ಬೆಂಗಳೂರು: ವಾರ್ಡ್‌ವಾರು ತ್ಯಾಜ್ಯ ನಿರ್ವಹಣೆಗೆ ಬಿಬಿಎಂಪಿಯಿಂದ ಕರೆಯಲಾಗಿದ್ದ ಟೆಂಡರ್ ಅವಧಿ ಪೂರ್ಣಗೊಂಡಿದ್ದು, 167 ವಾಡ್561 ಗುತ್ತಿಗೆದಾರರು ಬಿಡ್ ಸಲ್ಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಪಾಲಿಕೆಯ ಅಧಿಕಾರಿಗಳು ಬಿಡ್‌ಗಳ ಪರಿಶೀಲನೆ ಚಾಲನೆ ನೀಡಿದ್ದಾರೆ.
ಎರಡು ತಿಂಗಳ ಹಿಂದೆ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಪಾಲಿಕೆ ಟೆಂಡರ್ ಆಹ್ವಾನಿಸಿತ್ತು. ಅದರಂತೆ ಟೆಂಡರ್ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಗುತ್ತಿಗೆದಾರರ ಆಯ್ಕೆ ಬಾಕಿಯಿದೆ. ಅದಾದ ಕೂಡಲೇ ವಾರ್ಡ್‌ವಾರು ತ್ಯಾಜ್ಯ ವಿಲೇವಾರಿಗೆ ಕಾರ್ಯಕ್ಕೆ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುತ್ತದೆ.
ಪ್ರಸ್ತುತ 167 ವಾರ್ಡ್‌ಗಳ ಬಿಡ್ ಪರಿಶೀಲನೆ ನಡೆಸಲಿದ್ದು, ಒಟ್ಟು 561 ಗುತ್ತಿಗೆದಾರರಿಂದ ಬಿಡ್ ಸಲ್ಲಿಕೆಯಾಗಿದೆ. ಆದರೆ, ದೇವರಜೀವನಹಳ್ಳಿ ವಾರ್ಡ್‌ನಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಯಾರೊಬ್ಬರು ಬಿಡ್ ಸಲ್ಲಿಸಿಲ್ಲ. ಉಳಿದ 30 ವಾರ್ಡ್‌ಗಳ ತ್ಯಾಜ್ಯ ನಿರ್ವಹಣೆ ವಿಚಾರ ಹೈಕೋರ್ಟ್‌ನಲ್ಲಿರುವ ಕಾರಣ, ಅವುಗಳಿಗೆ ಸಲ್ಲಿಕೆಯಾದ ಬಿಡ್‌ಗಳನ್ನು ಪರಿಶೀಲಿಸುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಒಬ್ಬರಿಗೆ ಐದು ವಾರ್ಡ್ ಹೊಣೆ: ಪಾಲಿಕೆಯ ಅಧಿಕಾರಿಗಳು 167 ವಾರ್ಡ್‌ಗಳಿಗೆ ಸಲ್ಲಿಕೆಯಾಗಿರುವ ಬಿಡ್ ಪರಿಶೀಲನೆಗೆ ಮುಂದಾಗಿದ್ದು, ಕಡಿಮೆ ಮೊತ್ತದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವವರಿಗೆ ಗುತ್ತಿಗೆ ನೀಡಲಾಗುತ್ತದೆ. ಜತೆಗೆ ಟೆಂಡರ್ ಷರತ್ತಿನಲ್ಲಿರುವ ಅಂಶಗಳಂತೆ ವಾಹನಗಳು ಸೇರಿ ಇನ್ನಿತರ ಅಗತ್ಯ ಪರಿಕರ ಹೊಂದಿರುವವರನ್ನು ಪರಿಗಣಿಸಲಾಗುತ್ತದೆ. ಒಬ್ಬ ಗುತ್ತಿಗೆದಾರರಿಗೆ 5 ವಾರ್ಡ್‌ನ ತ್ಯಾಜ್ಯ ನಿರ್ವಹಣೆ ಗುತ್ತಗೆ ನೀಡಲಾಗುತ್ತದೆ.
ಮೂರು ಬಗೆಯ ತ್ಯಾಜ್ಯ ಸಂಗ್ರಹ: ಪಾಲಿಕೆಯಿಂದ ಈ ಹಿಂದೆ ಹಸಿ ತ್ಯಾಜ್ಯ ಸಂಗ್ರಹಕ್ಕಷ್ಟೇ ಟೆಂಡರ್ ಆಹ್ವಾನಿಸಲಾಗಿತ್ತು. ಒಣ ತ್ಯಾಜ್ಯವನ್ನು ಸ್ವಯಂ ಸೇವಾ ಸಂಸ್ಥೆ ಮತ್ತು ಚಿಂದಿ ಆಯುವವರಿಗೆ ನೀಡುವುದು ಹಾಗೂ ಸಗಟು ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸಲು ನಿರ್ಧರಿಸಲಾಗಿತ್ತು.
ಆದರೆ, ಮೇಯರ್ ಅಧ್ಯಕ್ಷತೆಯ ಸಮಿತಿಯಲ್ಲಿ ಹಸಿ, ಒಣ ಮತ್ತು ಸಗಟು ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಹೊಣೆಯನ್ನು ಒಬ್ಬರಿಗೇ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ಅದರಂತೆ ಟೆಂಡರ್ ಷರತ್ತಿನಲ್ಲಿ ಮಾರ್ಪಾಡು ಮಾಡಿದ್ದ ಅಧಿಕಾರಿಗಳು, ವಾರ್ಡ್‌ನಲ್ಲಿ ಉತ್ಪತ್ತಿಯಾಗುವ ಎಲ್ಲ ಬಗೆಯ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿಯನ್ನು ಒಬ್ಬರೇ ಗುತ್ತಿಗೆದಾರರಿಗೆ ನೀಡಲು ನಿರ್ಧರಿಸಲಾಗಿದೆ.