Advertisement

ಬೆಚ್ಚಗಿನ ಕತೆಗಳು

12:24 PM Dec 12, 2017 | |

ಈ ಬದುಕು ಪುಟ್ಟ ಪುಟ್ಟ ಕತೆಗಳ ಮುತ್ತಿನ ಹಾರ. ಅದರ ಹೊಳಪನ್ನು ಕಂಡುಕೊಳ್ಳುವ ಕಣ್ಣುಗಳು ನಿಮ್ಮದಾಗಿದ್ದರೆ, ಅದಕ್ಕಿಂತ ಚೆಂದ ಈ ಜಗದಲ್ಲಿ ಬೇರಿಲ್ಲ ಅಂತನ್ನಿಸಿ, ಮನಸ್ಸೂಳಗೆ ಮಲ್ಲಿಗೆ ಹೂಬಳ್ಳಿಯ ಹಾದಿಯೊಂದು ಕಾಣಿಸುತ್ತದೆ. ಆ ಹಾದಿಯಲ್ಲಿ ಹೆಕ್ಕಿದ ಹೂವಿನಂಥ ಎರಡು ಕತೆಗಳನ್ನು ಬೊಗಸೆಯಲ್ಲಿ ಹಿಡಿದಾಗ ಈ ಚಳಿಯಲ್ಲಿ ನಿಮ್ಮ ಹೃದಯವೂ ಬೆಚ್ಚಗಾದೀತು…

Advertisement

ಒಂದು ಶೂ ಅಪಹರಣ!
ಮೊನ್ನೆ ತಾನೇ ಖಾದರ್‌ ಸಾಬರ ಲೆಗ್‌ ಫ್ಯಾಷನ್‌ ಶೂ ಅಂಗಡೀಲಿ ನೂರಿಪ್ಪತ್ತೈದು ನಿಮಿಷ ಚೌಕಾಶಿ ಮಾಡಿ ಕೊನೆಗೆ ಒಲ್ಲದ ಮನಸ್ಸಿನಿಂದಲೇ ಸಾವಿರದ ನೋಟು ಕೊಟ್ಟು ತಂದಿದ್ದ ಝಗಮಗಿಸುವ “ಬ್ಲಾಕ್‌’ ಕಂಪನಿಯ ಫಾರ್ಮಲ್ ಶೂಗಳು ನಿನ್ನೆಯೊಂದೇ ದಿನ ಹಾಕುವ ಭಾಗ್ಯ ಕರುಣಿಸಿ, ಇವತ್ತು ಬೆಳಗ್ಗೆ ಚಪ್ಪಲಿ ಸ್ಟ್ಯಾಂಡಿನಿಂದ ದಿಢೀರನೆ ಕಣ್ಮರೆಯಾಗಿದ್ದು ನೋಡಿ, ಒಂದು ಕ್ಷಣ ಎದೆ ಧಸಕ್ಕೆಂದಿತ್ತು. ಆಫೀಸಿಗೆ ಹಾಕಿಕೊಂಡು ಹೋಗಲು ಬೇರೆ ಶೂ ಇಲ್ಲದ ಸಂದಿಗ್ಧತೆ, ಎರಡು ದಿನದ ಸಂಬಳ ನೀರಲ್ಲಿ ಹೋಮವಾಯಿತೆನ್ನುವ ಬೇಸರ ಇವೆಲ್ಲಕ್ಕಿಂತ ಹೆಚ್ಚಾಗಿ ಕದ್ದವನಾರೋ, ಅದೆಲ್ಲೋ ನನ್ನೆಡೆಗೆ ಹೇವರಿಕೆಯ ನಗು ಬೀರುತ್ತಾ ಕುಳಿತಿರಬಹುದು ಎನ್ನುವ ಕಲ್ಪನೆಯೇ ಮೈಯೆಲ್ಲಾ ಉರಿ ಹತ್ತಿಸಿತ್ತು. ಹಾಗೇ ಆಗಿದ್ದಾಯಿತು ಎಂದು ಆಫೀಸು ಮುಗಿಸಿ ಸಾಯಂಕಾಲ ನಾನು ಮನೆಯ ಹತ್ತಿರ ಬರುವುದಕ್ಕೂ, ಮೆಟ್ಟಿಲ ಹತ್ತಿರ ಕೂತಿದ್ದ ಹೊಸದಾಗಿ ಬಂದಿದ್ದ ಪರಿಚಯವಿಲ್ಲದ ಎದುರುಮನೆಯ ಅಂಕಲ… ಬಳಿ ಅವರ ಪುಟ್ಟ ಮಗಳು ಸೂಚನೆಯೇ ಕೊಡದೇ, “ಅಪ್ಪಾ… ಈ ಶೂ ನಂಗೆ’ ಎಂದು ಮನೆಯೊಳಗಿಟ್ಟಿದ್ದ ನನ್ನವೇ ಶೂಗಳನ್ನು ತನ್ನ ಪುಟ್ಟ ಕಾಲುಗಳಿಗೆ ಹಾಕಿಕೊಂಡು ಮುದ್ದಾಗಿ ನಡೆದುಬರುವುದಕ್ಕೂ ಸರಿಯಾಯಿತು. ಒಂದು ಕ್ಷಣ ಕೊಳೆತುಹೋದ ಪಚ್ಚಬಾಳೆಯಂತಾದ ಅವರ ಮುಖ ನೋಡಿ ನಗುತ್ತಾ, “ಏನಂಕಲ್.. ಹೊಸಾ ಶೂ ತಗೊಂಡ್ರಾ? ಚೆನ್ನಾಗಿದೆ, ಚೆನ್ನಾಗಿದೆ…’ ಎಂದು ಮನೆಯೊಳಗೆ ಹೋದೆ. ಬೆಳಗ್ಗೆ ಏಳುವಾಗ ಚಪ್ಪಲಿ ಸ್ಟ್ಯಾಂಡಿನಲ್ಲಿ ಮತ್ತೆ ನನ್ನ ಶೂಗಳು ಝಗಮಗಿಸುತ್ತಿದ್ದವು!

