ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ನಕಲಿ ಎಂದು ಟ್ವೀಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಅಸ್ಸಾಂ ನ್ಯಾಯಾಲಯ ಮಂಗಳವಾರ ಬಂಧನದ ಆದೇಶ ಹೊರಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ವಿದ್ಯಾರ್ಹತೆ ನಕಲಿ ಎಂದು ಟ್ವೀಟ್ ಮಾಡಿದ್ದ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಈ ಪ್ರಕರಣದ ಕುರಿತು ವಿಚಾರಣೆಗೆ ಹಾಜರಾಗದ ಕೇಜ್ರಿ ವಿರುದ್ಧ ಕೋರ್ಟ್ ಅರೆಸ್ಟ್ ವಾರಂಟ್ ಹೊರಡಿಸಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರ ಖುದ್ದು ಹಾಜರಾತಿಗೆ ವಿನಾಯ್ತಿ ನೀಡಬೇಕು. ಅವರು ದೆಹಲಿ ಸಿಎಂ ಆಗಿರುವುದರಿಂದ ದೆಹಲಿ ಬಿಟ್ಟು, ಕೋರ್ಟ್ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಕೆಲಸ ಅವರ ಜವಾಬ್ದಾರಿಯಾಗಿದೆ ಎಂದು ಕೇಜ್ರಿವಾಲ್ ಪರ ವಕೀಲರು ವಾದ ಮಂಡಿಸಿದರು.
ಆದರೆ ನ್ಯಾಯಾಧೀಶರು ಕೇಜ್ರಿವಾಲ್ ಪರ ವಕೀಲರ ಮನವಿಯನ್ನು ತಿರಸ್ಕರಿಸಿ, ಜನವರಿ 30ರ ವಿಚಾರಣೆಗೂ ಕೇಜ್ರಿವಾಲ್ ಗೈರುಹಾಜರಾಗಿದ್ದರು ಎಂದ ಜಸ್ಟೀಸ್ ನಬಾ ಕುಮಾರ್ ದೆಕಾ ಬರುವಾ ಅವರು ಅರೆಸ್ಟ್ ವಾರಂಟ್ ಅನ್ನು ಜಾರಿ ಮಾಡಿ ಆದೇಶ ನೀಡಿದರು. ಆದರೆ ಇದು 10 ಸಾವಿರ ರೂಪಾಯಿ ಮೊತ್ತದ ಜಾಮೀನು ಸಹಿತ ವಾರಂಟ್ ಆಗಿದೆ. ಮುಂದಿನ ವಿಚಾರಣೆಯನ್ನು ಮೇ 8ಕ್ಕೆ ನಿಗದಿಪಡಿಸಿದೆ.
ಕಳೆದ ವರ್ಷ ಡಿಸೆಂಬರ್ 15ರಂದು ಕೇಜ್ರಿವಾಲ್ ಅವರು, ಮೋದಿಜೀ ಅವರು 12ನೇ ತರಗತಿ ಪಾಸ್ ಆಗಿದ್ದಾರೆ, ಆ ಬಳಿಕದ ಎಲ್ಲಾ ಪದವಿಗಳು ನಕಲಿ ಎಂದು ಟ್ವೀಟ್ ಮಾಡಿದ್ದರು.