Advertisement
ಇತ್ತೀಚೆಗೆ ಬೀದಿ ನಾಯಿಗಳ ದಾಳಿಯಿಂದ ಮೃತಪಟ್ಟ ಬಾಲಕ ಪ್ರವೀಣ್ ವಾಸಿಸುತ್ತಿದ್ದ ವಿಭೂತಿಪುರ ಕೊಳೆಗೇರಿಯಲ್ಲಿ ಭಾನುವಾರ ಕಂಡುಬಂದ ದೃಶ್ಯಗಳಿವು. ಈ ನಡುವೆ ವಿಭೂತಿಪುರದಲ್ಲಿ ನಾಲ್ಕು ವರ್ಷ ಹಿಂದೆ ನಿರ್ಮಾಣಗೊಂಡಿರುವ ಸಮುದಾಯ ಶೌಚಾಲಯ ಬಳಕೆಗೆ ಮುಕ್ತವಾಗದೆ ಇರುವುದೇ ಪ್ರವೀಣ್ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಕಳೆದ ಬುಧವಾರ ಬಹಿರ್ದೆಸೆಗಾಗಿ ಕೆರೆಯ ಬಳಿಗೆ ಹೋಗುವಾಗ ಬೀದಿ ನಾಯಿಗಳು ದಾಳಿ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಪ್ರವೀಣ್, ಮೂರು ದಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ, ಶನಿವಾರ ರಾತ್ರಿ ಮೃತಪಟ್ಟಿದ್ದ.
Related Articles
Advertisement
ಬೀಗ ಹಾಕಿರುವ ಕಾರಣ ಯಾರೂ ಬಳಸದೆ, ಶೌಚಾಲಯದ ಆವರಣದಲ್ಲಿ ಕಾರಣ ಗಿಡ, ಪೊದೆ ಬೆಳೆದು ಕ್ರಿಮಿ, ಕೀಟಗಳ ಆವಾಸಸ್ಥಾನವಾಗಿದೆ. ಹೀಗಾಗಿ ಜನ ಶೌಚ ಕಾರ್ಯಕ್ಕೆ ಬಯಲನ್ನೇ ಅವಲಂಬಿಸಿದ್ದಾರೆ. ಬುಧವಾರ ಬಾಲಕ ಪ್ರವೀಣ್ ಬಹಿರ್ದೆಸೆಗೆಂದು ಕೆರೆಯ ಬಳಿಗೆ ಹೋದಾಗ ಬೀದಿ ನಾಯಿಗಳು ದಾಳಿ ನಡೆಸಿದ್ದವು. ಒಂದೊಮ್ಮೆ ಸಮುದಾಯ ಶೌಚಾಲಯ ಬಳಕೆಗೆ ಮುಕ್ತವಾಗಿದ್ದರೆ ಪ್ರವೀಣ್ ಬಲಿಯಾಗುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿ ಸೆಲ್ವನ್ ಹೇಳಿದರು.
ನಾಯಿ ಹಾವಳಿಗೆ ಪ್ರಾಣಿಜನ್ಯ ತ್ಯಾಜ್ಯ ಕಾರಣ: ವಿಭೂತಿಪುರ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿನ ಮಾಂಸದಂಗಡಿಯವರು ಪ್ರಾಣಿಜನ್ಯ ತ್ಯಾಜ್ಯವನ್ನು ರಾತ್ರಿ ವೇಳೆ ಕೆರೆ ಬಳಿ ಸುರಿದು ಹೋಗುತ್ತಿದ್ದಾರೆ. ಹೀಗೆ ಸುರಿದ ಹಸಿ ಮಾಂಸ ತಿಂದ ನಾಯಿಗಳು ತೀವ್ರ ಆಕ್ರಮಣಕಾರಿಯಾಗಿರುತ್ತವೆ. ಹೀಗಾಗಿ ತಿಂದು ಬೀದಿ ನಾಯಿಗಳು ಇದರಿಂದ ವಾಯು ವಿಹಾರಕ್ಕೆ ಬರುವವರ ಮೇಲೆ ದಳಿಗೆ ಮುಂದಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ರಾಜೇಶ್ ಆರೋಪಿಸಿದರು.
