Advertisement

ಎರಡು ತಿಂಗಳಲ್ಲಿ ಸಮಸ್ಯೆ ಸೃಷ್ಟಿಯಾಯಿತೇ: ಸಿಎಂ ಪ್ರಶ್ನೆ

06:15 AM Jul 15, 2018 | |

ಬೆಂಗಳೂರು: ಕೊಡಗಿನಲ್ಲಿ ಮಳೆಯಿಂದ ರಸ್ತೆ ಹಾಳಾಗಿದೆ, ಸಾಕಷ್ಟು ಬೆಳೆಯೂ ನಾಶವಾಗಿದೆ. ಆದರೂ ಮುಖ್ಯಮಂತ್ರಿಗೆ ಕನಿಕರ ಇಲ್ಲ ಎಂಬ ವಿಡಿಯೋ ವೈರಲ್‌ ಮಾಡಿದ್ದಾರೆ.

Advertisement

ಮಂಗಳೂರಿನ ಮೀನುಗಾರ ಮಹಿಳೆಯರು ಕುಮಾರಸ್ವಾಮಿ ನಮ್ಮ ಸಿಎಂ ಅಲ್ಲ ಎನ್ನುತ್ತಿದ್ದಾರೆ. ಹಾಗಾದರೆ, 70 ವರ್ಷದ ಸಮಸ್ಯೆಗೆ ಎರಡು ತಿಂಗಳಲ್ಲಿ ಪರಿಹಾರ ನೀಡಲು ಸಾಧ್ಯವೇ? ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ರಾಜ್ಯ ವಿಕಲಚೇತನರ ಸೇವಾ ಸಂಸ್ಥೆಗಳ ಒಕ್ಕೂಟದಿಂದ ಶನಿವಾರ ಶಿಕ್ಷಕರ ಸದನದಲ್ಲಿ ಹಮ್ಮಿಕೊಂಡಿದ್ದ ಸ್ಪಂದನ-2018ರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ತೋರಿಸುತ್ತಿರುವ ಸಮಸ್ಯೆಗಳು ಎರಡು ತಿಂಗಳಲ್ಲಿ ಉದ್ಭವಿಸಿದ್ದೇ ಎಂದು ಪ್ರಶ್ನಿಸಿದರು.

70 ವರ್ಷದ ಸಮಸ್ಯೆಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಲು ಸಾಧ್ಯವೇ? ಕೊಡಗು, ಮಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ ಮಾತ್ರ ಸಮಸ್ಯೆ ಉದ್ಭವಿಸಿದೆಯೇ? ಜನರನ್ನು ಕಡೆಗಣಿಸಿದರೆ ಕುಮಾರಸ್ವಾಮಿಯನ್ನು ದೇವರು ಮೆಚ್ಚುತ್ತಾನಾ? ನನ್ನ ಭಾವನೆಗಳೇ ಬೇರೆಯಾಗಿವೆ. ನನ್ನ ವಿರುದ್ಧ ಜನಗಳನ್ನು ಎತ್ತಿ ಕಟ್ಟಿ ಎಷ್ಟು ದಿನ ಮೆಚ್ಚಿಸಲು ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಾನು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕಾಲ ಕಳೆಯುವ ಮುಖ್ಯಮಂತ್ರಿಯಲ್ಲ. ಜನರ ಮಧ್ಯೆ ಹೋಗಿ ಅವರ ಕಷ್ಟಗಳಿಗೆ ಸ್ಪಂದಿಸಿ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಮತ್ತು ಜನಗಳ ಮಧ್ಯೆ ಕಂದಕ ಸೃಷ್ಟಿಸಿ ಅಪಪ್ರಚಾರ ಮಾಡಿ ಯಶಸ್ಸು ಕಾಣುತ್ತೇವೆ ಎಂದುಕೊಂಡಿದ್ದರೆ ಅದು ತಪ್ಪು ಕಲ್ಪನೆ. ನಾನು ಜನಪರ ಮುಖ್ಯಮಂತ್ರಿ ಎಂದು ಹೇಳಿದರು.

Advertisement

ಕೇಂದ್ರದಿಂದ ಪೆಟ್ರೋಲ್‌ ದರ ಏರಿಸಿಲ್ಲವೇ?: ಕೇಂದ್ರ ಸರ್ಕಾರ ಕಳೆದ 4 ವರ್ಷದಲ್ಲಿ 10 ರೂ.ವರೆಗೆ ಪೆಟ್ರೋಲ್‌- ಡೀಸೆಲ್‌ ದರ ಹೆಚ್ಚಿಸಿದೆ. ಅಡುಗೆ ಅನಿಲ 450 ರೂ.ನಿಂದ 750 ರೂ.ಗೆ ಏರಿದೆ. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಧ್ಯಮಗಳು ಹೊಗಳುತ್ತಲೇ ಇವೆ. ರೈತರ ಸಾಲಮನ್ನಾಕ್ಕಾಗಿ ಪೆಟ್ರೋಲ್‌ -ಡೀಸೆಲ್‌ ದರವನ್ನು ಒಂದು ರೂ.ಹೆಚ್ಚಳ ಮಾಡಿರುವುದಕ್ಕೆ ಯಾಕಿಷ್ಟು ಆಕ್ರೋಶ, ಅನುಮಾನ. ನಾನೇನು ನಿಮಗೆ ಅನ್ಯಾಯ ಮಾಡಿದ್ದೇನೆ. ನನ್ನ ಮೇಲೆಯೂ ಸ್ವಲ್ಪ ಕನಿಕರ ತೋರಿಸಿ ಎಂದರು.

ಮೀನುಗಾರರ ಸಮಸ್ಯೆ ಬಗೆಹರಿಸುತ್ತೇನೆ: ಹದಿನೈದು ದಿನಗಳಲ್ಲಿ ಉಡುಪಿ ಜಿಲ್ಲೆಗೆ ಭೇಟಿ ಕೊಟ್ಟು ಎರಡು – ಮೂರು ದಿನ ಅಲ್ಲೇ ಇದ್ದು ಮೀನುಗಾರರ ಸಮಸ್ಯೆಗಳನ್ನು ಆಲಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಉಡುಪಿಯಲ್ಲಿ ಮೀನುಗಾರ ಮಹಿಳೆಯರು ನಡೆಸುತ್ತಿರುವ ಪ್ರತಿಭಟನೆಯನ್ನು ಪ್ರಸ್ತಾಪಿಸಿದ ಅವರು, “ನಾನು ಮೀನುಗಾರರಿಗೆ ಯಾವ ಅನ್ಯಾಯವನ್ನೂ ಮಾಡಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next