲಿಗೆ ಬಿಸಾಡಬೇಕು. ರಸ್ತೆ ಬದಿಗೆ ತಾನೇ? ಕಾವೇರಿಕಟ್ಟೆ ಬಳಿಯಲ್ಲಿ ತ್ಯಾಜ್ಯ ರಾಶಿ ಬಿದ್ದಿದೆ.
– ಮಹೇಶ್‌, ಕಾವೇರಿಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next