ಲಾಹೋರ್: ಅಹಮದಾಬಾದ್ ನಲ್ಲಿ ಶನಿವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಸೋತ ನಂತರ ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು ಪ್ರಸ್ತುತ ನಾಯಕ ಬಾಬರ್ ಅಜಮ್ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ನಂತರ ವಿರಾಟ್ ಕೊಹ್ಲಿ ಸಹಿ ಮಾಡಿದ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯನ್ನು ಬಾಬರ್ ಸ್ವೀಕರಿಸಿದ್ದಕ್ಕಾಗಿ ಅಕ್ರಮ್ ಅಸಮಾಧಾನಗೊಂಡರು.
ಪಂದ್ಯದ ನಂತರ, ಕೊಹ್ಲಿ ಮೈದಾನದಲ್ಲಿ ಬಾಬರ್ ಅಜಂಗೆ ಒಂದೆರಡು ಟೀಂ ಇಂಡಿಯಾ ಜೆರ್ಸಿಗಳನ್ನು ನೀಡಿದರು, ಬಾಬರ್ ಗೆ ಕೊಹ್ಲಿ ನೀಡಿದ ಉಡುಗೊರೆಯನ್ನು ಕ್ರೀಡಾಂಗಣದಲ್ಲಿ ಕ್ಯಾಮರಾಮನ್ ಗಳು ಸೆರೆಹಿಡಿದಿದ್ದಾರೆ. ಇದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ತಕ್ಷಣವೇ ವೈರಲ್ ಆಗಿದೆ.
ಪಾಕ್ ಮಾಧ್ಯಮವೊಂದರ ಚರ್ಚೆಯಲ್ಲಿ ಮಾತನಾಡಿದ ವಾಸಿಂ ಅಕ್ರಮ್, ” ಶರ್ಟ್‌ಗಳನ್ನು ಪಡೆಯಲು ಇಂದು ದಿನವಲ್ಲ. ನಿಮ್ಮ ಚಿಕ್ಕಪ್ಪನ ಮಗ ಕೊಹ್ಲಿಯ ಶರ್ಟ್ ಕೇಳಿದ್ದರೆ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ಹೋಗಿ ಪಡೆದುಕೊಳ್ಳಿ. ಹೀಗೆ ಸಾರ್ವಜನಿಕವಾಗಿ ಅಲ್ಲ” ಎಂದರು.
ಅಹಮದಾಬಾದ್ ಪಂದ್ಯದಲ್ಲಿ ಪಾಕಿಸ್ತಾನವು ಕೇವಲ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಆಲೌಟ್ ಆದರೆ, ಭಾರತವು 31 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಿ ಏಳು ವಿಕೆಟ್ ಅಂತರದ ಗೆಲುವು ಸಾಧಿಸಿತು.