ಮೈಸೂರು: ರೌಡಿ ಪ್ರತಿಬಂಧಕ ದಳದ ಪೊಲೀಸರು ನಗರದ ರೌಡಿಗಳ ಮೇಲೆ ತೀವ್ರ ನಿಗಾ ಇರಿಸಿದ್ದು, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾದರೆ ಅತ್ಯಂತ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸ್ ಆಯುಕ್ತ ಡಾ.ಎ. ಸುಬ್ರಹ್ಮಣ್ಯೇಶ್ವರ ರಾವ್ ಎಚ್ಚರಿಸಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದಾ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು, ರೌಡಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲು ಮತ್ತು ಅಂತಹ ವ್ಯಕ್ತಿಗಳ ಮನಪರಿವರ್ತಿಸಿ ಪುನಃ ಅವರು ಉತ್ತಮ ಹಾಗೂ ಸಜ್ಜನಿಕೆಯ ನಾಗರಿಕರನ್ನಾಗಿ ಮಾಡುವ ಉದ್ದೇಶದಿಂದ ಕಳೆದ ವರ್ಷ ಪ್ರತ್ಯೇಕವಾದ ರೌಡಿ ಪ್ರತಿಬಂಧಕ ದಳ ರಚಿಸಲಾಗಿತ್ತು.
ಪ್ರತಿ ತಿಂಗಳು ಪರೇಡ್: ಈ ದಳವು ನಗರದಲ್ಲಿರುವ ಪ್ರಮುಖವಾದ ಮತ್ತು ತೀವ್ರ ಚಟುವಟಿಕೆಯಲ್ಲಿರುವ ರೌಡಿಗಳ ಸಂಪೂರ್ಣ ಚಲನವಲನಗಳ ಮೇಲೆ ನಿಗಾವಹಿಸುತ್ತಿದೆ. ಪ್ರತಿ ತಿಂಗಳು ಈ ರೌಡಿಗಳ ಪೆರೇಡ್ ನಡೆಸಿ ಅವರು ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕಟ್ಟೆಚ್ಚರ ನೀಡಲಾಗುತ್ತಿದೆ. ಇವರ ಮನೆಗಳಿಗೆ ಕಾನೂನಿನ ರೀತಿ ಆಗ್ಗಾಗ್ಗೆ ದಿಢೀರ್ ದಾಳಿ ನಡೆಸಿ, ಶೋಧನ ಕಾರ್ಯ ಕೈಗೊಳ್ಳಲಾಗುತ್ತಿದೆ.
ಗೂಂಡಾ ಕಾಯ್ದೆ: ಇವರು ಮತ್ತೆ ಯಾವುದೇ ರೀತಿಯ ರೌಡಿ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಆಗ್ಗಾಗ್ಗೆ ಭದ್ರತಾ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಕಾನೂನಿನ ರೀತಿ ಕ್ರಮ ಜರುಗಿಸಿದ ನಂತರವೂ ಪದೇ ಪದೇ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ಧ ಗಡಿಪಾರು ಮತ್ತು ಗೂಂಡಾ ಕಾಯ್ದೆಯಲ್ಲಿ ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ರೌಡಿ ಚಟುವಟಿಕೆ ಮುಕ್ತ ನಗರ: 2019ನೇ ಹೊಸ ವರ್ಷಾಚರಣೆ ಸಮಯದಲ್ಲಿಯೂ ಆಪರೇಷನ್ ಈಗಲ್ ಕಾರ್ಯಾಚರಣೆ ಮೂಲಕ ರೌಡಿಗಳ ಪೆರೇಡ್ ಮತ್ತು ರೌಡಿ ಮನೆಗಳಿಗೆ ದಿಢೀರ್ ದಾಳಿ ನಡೆಸಿ ಶೋಧನಾ ಕಾರ್ಯ ನಡೆಸಿ ರೌಡಿಗಳಿಗೆ ಕಟ್ಟೆಚ್ಚರ ನೀಡಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ಇವರ ಮೇಲೆ ನಿಗಾ ವಹಿಸಿ ನಗರವನ್ನು ರೌಡಿ ಚಟುವಟಿಕೆ ಮುಕ್ತ ನಗರವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಸೂಲಿ, ದಂಧೆ ವಿರುದ್ಧ ದೂರು ನೀಡಿ: ಯಾವುದೇ ರೌಡಿಶೀಟರ್ ಅಥವಾ ಇತರೇ ವ್ಯಕ್ತಿಗಳು ಯಾವುದೇ ಸಾರ್ವಜನಿಕರಿಗೆ ಅನಗತ್ಯವಾಗಿ ತೊಂದರೆ ಕೊಟ್ಟಲ್ಲಿ, ಹಫ್ತಾ ವಸೂಲಿ ಮಾಡಿದಲ್ಲಿ, ಬಲವಂತದ ರಿಯಲ್ ಎಸ್ಟೇಟ್ ದಂಧೆ ನಡೆಸಿದರೆ, ಭೂ ಕಬಳಿಕೆ ಮಾಡಿದರೆ, ಹಲ್ಲೆ ಮತ್ತು ಭಯ ಒಡ್ಡಿದರೆ, ಮಹಿಳೆಯರನ್ನು ಚುಡಾಯಿಸಿದರೆ, ಬ್ಲಾಕ್‌ವೆುಲ್ ಮಾಡಿದರೆ
ಹಾಗೂ ಇತ್ಯಾದಿ ರೌಡಿ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ನೇರವಾಗಿ ಅಥವಾ ದೂರವಾಣಿ ಮೂಲಕ ನಗರದ ಸಿಸಿಬಿ ಘಟಕದಲ್ಲಿರುವ ರೌಡಿ ಪ್ರತಿಬಂಧಕ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಮೊ. 94808 02266 ಅಥವಾ ನಗರ ಕಂಟ್ರೋಲ್ ರೂಂ. 0821- 2418100, 2418339 ಮಾಹಿತಿ ನೀಡಬಹುದು. ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.