ಹೊಟ್ಟೆಯಲ್ಲಿ ಚಿಟ್ಟೆ ಹಾರಾಡಿದಾಗ…
“ಅವಲಕ್ಕಿ ಬೆಳಗ್ಗೇದು, ಹಾಳಾಗಿರೋ ಹಾಗಿದೆ, ನಂಗೆ ಬೇಡ’ ಎಂದೆ. “ಹೊತ್ತುಹೊತ್ತಿಗೂ ಬಿಸಿಬಿಸಿ ಬೇಕು ಅಂದ್ರೆ ನಾನೆಲ್ಲಿಗೆ ಹೋಗ್ಲಿ? ನಿನಗೆ ಕಷ್ಟ ಅಂದ್ರೆ ಏನೂಂತ ಗೊತ್ತಿಲ್ಲ, ಅದ್ಕೆ ಹಿಂಗಾಡ್ತೀಯ’ ಅಂತ ಅಮ್ಮ ಬೇಸರದಿಂದ ಅಡುಗೆ ಮಾಡಲು ಹೊರಟಳು. ಇತ್ತೀಚೆಗೆ ಯಾಕೋ ಊಟವೇ ಸೇರುತ್ತಿಲ್ಲ. ಜೊತೆಗೆ ನಿದ್ರಾಹೀನತೆ ಬೇರೆ. ವೈದ್ಯರು “ಗಟ್ಟಿಮುಟ್ಟಾಗಿದ್ದೀಯಾ’ ಎಂದರೂ ಯಾಕೋ ಒಂಥರಾ ಅನುಕ್ಷಣವೂ ಹಿಂಸೆ. ಕಾಲೇಜಿನಲ್ಲಿ ಪಾಠ ಕೇಳಲೂ ಆಸಕ್ತಿಯಿಲ್ಲ. “ನಿನ್ನ ವಯಸ್ಸಿನ ಹುಡುಗರು ಎಷ್ಟು ಉತ್ಸಾಹದಿಂದಿರಬೇಕು, ನೀನೊಳ್ಳೆ ಕಟ್ಟಿಹಾಕಿದ ಎಮ್ಮೆಯ ಥರ ಇದ್ದೀಯಲ್ಲ, ನಿನಗಿಂತ ನಾನೇ ಪರವಾಗಿಲ್ಲ’ ಅಂತ ಅಪ್ಪ ಹೇಳಿದಾಗಲೆÇÉಾ ಸಿಟ್ಟು ಬಂದು “ನಿಮ್ಮ ಕಾಲದಲ್ಲಿ ತಿನ್ನೋ ಆಹಾರ ಶುದ್ಧವಾಗಿರ್ತಿತ್ತು, ನಮ್ಮ ಕರ್ಮಕ್ಕೆ ಈಗ ಎಲ್ಲದರಲ್ಲೂ ಕಲಬೆರಕೆ’ ಅಂತ ಉತ್ತರ ನೀಡಿದರೂ ಯಾಕೋ ಈಗೀಗ ಉತ್ಸಾಹಹೀನತೆ ಸ್ವಲ್ಪ ಜಾಸ್ತಿಯೇ ಚಿಂತೆಯುಂಟುಮಾಡಿತ್ತು. 

