ಬೆಳ್ಮಣ್ : ಡಾ| ನಿಟ್ಟೆ ಶಂಕರ್ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿನ ವಿದ್ಯಾರ್ಥಿಗಳು ಶಾಲೆಯ ಆವರಣ ಗೋಡೆಯ ಮೇಲೆ ಬಣ್ಣ ಬಳಿದು ವರ್ಲಿ ಆರ್ಟ್ ಬಿಡಿಸುವ ಮೂಲಕ ಸರಕಾರಿ ಶಾಲೆಯೊಂದಕ್ಕೆ ಹೊಸ ಮೆರುಗು ನೀಡಿ ಗಮನ ಸೆಳೆದಿದ್ದಾರೆ. ವಿದ್ಯಾರ್ಥಿಗಳ ಈ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ.
ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ ಏಕೈಕ ಪ್ರಾಥಮಿಕ ಸರಕಾರಿ ಶಾಲೆಯ ಗೋಡೆಗಳಲ್ಲಿ ಇದೀಗ ವರ್ಣರಂಜಿತ ಚಿತ್ರಗಳು ಮೂಡಿದ್ದು ಆಕರ್ಷಣೀಯವಾಗಿದೆ. ಶಾಲೆಯ ಆವರಣ ಗೋಡೆಯುದ್ದಕ್ಕೂ ಇದೀಗ ವರ್ಲಿ ಆರ್ಟ್ ಮೂಡಿದ್ದು ಶಾಲೆಗೆ ಹೊಸ ಮೆರುಗು ಬಂದಂತಾಗಿದೆ.
ನಂದಳಿಕೆಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎನ್ನೆಸ್ಸೆಸ್‌ನ ವಾರ್ಷಿಕ ವಿಶೇಷ ಶಿಬಿರ ನಡೆಯುತ್ತಿದ್ದು ಈ ಸಂದರ್ಭ ವಿದ್ಯಾರ್ಥಿಗಳು ಶಾಲೆಯ ಆವರಣ ಶುಚಿಗೊಳಿಸಿ ಬಳಿಕ ಸ್ಥಳೀಯ ನಂದಳಿಕೆ ಗ್ರಾ.ಪಂ.ನ ಸಹಕಾರದಲ್ಲಿ ಶಾಲೆಯ ಆವರಣ ಗೋಡೆಯ ಮೇಲೆ ವರ್ಲಿ ಚಿತ್ರಗಳನ್ನು ಬಿಡಿಸಿದ್ದಾರೆ. ಸುಮಾರು 10ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವರ್ಲಿ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಾಲೆಯ ಆವರಣ ಗೋಡೆಯ ಅಲಂಕಾರ ಹೆಚ್ಚಿಸಿದ್ದಾರೆ.
ರಾಷ್ಟ್ರೀಯ ಸೇವಾ ಯೋಜನೆಗಳು ಬರೀ ತರಬೇತಿ ಹಾಗೂ ಸಾಮಾನ್ಯವಾಗಿ ಸ್ವತ್ಛತೆಯ ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿರುವ ಈ ಕಾಲಘಟ್ಟದಲ್ಲಿ ನಿಟ್ಟೆ ಕಾಲೇಜು ವಿದ್ಯಾರ್ಥಿಗಳ ಈ ಶಿಬಿರವು ನಂದಳಿಕೆ ಗ್ರಾಮದ ಶಾಲೆಯೊಂದಕ್ಕೆ ಹೊಸ ರೂಪು ನೀಡುವಲ್ಲಿ ಮುಂದಾಗಿದೆ. ಕಾಲೇಜಿನ ವಿದ್ಯಾರ್ಥಿ ಪ್ರಮೋದ್ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಹಲವು ವಿದ್ಯಾರ್ಥಿಗಳು ಜತೆಯಾಗಿ ವರ್ಲಿ ಆರ್ಟ್ ಬಿಡಿಸಿದ್ದಾರೆ. ಜತೆಗೆ ನಂದಳಿಕೆ ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಅಮೀನ್, ಉಜ್ವಲ್ ಹಾಗೂ ರಾಘವೇಂದ್ರ ವಿದ್ಯಾರ್ಥಿಗಳಿಗೆ ಸಹಕರಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ ಉದ್ವಿಗ್ನ: ಹರ್ಷ ಶವಯಾತ್ರೆ ವೇಳೆ ಹಿಂಸಾಚಾರ; ವಾಹನಗಳಿಗೆ ಬೆಂಕಿ
ಪ್ರತಿಭೆಗೆ ಅವಕಾಶ
ಶಾಲೆಯ ಆವರಣ ಗೋಡೆಯ ಮೇಲೆ ವರ್ಲಿ ಚಿತ್ರಗನ್ನು ಬಿಡಿಸಲು ಅವಕಾಶ ಮಾಡಿಕೊಡುವ ಮೂಲಕ ನಮ್ಮಲ್ಲಿ ಪ್ರತಿಭೆಗೂ ಒಂದು ವೇದಿಕೆ ದೊರೆತಂತಾಗಿದೆ.
– ಪ್ರಮೋದ್ ವಿ.ಆಚಾರ್ಯ, ವರ್ಲಿ ಕಲಾವಿದ
ಸ್ಥಳೀಯರ ಸಹಕಾರ
ಈ ಶಿಬಿರದಲ್ಲಿ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೂ ಒಂದು ಅವಕಾಶವನ್ನು ನೀಡಿದಂತಾಗುತ್ತದೆ. ಶಾಲೆಯ ಪರಿಸರ ಸ್ವತ್ಛತೆ ಹಾಗೂ ವರ್ಲಿ ಆರ್ಟ್ ಮಾಡುವ ಕೆಲಸವನ್ನು ವಿದ್ಯಾರ್ಥಿಗಳ ತಂಡ ಮಾಡಿದ್ದು ಸ್ಥಳೀಯ ಪಂಚಾಯತ್ ಹಾಗೂ ಗ್ರಾಮಸ್ಥರು ಸಹಕರಿಸಿದ್ದಾರೆ.
– ಅನುಷಾ, ಎನ್ನೆಸ್ಸೆಸ್ ಘಟಕದ ಶಿಬಿರಾ ಧಿಕಾರಿ