Advertisement

ವ್ಯಾಕ್ಸಿನ್‌ನಿಂದ ದೂರವೇ ಉಳಿದ ವಾರಿಯರ್ಸ್!

03:49 PM Feb 01, 2021 | Team Udayavani |

ರಾಯಚೂರು: ಜಿಲ್ಲೆಯಲ್ಲಿ ಮೊದಲ ಹಂತದ ಕೋವಿಡ್‌ ವ್ಯಾಕ್ಸಿನ್‌ ವಿತರಣೆಗೆ ನಿರೀಕ್ಷಿತ ಪ್ರಮಾಣದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಲಸಿಕೆ ಪಡೆಯಲು ಕೊರೊನಾ ವಾರಿಯರ್ಗಳೇ ಹಿಂದೇಟಾಕುತ್ತಿದ್ದು, ಈವರೆಗೆ ಕೇವಲ ಶೇ.52 ಮಾತ್ರ ಗುರಿ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 18,310 ಡೋಸ್‌ ವ್ಯಾಕ್ಸಿನ್‌ ಬಂದಿದ್ದರೆ; ಜ.28ರವರೆಗೆ 11,610 ಡೋಸ್‌ ಮಾತ್ರ ವಿತರಣೆ ಮಾಡಲಾಗಿದೆ.

Advertisement

ಆರೋಗ್ಯ ಇಲಾಖೆಯಲ್ಲಿ ಸ್ಥಾಪಿಸಿದ ಸಂಗ್ರಹಾಗಾರದಲ್ಲಿ ಇನ್ನೂ 6700 ಡೋಸ್‌ ವ್ಯಾಕ್ಸಿನ್‌ ಉಳಿದಿದೆ. ಖಾಸಗಿಯವರು ಸೇರಿದಂತೆ 15 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಇದ್ದರೆ, ಕೇವಲ 6042 ಜನರಿಗೆ ಮಾತ್ರ ನೀಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಲಸಿಕೆ ನೀಡಲಾಗಿತ್ತು. ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ಪಡೆದರೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ ಎನ್ನುತ್ತಾರೆ ಇಲಾಖೆ ಅಧಿ ಕಾರಿಗಳು. ಮನವೊಲಿಕೆಗೆ ಯತ್ನ: ಜ.18ರಿಂದ ಜಿಲ್ಲೆಯಲ್ಲಿ ವ್ಯಾಕ್ಸಿನ್‌ ವಿತರಣೆ ಆರಂಭಿಸಲಾಗಿದೆ.

ರಿಮ್ಸ್‌ ಆಸ್ಪತ್ರೆ, ಎಲ್ಲ ತಾಲೂಕು ಆರೋಗ್ಯ ಕೇಂದ್ರಗಳ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಲಸಿಕೆ ಹಾಕಲಾಗುತ್ತಿದೆ. ಮೊದಲ ಬಾರಿ ಲಸಿಕೆ ಹಾಕಿಸಿಕೊಂಡವರಲ್ಲಿ ಕೆಲವರಿಗೆ ಜ್ವರ, ನಿಶ್ಯಕ್ತಿ, ಒಂದೆರಡು ದಿನ ನಿದ್ದೆ ಮಂಪರು, ವಾಂತಿ ಭೇದಿ ಯಾಗಿರುವ ವರದಿಯಾಗಿದೆ. ಹೀಗಾಗಿ ಉಳಿದವರು ಲಸಿಕೆ ಹಾಕಿಸಿ ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೇ, ಬಿಪಿ, ಶುಗರ್‌ ಇದ್ದವರು, ಬೇರೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದವರು, ಗರ್ಭಿಣಿಯರಿಗೆ ವ್ಯಾಕ್ಸಿನ್‌ ನೀಡಿಲ್ಲ. ಆಶಾ-ಅಂಗನವಾಡಿ ಕಾರ್ಯಕರ್ತೆಯರೇ ದೂರ ಉಳಿದ ಕಾರಣ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರ ಗಮನಕ್ಕೆ ತರಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಕೂಡ ಲಸಿಕೆ ಬಗ್ಗೆ ತಿಳಿ ಹೇಳಿ ಮನವೊಲಿಕೆಗೆ ಮುಂದಾಗಿದ್ದಾರೆ.

ಎರಡನೇ ಹಂತಕ್ಕೆ ಸಿದ್ಧತೆ:ಈಗಾಗಲೇ ಮೊದಲ ಹಂತದ ಲಸಿಕೆ ವಿತರಣೆ ಮುಕ್ತಾಯ ಹಂತಕ್ಕೆ ಬಂದಿದ್ದು, 28 ದಿನಗಳ ಬಳಿಕ ಎರಡನೇ ಹಂತದ ಲಸಿಕೆ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಂತರದಲ್ಲಿ ಪೋಲಿಯೋ ಲಸಿಕೆ ಅಭಿಯಾನ ಕೂಡ ನಡೆಯುತ್ತಿದ್ದು, ಅದು ಮುಗಿದ ಬಳಿಕ ಎರಡನೇ ಹಂತದ ಲಸಿಕೆ ವಿತರಣೆ ಆರಂಭಿಸಲಾಗುತ್ತಿದೆ. ಮೊದಲ ಹಂತದಲ್ಲಿ ಲಸಿಕೆ ಪಡೆದವರಿಗೆ ಸಂದೇಶ ರವಾನೆಯಾಗುತ್ತಿದ್ದು, ಯಾವ ಕೇಂದ್ರದಲ್ಲಿ ಯಾವ ದಿನಾಂಕದಂದು 2ನೇ ಹಂತದ ಲಸಿಕೆ ಪಡೆಯಬೇಕು ಎಂಬ ಮಾಹಿತಿ ಇರಲಿದೆ. ಮೊದಲ ಹಂತದ ಲಸಿಕೆ ಪಡೆದವರು ಕಡ್ಡಾಯವಾಗಿ ಎರಡನೇ ಹಂತದ ಲಸಿಕೆ ಪಡೆಯಬೇಕು ಎಂದು ನಿರ್ದೇಶನ ನೀಡಲಾಗಿದೆ.

ಸಿದ್ಧಯ್ಯಸ್ವಾಮಿ ಕುಕುನೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next