Advertisement

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

12:35 AM Nov 27, 2024 | Team Udayavani |

ಉಡುಪಿ: ಅವಿಭಜಿತ ದ.ಕ. ಜಿಲ್ಲೆಯಲ್ಲಿ 6 ಬೃಹತ್‌ ಕೆರೆಗಳು ಸೇರಿದಂತೆ ನೂರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಕೆರೆಗಳಿದ್ದು, ನಿರ್ವಹಣೆ ಇಲ್ಲದೇ ಸೊರಗುತ್ತಿವೆ ಮತ್ತು ಬಹುತೇಕ ಕೆರೆಗಳು ಈಗಾಗಲೇ ಬತ್ತುವ ಸ್ಥಿತಿ ತಲುಪಿವೆ.

Advertisement

ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ 38 ಕೆರೆಗಳನ್ನು 15 ಕೋ.ರೂ. ವೆಚ್ಚದಲ್ಲಿ ಹಾಗೂ ದ.ಕ. ಜಿಲ್ಲೆಯಲ್ಲಿ 30 ಕೆರೆಗಳನ್ನು ಸುಮಾರು 10 ಕೋ. ರೂ.ಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. 2023-24ನೇ ಸಾಲಿನ ಅನಂತರದಲ್ಲಿ ಕೆರೆಗಳ ಅಭಿವೃದ್ಧಿಗೆ ಸರಕಾರದಿಂದ ಅನುದಾನ ಬಂದಿಲ್ಲ.

ಕೇಂದ್ರ ಸರಕಾರದ ಅಮೃತ ಸರೋವರ ಯೋಜನೆಯಡಿ ಈಗಾಗಲೇ ಪ್ರತಿ ಜಿಲ್ಲೆಗೆ 75 ಕೆರೆಯಂತೆ 150 ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಇದರ ಜತೆಗೆ ಸಣ್ಣ ನೀರಾವರಿ ಇಲಾಖೆ ಹಾಗೂ ರಾಜ್ಯ ಸರಕಾರದ ವಿವಿಧ ಅನುದಾನದಡಿ ನೂರಾರು ಕೆರೆಗಳನ್ನು ಎರಡು ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಆದರೆ, ಈ ಕೆರೆಗಳು ಇಂದು ದಯನೀಯ ಸ್ಥಿತಿಯಲ್ಲಿವೆ.

ಏನೇನು ಅಭಿವೃದ್ಧಿ
2 ಲಕ್ಷದಿಂದ 2 ಕೋ.ರೂ.ಗಳ ವರೆಗೂ ವ್ಯಯಿಸಿ ಕೆರೆಗಳ ಅಭಿವೃದ್ಧಿ ಮಾಡಲಾಗಿದೆ. ಮುಖ್ಯವಾಗಿ ಮೇಲ್ದಂಡೆ ನಿರ್ಮಾಣ, ಮೆಟ್ಟುಲು ರಚನೆ, ಹೂಳೆತ್ತುವುದು, ಸ್ವತ್ಛತೆ, ವಾಕಿಂಗ್‌ ಟ್ರ್ಯಾಕ್‌, ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಲಾಗಿತ್ತು.

ನಿರ್ವಹಣೆ ಕೊರತೆ
ಅಭಿವೃದ್ಧಿ ಕಂಡ ಒಂದೇ ವರ್ಷದಲ್ಲಿ ಕೆರೆಯು ಸಂಪೂರ್ಣ ಮೂಲ ಸ್ಥಿತಿಗೆ ಹೋಗುತ್ತಿವೆ. ಒಂದು ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲ ಕೆರೆಗಳಲ್ಲೂ ಪಾಚಿ ಹಾಗೂ ಸುತ್ತಲೂ ಗಿಡಗಂಟಿ ಬೆಳೆಯುತ್ತವೆ. ಇದನ್ನು ಯಾರೂ ಕೂಡ ಸ್ವತ್ಛ ಮಾಡುವವರಿಲ್ಲ.

Advertisement

ನಿರ್ವಹಣೆ ಗೊಂದಲ
ದೊಡ್ಡ ಕೆರೆ ಆಗಿದ್ದಲ್ಲಿ ಕೆರೆಗಳ ನಿರ್ವಹಣೆಗೆ ಪ್ರತ್ಯೇಕ ಸಮಿತಿ ರಚನೆ ಮಾಡಲಾಗುತ್ತದೆ. ಆದರೆ ಉಭಯ ಜಿಲ್ಲೆಯ ಯಾವುದೇ ಕೆರೆಯ ನಿರ್ವಹಣೆ ಸಮಿತಿಯೂ ಸರಿಯಾಗಿ ಕಾರ್ಯ ನಿವಹಿಸುತ್ತಿಲ್ಲ. ಕಾರಣ, ಕೆರೆಗಳು ಆದಾಯದ ಮೂಲವಲ್ಲ. ಜತೆಗೆ ನಿರ್ವಹಣೆಗೆ ಅನುದಾನವೂ ಬರುತ್ತಿಲ್ಲ. ಸ್ಥಳೀಯ ಸಂಸ್ಥೆಗಳು ಇದರ ನಿರ್ವಹಣೆಯ ಹೊಣೆ ಹೊತ್ತುಕೊಳ್ಳಲು ಹಿಂದೇಟೂ ಹಾಕುತ್ತಿವೆ..

