ಮುಂಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಸೋಲು ಭಾರತೀಯ ತಂಡದಲ್ಲಿನ ಕೆಲವು ಅನುಭವಿಗಳ ಭವಿಷ್ಯದ ಮೇಲೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ಅನುಭವಿ ಆಟಗಾರರ ಬದಲು ಯುವ ಆಟಗಾರರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಇದೀಗ ಮಾಜಿ ಆಟಗಾರ ವಾಸಿಂ ಜಾಫರ್ ಕೂಡಾ ಇದಕ್ಕೆ ದನಿಗೂಡಿಸಿದ್ದಾರೆ.
ಟೆಸ್ಟ್ ತಂಡ ಮತ್ತು ಟಿ20 ತಂಡದಲ್ಲಿ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ಗಂಭೀರವಾಗಿ ಪರಿಗಣಿಸಬೇಕಾದ ಒಂದು ಹೆಸರು ಯಶಸ್ವಿ ಜೈಸ್ವಾಲ್ ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ:ಮಾತು ಮುಗಿಸಿದ ಕೃಷ್ಣ- ರಚಿತಾ ನಟನೆಯ ‘ಲವ್ ಮೀ ಆರ್ ಹೇಟ್ ಮೀ’
“ಭಾರತವು ನಿರ್ಭೀತ ಕ್ರಿಕೆಟ್ ಆಡಬೇಕಾಗುತ್ತದೆ. ವಿಶೇಷವಾಗಿ ಸೀಮಿತ ಓವರ್ ಕ್ರಿಕೆಟ್ ನಲ್ಲಿ, ನೀವು ಭಯವಿಲ್ಲದ ಹುಡುಗರಿಗೆ ಅವಕಾಶಗಳನ್ನು ನೀಡಬೇಕು. ಯಾಕೆಂದರೆ ಆಟವು ಈಗ ಬದಲಾಗುತ್ತಿದೆ. ಭಾರತವು ಟ್ರೋಫಿಗಳನ್ನು ಗೆಲ್ಲಬೇಕಾದರೆ, ಅವರು ಆ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.” ಜಾಫರ್ ಹೇಳಿದರು.
ಸೀಮಿತ ಓವರ್ ಮಾದರಿ ಕ್ರಿಕೆಟ್ ನಲ್ಲಿ ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾಗೆ ಅವಕಾಶ ಕೊಡಬೇಕು ಎಂದು ಜಾಫರ್ ಹೇಳಿದ್ದಾರೆ.
“ಟಿ20 ಕ್ರಿಕೆಟ್ ನಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ರಿಂಕು ಸಿಂಗ್ ಅದ್ಭುತವಾಗಿದ್ದಾರೆ. ಸದ್ಯ ರಿಷಭ್ ಪಂತ್ ಇಲ್ಲದ ಕಾರಣ ಅವರ ಜಾಗಕ್ಕೆ ಜಿತೇಶ್ ಶರ್ಮಾ ಆಡಬಹುದು. ಏಕದಿನ ಕ್ರಿಕೆಟ್ ನಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡಬೇಕು. ನನ್ನ ಪ್ರಕಾರ ಭಾರತ ಈ ಆಟಗಾರರಿಗೆ ಅವಕಾಶ ಕೊಟ್ಟು ನೋಡಬೇಕು” ಎಂದಿದ್ದಾರೆ.