– ಇದು “ವಾರಂಟ್’ ಕಥೆಯೊಳಗಿನ ಗುಟ್ಟು. ನಾಗೇಂದ್ರ ಅರಸ್ ಸದ್ದಿಲ್ಲದೆಯೇ ಮುಗಿಸಿದ ಚಿತ್ರವಿದು. ಚಿತ್ರದ ಬಗ್ಗೆ ಹೇಳಲೆಂದೇ ತಂಡ ಕಟ್ಟಿಕೊಂಡು ಮಾಧ್ಯಮ ಮುಂದೆ ಬಂದಿದ್ದರು ನಾಗೇಂದ್ರ ಅರಸ್. ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ನಾಗೇಂದ್ರ ಅರಸ್, “ಇದು ಆ್ಯಕ್ಷನ್ ಚಿತ್ರ. ಒಂದು ರೀತಿಯ ರಿವೇಂಜ್ ಕಥೆ. ಹಾಗಂತ, ಇಲ್ಲಿ ಅಂಡರ್‌ವರ್ಲ್ಡ್ ಕಥೆ ಇಲ್ಲ. ನಡೆದ ಒಂದು ಘಟನೆಯನ್ನು ಹೇಗೆ ಪತ್ತೆ ಹಚ್ಚುತ್ತಾರೆ ಎಂಬುದೇ ಕಥೆ. ಇಲ್ಲಿ ಮನರಂಜನೆಗೂ ಜಾಗವಿದೆ. ಸೆಂಟಿಮೆಂಟ್ ಅಂಶಗಳೂ ಇವೆ. ಬ್ಯಾಂಕಾಕ್‌ನಲ್ಲಿ 13 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ಬೆಂಗಳೂರಿನಲ್ಲಿ 20 ದಿನ ಚಿತ್ರೀಕರಿಸಿದ್ದು, ಈಗ ಚಿತ್ರ ಡಬ್ಬಿಂಗ್ ಹೋಗಲು ಸಜ್ಜಾಗಿದೆ. ಚಿತ್ರದಲ್ಲಿ ಮನೋಹರ್, ಮ್ಯಾಥು ಮನು ಸಂಗೀತವಿದೆ. ಶ್ರೀಧರ್ ಹಿನ್ನೆಲೆ ಸಂಗೀತವಿದೆ. ಇನ್ನು, ಡಿಸೋಜ, ಎಂ.ಬಿ.ಹಳ್ಳಿಕಟ್ಟಿ ಮತ್ತು ಸಂದೀಪ್ ಮಲ್ಲಿಕಾರ್ಜುನ್ ಅವರ ಛಾಯಾಗ್ರಹಣವಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್ ಅಥವಾ ಜನವರಿ ಒಳಗೆ “ವಾರಂಟ್’ ಬರಲಿದೆ’ ಎಂದು ಹೇಳಿಕೊಂಡರು ನಾಗೇಂದ್ರ ಅರಸ್.
Advertisement
ಚಿತ್ರಕ್ಕೆ ಜೆಕೆ ನಾಯಕ. ಅವರಿಗೆ ಇದೊಂದು ಬೇರೆ ರೀತಿಯ ಚಿತ್ರವಂತೆ.”ಕಳೆದ ಒಂದುವರೆ ವರ್ಷದ ಹಿಂದೆ ಶುರುವಾದ ಚಿತ್ರವಿದು. ಕಥೆ ಬರೆದಿದ್ದ ನಿರ್ಮಾಪಕಿ ಮನೀಷಾ ಅವರು ಒಮ್ಮೆ ಕಥೆ ಮತ್ತು ಪಾತ್ರ ವಿವರಿಸಿದರು. ಚೆನ್ನಾಗಿತ್ತು. ಸಾಕಷ್ಟು ಅಂಶಗಳಿದ್ದವು. ಜೊತೆಗೆ ನಾಗೇಂದ್ರ ಅರಸ್ ನಿರ್ದೇಶನ ಅಂತ ಗೊತ್ತಾಯ್ತು. ಅವರ ಜೊತೆಗೆ “ಜಸ್ಟ್ ಲವ್’ .”ಮೇ 1′ ಚಿತ್ರ ಮಾಡಿದ್ದೆ. ಇದು ಮೂರನೇ ಸಿನಿಮಾ. ಇಲ್ಲಿ ಕಮರ್ಷಿಯಲ್ ಅಂಶಗಳಿವೆ. ಚಿತ್ರದ ಬಗ್ಗೆ ಹೇಳುವುದಾದರೆ, ವ್ಯಕ್ತಿಯ ಬದುಕಿನಲ್ಲೊಂದು ತಪ್ಪು ನಡೆದಾಗ, ಆ ವ್ಯಕ್ತಿ ಹೇಗಾಗುತ್ತಾನೆ. ಅದೇ ವ್ಯಕ್ತಿ ತನ್ನ ತಪ್ಪು ತಿದ್ದಿಕೊಂಡು ಮುನ್ನೆಡೆದಾಗ ಹೇಗೆಲ್ಲಾ ಬದಲಾಗುತ್ತಾನೆ ಎಂಬುದು ಕಥೆ. ನನಗಿಲ್ಲಿ ಎರಡು ಶೇಡ್ ಪಾತ್ರವಿದೆ. ಮೊದಲು ಕೆಟ್ಟ ಕೆಲಸ ಮಾಡಿಕೊಂಡು ಆ ಬಳಿಕ ಅದರಿಂದ ಎಚ್ಚೆತ್ತುಕೊಂಡು ಒಳ್ಳೆಯ ಕೆಲಸ ಮಾಡಲು ಹೊರಡುವ ಪಾತ್ರ’ ಎಂದು ಹೇಳಿದರು ಜೆಕೆ.