Advertisement

ಸಾರ್ವಜನಿಕ ಜಾಗೃತಿಗಾಗಿ ಬೀಟ್‌ ಸದಸ್ಯರ ನೇಮಕ

02:55 AM Jul 25, 2018 | Team Udayavani |

ಪಡುಬಿದ್ರಿ: ಸಾರ್ವಜನಿಕರು ಎಲ್ಲದಕ್ಕೂ ಪೊಲೀಸರನ್ನೇ ಹೊಣೆ ಮಾಡುವುದಕ್ಕಿಂತ ಮೊದಲು ತಾವೂ ಜಾಗೃತರಾಗಬೇಕು ಎಂಬ ನಿಟ್ಟಿನಲ್ಲಿ ಪೊಲೀಸ್‌ ಠಾಣಾ ಸರಹದ್ದಿನ ಗ್ರಾಮಗಳಲ್ಲಿ ವಾರ್ಡ್‌ ಬೀಟ್‌ ಸದಸ್ಯರ ಚಿಂತನೆಯನ್ನು ಇಲಾಖೆ ಕೈಗೆತ್ತಿಕೊಂಡಿದೆ. ಅಪರಿಚಿತ ಯಾರೇ ಬಾಡಿಗೆದಾರರಿರಲಿ, ಅವರ ವಿಳಾಸ ಹಾಗೂ ಗುರುತು ಪತ್ರವನ್ನು  ಕಟ್ಟಡದ ಮಾಲಕರು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಹಾಗೂ ಪೊಲೀಸ್‌ ಠಾಣೆಗೂ ನೀಡಬೇಕು ಎಂದು ಪಡುಬಿದ್ರಿ ಠಾಣಾಧಿಕಾರಿ ಸತೀಶ್‌ ತಿಳಿಸಿದರು. ಅವರು ಜು. 24ರಂದು ಬೀಡಿನಕರೆ ಅಂಗನವಾಡಿಯಲ್ಲಿ ನಡೆದ ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯ 3 ಮತ್ತು 4 ನೇ ವಾರ್ಡ್‌ಗೆ ಸಂಬಂಧಿಸಿದ ಪೊಲೀಸ್‌ ಬೀಟ್‌ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

Advertisement

ಕಳೆದ ಕೆಲ ದಿನಗಳ ಹಿಂದೆ ಹೆಜಮಾಡಿಯಲ್ಲಿ ಬೈಕ್‌ ಕಳ್ಳತನದ ಪ್ರಕರಣವೊಂದು ನಡೆದಿತ್ತು. ಈ ಪ್ರಕರಣದಲ್ಲಿ ಮನೆಯಲ್ಲಿ ಬಾಡಿಗೆಯಲ್ಲಿದ್ದ ವ್ಯಕ್ತಿಗಳೇ ಬೈಕ್‌ ಕದ್ದೊಯ್ದಿದ್ದರು. ಆದರೆ ಮನೆಯವರಲ್ಲಿ ವಿಚಾರಿಸಿದಾಗ ಬಾಡಿಗೆದಾರರ ಯಾವುದೇ ಗುರುತು ಪತ್ರವಿರಲಿಲ್ಲ. ಇದರಿಂದ ಆರೋಪಿಗಳ ಪತ್ತೆಗೆ ತೊಡಕಾಗಿತ್ತು ಎಂದರು. ಕನ್ನಂಗಾರಿನ ಮದರಸ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಸುರಿಯಲಾಗುತ್ತಿದೆ. ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ ಎಂದು ಗ್ರಾಮಸ್ಥರು ಪಡುಬಿದ್ರಿ ಗ್ರಾ.ಪಂ. ಪಿಡಿಒ ಅವರನ್ನು ಪ್ರಶ್ನಿಸಿದರು.