ಇಷ್ಟರ ಮಧ್ಯೆ ಅಪ್ಪನಿಗೆ ಹುಷಾರು ತಪ್ಪಿದ್ದರಿಂದ ಅವರ ಕೆಲಸವಾದ ಮನೆಮನೆಗೆ ಹೋಗಿ ಪಿಗ್ಮಿ ಸಂಗ್ರಹಿಸುವುದು ನನ್ನ ಹೆಗಲಿಗೆ ಬಿತ್ತು. ಬೆಳಗ್ಗಿನಿಂದ ಸಂಜೆಯವರೆಗೆ ನಡೆದೂ ನಡೆದೂ ಅಪ್ಪ ಪ್ರತಿದಿನ ಇಷ್ಟೊಂದು ಕಷ್ಟಪಡ್ತಾರಾ ಅಂತ ಯೋಚಿಸುತ್ತಾ ಸುಸ್ತಾಗಿ ಮನೆಗೆ ಬಂದವನಿಗೆ ಹೊಟ್ಟೆಯಲ್ಲೆಲ್ಲಾ ಚಿಟ್ಟೆ ಹಾರಾಡಿದಂತೆ ಸಂಕಟ. ತಡೆಯಲಾಗದೇ ಪಾತ್ರೆಯಲ್ಲಿದ್ದ ಸಾಂಬಾರಿಗೆ ಅನ್ನ ಕಲಸಿ ಗಬಗಬ ತಿಂದಾಗ ಅದರ ರುಚಿಗೆ ಒಂದು ರೀತಿ ಇಲ್ಲಿಯವರೆಗೂ ಆಗದಂಥ ದಿವ್ಯಾನುಭವವಾಯ್ತು. ಹಾಗೇ ಸೋಫಾದ ಮೇಲೆ ಕಾಲು ಚಾಚಿದವನಿಗೆ ಕಂಡುಕೇಳರಿಯದಂಥ ಪ್ರಚಂಡ ನಿದ್ರೆ. ಬೆಳಗ್ಗೆ ಅಮ್ಮ ಎಬ್ಬಿಸಿ, “ಆ ಸಾಂಬಾರು ಯಾಕೋ ತಿಂದೆ? ಹಾಳಾಗಿತ್ತು, ಎಸೀಬೇಕು ಅಂತ ಇಟ್ಟಿದ್ದೆ’ ಅಂದಾಗ ಒಂದು ಮುಗುಳ್ನಗೆ ಮುಖದಲ್ಲಿ ಹಾದುಹೋಯಿತು.

– ಸಂಪತ್‌ ಸಿರಿಮನೆ

Advertisement
Advertisement

Udayavani is now on Telegram. Click here to join our channel and stay updated with the latest news.

Next