Advertisement

Uppinangady: ತ್ಯಾಜ್ಯ ಸಂಗ್ರಹ ಶುಲ್ಕ ವಸೂಲಿ ಸಂಜೀವಿನಿ ಹೆಗಲಿಗೆ

11:25 AM Jul 30, 2024 | Team Udayavani |

ಉಪ್ಪಿನಂಗಡಿ: ಸಿಬಂದಿ ಕೊರತೆಯಿಂದ ತ್ಯಾಜ್ಯ ಸಂಗ್ರಹ ಶುಲ್ಕ ವಸೂಲಾತಿಗೆ ತೊಂದರೆಯಾಗುತ್ತಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾದಾಗ ಒಂದೋ ಹೆಚ್ಚುವರಿ ಸಿಬಂದಿ ಕೊಡಿ ಇಲ್ಲದಿದ್ದರೆ ಸಭೆ ಕರೆದು ಆ ಜವಾಬ್ದಾರಿಯನ್ನು ಸಂಜೀವಿನಿಯವರಿಗೆ ಒಪ್ಪಿಸಿ ಎಂದು 34 ನೆಕ್ಕಿಲಾಡಿ ಗ್ರಾ.ಪಂ.ನ ಸಾಮಾನ್ಯ ಸಭೆಯಲ್ಲಿ ಪಿಡಿಒ ಸತೀಶ್‌ ಕೆ. ಬಂಗೇರ ಸಲಹೆ ನೀಡಿದಾಗ ಅದಕ್ಕೆ ಸದಸ್ಯರು ಸಮ್ಮತಿಸಿದರು.

Advertisement

ಗ್ರಾ.ಪಂ. ಅಧ್ಯಕ್ಷೆ ಸುಜಾತಾ ಆರ್‌. ರೈ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತ್ಯಾಜ ಸಂಗ್ರಹ ವಿಷಯ ಪ್ರಸ್ತಾವಿಸಿದ ಸದಸ್ಯ ಪ್ರಶಾಂತ್‌ ಕುಮಾರ್‌, ತ್ಯಾಜ್ಯ ವಿಲೇವಾರಿ ಮಾಡುವವರಿಗೆ ನಾವು ತಿಂಗಳಿಗೆ 75 ಸಾವಿರ ರೂಪಾಯಿ ಕೊಡುತ್ತೇವೆ. ಆದರೆ ಕಸ ಸಂಗ್ರಹಕ್ಕೆ ಗ್ರಾಮಸ್ಥರಿಂದ ಶುಲ್ಕ ವಸೂಲಾತಿ ಆಗುತ್ತಿಲ್ಲ. ರಸ್ತೆ ಇದ್ದರೂ ಕೆಲವು ಕಡೆ ಕಸದ ವಾಹನ ಬರುತ್ತಿಲ್ಲ. ಅವರು ಸಮಯ ಪಾಲನೆಯನ್ನೂ ಮಾಡುತ್ತಿಲ್ಲ. ಗೇಟ್‌ನಲ್ಲಿ ಕಸವನ್ನು ಇಟ್ಟರೆ ಅವರು ತೆಗೆದುಕೊಳ್ಳುವುದಿಲ್ಲ. ಅವರು ಸಮಯ ಪಾಲನೆ ಮಾಡದೆ ಇರುವುದರಿಂದ ಕೆಲಸಕ್ಕೆ ಹೋಗುವವರಿಗೆ ಕಷ್ಟವಾಗುತ್ತಿದೆ.

ಅನಧಿಕೃತ ಅಂಗಡಿ ತೆರವು ಮಾಡಿ

ಬೇರಿಕೆ ಬಸ್‌ ನಿಲ್ದಾಣ ಬಳಿಯ ರಾಜ್ಯ ಹೆದ್ದಾರಿಯ ಮಾರ್ಜಿನ್‌ನಲ್ಲಿ ಅನಧಿಕೃತ ತರಕಾರಿ ಅಂಗಡಿಯೊಂದಿದ್ದು, ಅದನ್ನು ತೆರವುಗೊಳಿಸಬೇಕೆಂದು ಅರ್ಜಿ ಕೊಟ್ಟಿರುವ ವಿಷಯದಲ್ಲಿ ಚರ್ಚೆ ನಡೆದು, ಅದನ್ನು ತೆರವುಗೊಳಿಸಲು ಸದಸ್ಯರು ಸೂಚಿಸಿದರು. ಆಗ ಪಿಡಿಒ ಅವರು ನಾನು ತೆರವು ಮಾಡುತ್ತೇನೆ. ಆದರೆ ಸದಸ್ಯರೂ ಬರಬೇಕು ಎಂದರು. ಆಗ ಪ್ರಶಾಂತ್‌ ಕುಮಾರ್‌ ಮಾತನಾಡಿ ಸದಸ್ಯರು ಯಾಕೆ? ನಮ್ಮ ಅಧ್ಯಕ್ಷರನ್ನು ಕರೆದುಕೊಳ್ಳಿ ಎಂದರು. ಆಗ ಅಧ್ಯಕ್ಷರು ತೆರವುಗೊಳಿಸುವ ಜವಾಬ್ದಾರಿ ಅಧಿಕಾರಿಯವರದ್ದು. ಅದಕ್ಕೆ ನಾವು ಯಾಕೆ? ನೀವೇ ಹೋಗಿ ತೆರವುಗೊಳಿಸಿ ಎಂದರು.

