ಬೆಂಗಳೂರು: ಬಿಜೆಪಿ ಕಾರ್ಯತಂತ್ರಕ್ಕೆ ಪ್ರತಿತಂತ್ರವಾಗಿ ಸರ್ಕಾರ ಅತೃಪ್ತರಿಗೆ ನಿಗಮ ಮಂಡಳಿ ಅಧ್ಯಕ್ಷಗಿರಿ ನೀಡುವ ಮೂಲಕ ಆಪರೇಷನ್ ಪ್ರಯತ್ನಕ್ಕೆ ತಡೆಯೊಡ್ಡಿದೆ. ಚಿಂಚೋಳಿ ಶಾಸಕ ಡಾ. ಉಮೇಶ್ ಜಾಧವ್ ಅವರಿಗೆ ವಿಪ್ ಜಾರಿ ಮಾಡಲಾಗಿದ್ದರೂ ಉತ್ತರಿಸದಿದ್ದ ಕಾರಣ ಅವರಿಗೆ ನೀಡಲಾಗಿದ್ದ ಉಗ್ರಾಣ ನಿಗಮವನ್ನು ರದ್ದುಪಡಿಸಿ ಪ್ರತಾಪ ಗೌಡ ಪಾಟೀಲ ಅವರಿಗೆ ನೀಡಲಾಗಿದೆ. ಜತೆಗೆ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ ಅವರಿಗೆ ವಾಲ್ಮೀಕಿ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ (ಸಂಪುಟ ದರ್ಜೆ ಸ್ಥಾನ) ನೀಡಿ ಸರ್ಕಾರ ಆದೇಶಿಸಿದೆ. ವಿಧಾನ ಪರಿಷತ್ ಸದಸ್ಯ ಗೋಪಾಲ ಸ್ವಾಮಿ ಅವರಿಗೆ ಜಲಸಂಪನ್ಮೂಲ ಸಚಿವರ ಸಂಸದೀಯ ಕಾರ್ಯ ದರ್ಶಿಯಾಗಿ ರಾಜ್ಯ ಸಚಿವ ಸ್ಥಾನ ನೀಡಿ ಸಿಎಂ ಆದೇಶ ಹೊರಡಿಸಿದ್ದಾರೆ.
ಕಾನೂನು ತಜ್ಞರ ಮೊರೆ ಹೋದ ಜಾಧವ್
ಕಲಬುರಗಿ: ಸಚಿವ ಸ್ಥಾನ ಸಿಗದಿರುವುದರಿಂದ ಮುನಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೆಡ್ಡು ಹೊಡೆದಿರುವ ಚಿಂಚೋಳಿ ಕ್ಷೇತ್ರದ ಶಾಸಕ ಡಾ| ಉಮೇಶ ಜಾಧವ್ ವಿಪ್ ಉಲ್ಲಂಘಿಸಿದರೆ ಮುಂದೆ ಯಾವ ರೀತಿ ಪರಿಣಾಮ ವಾಗಲಿದೆ ಎನ್ನುವ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.
ಬಜೆಟ್ ಅಧಿವೇಶನ ಮತ್ತು ಶುಕ್ರವಾರ ನಡೆಯುವ ಶಾಸಕಾಂಗ ಪಕ್ಷದ ಸಭೆಗೆ ಕಡ್ಡಾಯವಾಗಿ ಭಾಗವಹಿಸಬೇಕೆಂದು ಕಾಂಗ್ರೆಸ್ ವಿಪ್ ಜಾರಿಗೊಳಿಸಿದೆ. ವಿಪ್ ಉಲ್ಲಂಘಿಸುವ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಕಠಿಣ ನಿರ್ಧಾರವನ್ನು ಕೈಗೊಂಡಿದೆ. ಶಾಸಕಾಂಗ ಪಕ್ಷದ ಸಭೆಗೆ ಗೈರಾದರೆ ಶಾಸಕ ಸ್ಥಾನದಿಂದ ಅನರ್ಹತೆಗೊಳಿಸುವುದಾಗಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ಸಹ ನೀಡಿದ್ದಾರೆ. ಈಗಾಗಲೇ ಎರಡು ದಿನಗಳಿಂದ ಬಜೆಟ್ ಅಧಿವೇಶನಕ್ಕೆ ಗೈರಾಗಿರುವ ಉಮೇಶ ಜಾಧವ್, ಶುಕ್ರವಾರ ನಡೆಯುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುತ್ತಾರೋ, ಇಲ್ಲವೋ ಎನ್ನುವ ಪ್ರಶ್ನೆಗಳು ಎದ್ದಿವೆ. ಇದರ ನಡುವೆ ವಿಪ್ ಉಲ್ಲಂಘನೆ, ಮುಂದೆ ಏನು ಮಾಡಬೇಕೆಂಬ ಬಗ್ಗೆ ಕಾನೂನು ತಜ್ಞರೊಂದಿಗೆ ಜಾಧವ್ ಚರ್ಚಿಸುತ್ತಿ ದ್ದಾರೆಂದು ಆಪ್ತ ಮೂಲಗಳು ‘ಉದಯವಾಣಿ’ಗೆ ಸ್ಪಷ್ಟಪಡಿಸಿವೆ.