ಅಮೃತ ಸರೋವರದ್ದು
ಅದೇ ಗೋಳು
ಅಮೃತ್‌ ಸರೋವರ್‌ ಯೋಜನೆಯಡಿ ಉಭಯ ಜಿಲ್ಲೆಯ ತಲಾ 75 ಕೆರೆಗಳನ್ನು ಆಯ್ಕೆ ಮಾಡಿ ತಲಾ 2ರಿಂದ 5 ಲಕ್ಷ ರೂ.ಗಳವರಗೂ ಅನುದಾನ ಒದಗಿಸಿ ಅಭಿವೃದ್ಧಿ ಮಾಡುವ ಕಾರ್ಯ ನಡೆದಿದೆ. ಅಲ್ಲದೆ, ಎರಡು ವರ್ಷ ಕೆರೆ ಮುಂದೆ ಧ್ವಜಾರೋಹಣವನ್ನು ಮಾಡಲಾಗಿದೆ. ಈಗ ಕೆರೆ ಮತ್ತು ಕೆರೆ ಮುಂದೆ ನಿರ್ಮಿಸಿರುವ ಧ್ವಜದ ಕಟ್ಟೆಯೂ ಅನಾಥವಾಗಿದೆ.

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆಗಳು
ದ.ಕ. ಜಿಲ್ಲೆಯಲ್ಲಿ ಎರಡು ಬೃಹತ್‌ ಕೆರೆಗಳು 131 ಹೆಕ್ಟೇರ್‌ ಪ್ರದೇಶದಲ್ಲಿವೆ. ಉಡುಪಿ ಜಿಲ್ಲೆಯಲ್ಲಿ 4 ಬೃಹತ್‌ ಕೆರೆಗಳು 283 ಹೆಕ್ಟೇರ್‌ ಪ್ರದೇಶದಲ್ಲಿವೆ. ಮಂಗಳೂರು ತಾಲೂಕಿನ ಕಾವೂರು ಕೆರೆ, ಬಂಟ್ವಾಳ ತಾಲೂಕಿನ ಕಾರಿಂಜೇಶ್ವರ ಕೆರೆ, ಕಾಪು ತಾಲೂಕಿನ ಎಲ್ಲೂರು ದಾಳಂತ್ರ ಕೆರೆ, ಬ್ರಹ್ಮಾವರದ ಚಾಂತಾರು ಮದಗ, ಕುಂದಾಪುರ ಗ್ರಾಮದ ಕಂದಾವರ ಹೇರಿಕೆರೆ, ಕಾರ್ಕಳದ ಆನೇಕೆರೆ.

ನಿರ್ವಹಣೆ ಮಾಡುತ್ತಿಲ್ಲ
ಕೆರೆಯ ನೀರು ಕೃಷಿ ಉದ್ದೇಶಕ್ಕೆ ಬಳಕೆ ಆಗುತ್ತಿದ್ದರೆ ಮಾತ್ರ ಇಲಾಖೆಯಿಂದ ಯೋಜನೆ ರೂಪಿಸಿ ನಿರ್ವಹಣೆ ಮಾಡಲಾಗುತ್ತದೆ. ನಮ್ಮಲ್ಲಿರುವ 6 ಕೆರೆಗಳು ಕೃಷಿ ಉದ್ದೇಶಕ್ಕೆ ಬಳಕೆ ಆಗುತ್ತಿಲ್ಲ. ಹೀಗಾಗಿ ಇಲಾಖೆಯಿಂದ ನಿರ್ವಹಣೆ ಮಾಡುತ್ತಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಮಂಗಳೂರು ವಿಭಾಗ ಕಾರ್ಯಪಾಲ ಎಂಜಿನಿಯರ್‌ ಮಾಹಿತಿ ನೀಡಿದರು.

ಈಗಲೇ ಎಚ್ಚೆತ್ತುಕೊಂಡರೆ ಉತ್ತಮ
ಉಭಯ ಜಿಲ್ಲೆಯ ಬಹುತೇಕ ಎಲ್ಲ ಕೆರೆಗಳು ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ಕೆರೆಗಳು ಅಂತರ್ಜಲ ವೃದ್ಧಿಯಲ್ಲಿ ಪ್ರಮುಖವಾಗಿದ್ದರೂ ಕೆರೆಗಳ ನಿರ್ವಹಣೆಗೆ ಆದ್ಯತೆ ಸಿಗದೇ ಇದ್ದರಿಂದ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಕೆರೆಗಳಲ್ಲಿ ನೀರು ನಿಲ್ಲುತ್ತಿಲ್ಲ. ಹೂಳು ಮತ್ತು ಪಾಚಿಯೇ ತುಂಬಿಕೊಂಡಿವೆ. ಈಗಾಗಲೇ ಜಿಲ್ಲಾಡಳಿತ, ಜಿಪಂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಕೆರೆಗಳ ನಿರ್ವಹಣೆಗೆ ಮುಂದಾಗಬೇಕು. ಇಲ್ಲವಾದರೆ ಇರುವಷ್ಟು ನೀರು ಶೀಘ್ರ ಬತ್ತಿಹೋಗುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next