ಪ್ರಮುಖ ವಿಚಾರಗಳು

Advertisement

ಗ್ರಂಥಾಲಯ ಸಿಬಂದಿ ತರಬೇತಿ ವೆಚ್ಚ ಗ್ರಾ.ಪಂ.ನ ನಿಧಿ- 1ರಿಂದ ಪಾವತಿಸಲು ಸದಸ್ಯರ ಆಕ್ಷೇಪ.

ದರ್ಬೆ ಟಿ.ಸಿ.ಯಲ್ಲಿ ಹೊಸ ತಂತಿ ಅಳವಡಿಸಲು ಆಗ್ರಹ.

34 ನೆಕ್ಕಿಲಾಡಿ ಗ್ರಾ.ಪಂ.ನ ಗ್ರಾಮಸಭೆಯನ್ನು ಆ.13ಕ್ಕೆನಡೆಸಲು ನಿರ್ಣಯ.

ಇಂದಾಜೆ ನೆಡುತೋಪಿನಿಂದ ಮರ ಕಡಿದು ಬಾಕಿಯಿರಿಸಿದ ಹಣ ಪಾವತಿಗೆ ಸಾಮಾಜಿಕ ಅರಣ್ಯ ಇಲಾಖೆಗೆ ಪತ್ರ ಬರೆಯಲು ನಿರ್ಣಯ.

ಪ್ರತೀ ತಿಂಗಳು ಒಂದೊಂದು ವಾರ್ಡ್‌ನಿಂದ ಶುಲ್ಕ ವಸೂಲಾತಿ ಜವಾಬ್ದಾರಿಯನ್ನು ಪಂಚಾಯತ್‌ನ ಸಿಬಂದಿಗೆ ನೀಡಿ. ಅದರ ಕಮಿಷನ್‌ ಕೂಡಾ ಅವರಿಗೆ ನೀಡಿ ಎಂದರು. ಅದಕ್ಕುತ್ತರಿಸಿದ ಪಿಡಿಒ ಇಲ್ಲಿ ಸ್ವತ್ಛತ ಸಿಬಂದಿಯಿದ್ದರೂ ಅವರಿಗೆ ವಸೂಲಾತಿಯ ಅಧಿಕಾರವಿಲ್ಲ. ಶುಲ್ಕ ವಸೂಲಾತಿಗಾಗಿ ಇಲ್ಲಿಗೆ ಹೆಚ್ಚುವರಿ ಸಿಬಂದಿ ಬೇಕಾಗಿದ್ದಾರೆ. ಅದಕ್ಕೆ ನಿರ್ಣಯ ಮಾಡಿ. ಈಗಾಗಲೇ ಇದರ ಜವಾಬ್ದಾರಿಯನ್ನು ಸಂಜೀವಿನಿಯವರಿಗೆ ನೀಡಬೇಕೆಂಬ ಸರಕಾರದ ಸುತ್ತೋಲೆ ಇದೆ. ಅವರು ಅದನ್ನು ಮಾಡಲೇ ಬೇಕು. ಆದ್ದರಿಂದ ಪಂಚಾಯತ್‌ ಸದಸ್ಯರು ಅವರ ಸಭೆ ಕರೆದು ಆ ಸಭೆಯಲ್ಲಿ ಅವರಿಗೆ ಜವಾಬ್ದಾರಿಯನ್ನು ಹೊರಿಸಿ ಎಂದರು. ಇದಕ್ಕೆ ಸದಸ್ಯರು ಸಮ್ಮತಿ ಸೂಚಿಸಿದರು.

ಗುತ್ತಿಗೆ ವಹಿಸಿದವರೇ ಸರಿ ಮಾಡಿಕೊಡಬೇಕು
34 ನೆಕ್ಕಿಲಾಡಿ- ಬೊಳುವಾರು ರಾಜ್ಯ ಹೆದ್ದಾರಿಯಲ್ಲಿ ಬೇರಿಕೆ – ಬೊಳಂತಿಲದ ತನಕ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ಸಂದರ್ಭ ಗ್ರಾ.ಪಂ.ನ ಕುಡಿಯುವ ನೀರಿನ ಪೈಪ್‌ಗೆ ಹಾನಿಯುಂಟಾದರೆ ಅದನ್ನು ಗುತ್ತಿಗೆ ವಹಿಸಿದವರೇ ಸರಿಮಾಡಿಕೊಡಬೇಕು. ಚರಂಡಿಯನ್ನೂ ಸರಿಯಾಗಿ ದುರಸ್ತಿ ಮಾಡಿಕೊಡಬೇಕು ಎಂದು ಸದಸ್ಯರು ಆಗ್ರಹಿಸಿದರು. ಗ್ರಾ.ಪಂ. ಉಪಾಧ್ಯಕ್ಷ ಹರೀಶ್‌ ಡಿ., ಸದಸ್ಯರಾದ ಸ್ವಪ್ನ, ವಿಜಯಕುಮಾರ್‌, ವೇದಾವತಿ, ತುಳಸಿ, ಹರೀಶ್‌ ಕೆ., ಕೆ. ರಮೇಶ ನಾಯ್ಕ, ರತ್ನಾವತಿ, ಎ. ಗೀತಾ ಚರ್ಚೆಯಲ್ಲಿ ಭಾಗವಹಿಸಿದರು. ಗ್ರಾ.ಪಂ. ಪಿಡಿಒ ಸತೀಶ ಕೆ. ಬಂಗೇರ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next