ಬೆಂಗಳೂರು: ಸಾಕಷ್ಟು ನಿಯಮಗಳ ಹೊರತಾಗಿಯೂ ಒಎಫ್ಸಿ ಕಿರಿಕಿರಿ ಮುಂದುವರಿದ ಹಿನ್ನೆಲೆಯಲ್ಲಿ ಈ ಸಮಸ್ಯೆಗೆ ಇನ್ನುಮುಂದೆ ವಾರ್ಡ್ ಇಂಜಿನಿಯರ್‌ಗಳನ್ನೇ ಹೊಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ.
ಈ ಸಂಬಂಧ ಈಚೆಗೆ ಪರಿಷ್ಕೃತ ಆದೇಶ ಹೊರಡಿಸಿರುವ ಪಾಲಿಕೆ, ಅನಧಿಕೃತವಾಗಿ ರಸ್ತೆ ಕತ್ತರಿಸುವ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಅಥವಾ ಸಾರ್ವಜನಿಕರ ವಿರುದ್ಧ ಘಟನೆ ನಡೆದ ತಕ್ಷಣ ಎಫ್ಐಆರ್ ದಾಖಲಿಸಿ, ವಲಯ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತರು 25 ಲಕ್ಷ ರೂ. ದಂಡ ಹಾಗೂ ಸಾರ್ವಜನಿಕರಿಗೆ ಹತ್ತು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು.
ಇದಕ್ಕೆ ಪೂರಕವಾದ ಛಾಯಾಚಿತ್ರಗಳು ಮತ್ತು ಇತರೆ ದಾಖಲೆಗಳನ್ನು ಕ್ರೋಡೀಕರಿಸುವುದು ಆಯಾ ಸಂಬಂಧಪಟ್ಟ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹೊಣೆ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಸಾಕಷ್ಟು ನಿಯಮಾವಳಿ ರೂಪಿಸಿದ್ದರೂ ಅನಧಿಕೃತ ಓಎಫ್ಸಿ ಅಳವಡಿಕೆಗೆ ಕಡಿವಾಣ ಬಿದ್ದಿಲ್ಲ. ಈ ಮಧ್ಯೆ ದೂರುಗಳು ಕೇಳಿಬರುತ್ತಲೇ ಇವೆ.
ಆದ್ದರಿಂದ ಅನಧಿಕೃತವಾಗಿ ಓಎಫ್ಸಿ ಅಳವಡಿಸುವುದನ್ನು ತಡೆಯುವ ಮತ್ತು ಮೇಲ್ವಿಚಾರಣೆ ಮಾಡುವ ಸಂಪೂರ್ಣ ಹೊಣೆಗಾರಿಕೆಯನ್ನು ವಾರ್ಡ್‌ಗಳ ಸಹಾಯಕ ಮತ್ತು ಕಿರಿಯ ಎಂಜಿನಿಯರ್‌ಗಳಿಗೆ ನೀಡಲಾಗಿದ್ದು, ನಿರ್ವಹಣೆಯಲ್ಲಿ ಲೋಪ ಎಸಗಿದರೆ ಕರ್ತವ್ಯ ನಿರ್ಲಕ್ಷ್ಯಆರೋಪದಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಎಫ್ಐಆರ್ ದಾಖಲಿಸಿ, ದಂಡ ವಿಧಿಸಲು ಮುಖ್ಯ ಎಂಜಿನಿಯರ್‌ಗಳಿಗೆ ಸಹಾಯಕ ಎಂಜಿನಿಯರ್ ಪ್ರಸ್ತಾವನೆ ಸಲ್ಲಿಸತಕ್ಕದ್ದು. ಪಾಲಿಕೆ ವ್ಯಾಪ್ತಿಯ ರಸ್ತೆಗಳನ್ನು ಅಗೆದು, ಅನಧಿಕೃತ ಅಳವಡಿಕೆ ನಡೆಯುತ್ತಿರುವಾಗ ತಟಸ್ಥವಾಗಿರುವ ಅಧಿಕಾರಿಗಳು,
ಘಟನೆ ನಂತರದಲ್ಲೂ ಯಾವುದೇ ಕಾನೂನಾತ್ಮಕ ಕ್ರಮ ಕೈಗೊಳ್ಳದೆ, ರಸ್ತೆಗುಂಡಿಗಳಿಗೆ ಅನಧಿಕೃತ ಓಎಫ್ಸಿ ಅಳವಡಿಕೆ ಕಾರಣ ಎಂದು ಸಬೂಬು ಹೇಳುವುದನ್ನು ಕೂಡ ಕರ್ತವ್ಯ ನಿರ್ಲಕ್ಷ್ಯ ಎಂದು ಪರಿಗಣಿಸುವುದಾಗಿಯೂ ಆದೇಶದಲ್ಲಿ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.