ನಾಯಿಗಳನ್ನು ಹಿಡಿದಿಲ್ಲ: ಬಾಲಕ ಪ್ರವೀಣ್ ಮೇಲೆ ದಾಳಿ ನಡೆಸಿ, ಆತನ ಸಾವಿಗೆ ಕಾರಣವಾದ ಆಕ್ರಮಣಕಾರಿ ನಾಯಿಗಳನ್ನು ಪಾಲಿಕೆ ಸಿಬ್ಬಂದಿ ಈವರೆಗೂ ಸೆರೆ ಹಿಡಿದಿಲ್ಲ ಎಂದು ಮಕ್ಕಳು ದೂರಿದ್ದಾರೆ. ಪ್ರವೀಣ್ ಮೇಲೆರಗಿದ ನಾಯಿಗಳ ಪೈಕಿ ಕಪ್ಪು ಬಣ್ಣದ ನಾಯಿ ಅತ್ಯಂತ ಅಕ್ರಮಣಕಾರಿಯಾಗಿ ದಾಳಿ ನಡೆಸಿತ್ತು. ಆದರೆ, ಪಾಲಿಕೆಯ ಸಿಬ್ಬಂದಿ ಆ ನಾಯಿಯನ್ನು ಹಿಡಿದಿಲ್ಲ. ಹೀಗಾಗಿ ಕೆರೆಯ ಕಡೆಗೆ ಹೋಗಲು ಭಯವಾಗುತ್ತಿದೆ ಎಂದು ಮಕ್ಕಳು ಆತಂಕ ವ್ಯಕ್ತಪಡಿಸಿದರು.
ಕಾಪಾಡಿದವನ ಬೆನ್ನಟ್ಟಿದ ನಾಯಿಗಳು: “ಕೆರೆಯಲ್ಲಿ ಈಜುತ್ತಿದ್ದ ಮಕ್ಕಳು ಓಡಿ ಬಂದು ಪ್ರವೀಣ್‌ನನ್ನು ಕಾಪಾಡುವಂತೆ ಕೂಗಿಕೊಂಡರು. ಕೂಡಲೇ ನಾನು ಬೈಕ್‌ನಲ್ಲಿ ವೇಗವಾಗಿ ಸ್ಥಳಕ್ಕೆ ಹೋದೆ. ಆ ಹೊತ್ತಿಗಾಗಲೇ ನಾಯಿಗಳು ಪ್ರವೀಣ್‌ನನ್ನು ಸುತ್ತುವರಿದು ಆತನ ತಲೆ, ಕುತ್ತಿಗೆ, ಕೈ-ಕಾಲುಗಳನ್ನು ಕಚ್ಚುತ್ತಿದ್ದವು. ಅಲ್ಲಿಂದ ಕಲ್ಲುಗಳನ್ನು ಬೀಸಿ ಪ್ರವೀಣ್‌ನನ್ನು ಹೆಗಲ ಮೇಲೆ ಹಾಕಿಕೊಂಡು ಓಡಿದೆ’ ಎಂದು ಪ್ರವೀಣ್‌ನನ್ನು ಆ ದಿನ ರಕ್ಷಿಸಿದ್ದ ಗೋವಿಂದರಾಜು ಹೇಳಿದರು.
“ನಾಯಿಗಳು ವಿಪರೀತವಾಗಿ ಆತನನ್ನು ಕಚ್ಚಿದ್ದರಿಂದ ಮೈಯೆಲ್ಲ ರಕ್ತ ಸುರಿಯುತ್ತಿತ್ತು. ಆತನನ್ನು ಕಾಪಾಡಬೇಕೆಂದು ಜೋರಾಗಿ ಓಡತೊಡಗಿದೆ. ಆದರೆ, ನಾಯಿಗಳು ನನ್ನನ್ನೂ ಬೆನ್ನಟ್ಟಿದವು. ಇದರಿಂದ ಆತನನ್ನು ಕೆಳಗಿಸಿ ರಸ್ತೆಯಲ್ಲಿದ್ದ ಕಲ್ಲು, ಕೋಲು ಹಿಡಿದು ನಾಯಿಗಳನ್ನು ಹೊಡೆಯಲು ಮುಂದಾದಾಗ ಓಡಿ ಹೋದವು. ನಂತರ ಆತನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದೆ. ನಂತರ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಆತ ಬದುಕುಳಿಯದಿದ್ದುದು ತೀವ್ರ ನೋವುಂಟು ಮಾಡಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.