ಪಡುಬಿದ್ರಿಯ ಘನ ತ್ಯಾಜ್ಯ ಸಮಸ್ಯೆಗೆ ಶೀಘ್ರದಲ್ಲಿ ಮುಕ್ತಿ ದೊರೆಯಲಿದೆ. ನಡ್ಪಾಲು ಗ್ರಾಮದಲ್ಲಿ ಸುಮಾರು ಒಂದು ಎಕರೆ ಜಮೀನು ಇರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಅದರ ಸರ್ವೇ ಸಂಖ್ಯೆ ಗುರುತಿಸಿ ಘಟಕ ನಿರ್ಮಾಣ ಮಾಡಲು ಪ್ರಯತ್ನಿಸಲಾಗುತ್ತದೆ. ಈಗಾಗಲೇ ಗ್ರಾ.ಪಂ. ಕಟ್ಟಡದ ಬಳಿಯಲ್ಲಿ ಘನತ್ಯಾಜ್ಯ ಸಂಸ್ಕರಣಾ ಪ್ರಾಯೋಗಿಕ ಘಟಕ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದು ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ವಿವರಿಸಿದರು.

ಬೀಡು ಮಂಜೊಟ್ಟಿ ರಸ್ತೆಯಲ್ಲಿ ಸಂಚರಿಸುವವರ ಬಗ್ಗೆ ನಿಗಾವಹಿಸಬೇಕು. ಕನ್ನಂಗಾರಿನ ಮಸೀದಿ ಪ್ರದೇಶದಲ್ಲಿ ನಡೆಯುವ ಸಮಾರಂಭಗಳಿಗೆ ಆಗಮಿಸುವವರು ರಸ್ತೆಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು. ಪೊಲೀಸರು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರೊಬೆಶನರಿ ಸಹಾಯಕ ಕಮಿಷನರ್‌ ಮಂಜುನಾಥ್‌, ಪಡುಬಿದ್ರಿ ಠಾಣೆಯ ಎಎಸ್‌ಐ ದಿವಾಕರ್‌ ಸುವರ್ಣ, ಹೆಡ್‌ ಕಾನ್‌ಸ್ಟೆಬಲ್‌ ಯೋಗೀಶ್‌, ಗ್ರಾ.ಪಂ. ಸದಸ್ಯರಾದ ಮೈಯ್ಯದಿ, ರವಿಚಂದ್ರ, ಶಶಿಕಲಾ, ಸ್ಥಳೀಯರಾದ ರೋಹಿತಾಕ್ಷ ಸುವರ್ಣ, ಶ್ರೀನಾಥ್‌ ಹೆಗ್ಡೆ, ಅಂಗನವಾಡಿ ಶಿಕ್ಷಕಿ ಲೀಲಾವತಿ ಉಪಸ್ಥಿತರಿದ್ದರು.

Advertisement

ಮಕ್ಕಳಿಗೆ ಮೊಬೈಲ್‌ ಬೇಡ
ಯಾರೇ ಅಪರಿಚಿತ ವ್ಯಕ್ತಿಗಳು ಏನೇನೋ ನೆಪದಿಂದ ರಸ್ತೆಗಳಲ್ಲಿ ಹಾಗೂ ಒಂಟಿ ಮಹಿಳೆಯರಿರುವ ಮನೆಗಳಿಗೆ ಭೇಟಿ ನೀಡುವ ಸಮಯದಲ್ಲಿ ಎಚ್ಚರದಿಂದಿರಬೇಕು. ಶಾಲಾ ಮಕ್ಕಳ ಕೈಯಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್‌ ನೀಡಬೇಡಿ. ಮಕ್ಕಳು ಮನೆಗೆ ಬರುವಾಗ ದಾರಿ ಕಡೆ ಗಮನವಿರದೆ ಕೇವಲ ಮೊಬೈಲ್‌ ಮೇಲಿರುತ್ತದೆ. ಇದು ದುಷ್ಕರ್ಮಿಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆಯೂ ಎಚ್ಚರವಹಿಸಬೇಕು ಎಂದು ಪಡುಬಿದ್ರಿ ಠಾಣಾಧಿಕಾರಿ ಸತೀಶ್‌ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next