Advertisement

ವಾರ್ಡ್‌ ಸಮಿತಿ ರಚನೆ: ಮಾಹಿತಿಗೆ ಹೈ ಸೂಚನೆ

12:13 PM Dec 20, 2018 | Team Udayavani |

ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ ಸಮಿತಿ ಏರಿಯಾ ಸಭೆಗಳನ್ನು ರಚಿಸುವ ಸಂಬಂಧ ಅಗತ್ಯ ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬುಧವಾರ ನಿರ್ದೇಶನ ನೀಡಿದೆ. 

Advertisement

ಈ ಕುರಿತಂತೆ ಮಂಗಳೂರು ನಿವಾಸಿ ನೈಗಲ್‌ ಅಲ್‌ಬುಕರ್ಕ್‌ ಹಾಗೂ ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ನ್ಯಾಯಪೀಠ, ಈ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು. 

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್‌ ಸಮಿತಿಗಳು ಮತ್ತು ಏರಿಯಾ ಸಭಾಗಳನ್ನು ರಚಿಸುವಂತೆ ಅರ್ಜಿದಾರರು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ 2017ರ ಜೂ.13ರಂದು ಮನವಿ ಸಲ್ಲಿಸಿದ್ದರು.

ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಾರಣ ಕೇಳಿ ಇಬ್ಬರಿಗೂ ಆದೇ ವರ್ಷ ನ.16ರಂದು ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿತ್ತು. ಯಾವುದೇ ಸ್ಪಂದನೆ ಸಿಗದ ಕಾರಣ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. 

ವಾರ್ಡ್‌ ಸಮಿತಿ ಹಾಗೂ ಏರಿಯಾ ಸಭಾಗಳನ್ನು ರಚನೆ ಮಾಡದ ಕಾರಣ ನಗರದ ನಾಗರಿಕರು ಅನೇಕ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಉದಾಹರಣೆಗೆ ಮಂಗಳೂರು ಮಹಾನಗರ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

Advertisement

ಇದಕ್ಕಾಗಿ ಪ್ರತಿ ದಿನ 1,700 ಲಕ್ಷ ಲೀಟರ್‌ ನೀರು ಪೂರೈಸುವ ಯೋಜನೆಯನ್ನು ಆಯುಕ್ತರು ಕೈಗೆತ್ತಿಕೊಂಡಿದ್ದಾರೆ. ಆದರೆ, ಅವಶ್ಯಕತೆ ಇರುವುದು ಪ್ರತಿ ದಿನ 1,300 ಲಕ್ಷ ಲೀಟರ್‌ ನೀರು ಮಾತ್ರ. ಹಾಗಾಗಿ, ಪ್ರತಿ ದಿನ 400 ಲಕ್ಷ ಲೀಟರ್‌ ನೀರು ಸೂರಿಕೆಯಾಗುತ್ತಿದೆ.

ವಾರ್ಡ್‌ ಸಮಿತಿ, ಏರಿಯಾ ಸಭಾ ರಚನೆ ಆದರೆ, ಇದನ್ನು ತಡೆಗಟ್ಟಬಹುದು. ಏರಿಯಾ ಸಭಾಗಳು ರಚನೆ ಮಾಡದೆ ಅದಕ್ಕೆ ಪ್ರತಿನಿಧಿಗಳನ್ನು ಆಯ್ಕೆ ಮಾಡದ ಪರಿಣಾಮವಾಗಿ ಆಯಾ ಏರಿಯಾದ ನಾಗರಿಕರು ನಗರ ಆಡಳಿತ, ಯೋಜನೆ, ಅನುಷ್ಠಾನ ಇತರೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next