Advertisement

“ಯುದ್ಧ ಖೈದಿಗಳಿಗೆ ಭಯವೆಂಬುದೇ ತಿಳಿದಿರುವುದಿಲ್ಲ’ 

12:30 AM Mar 01, 2019 | |

1965ರ ಇಂಡೋ-ಪಾಕ್‌ ಕದನ. ಆಗ ಪಾಕಿಸ್ಥಾನ ದಲ್ಲಿ ಯುದ್ಧ ಖೈದಿಯಾಗಿ ನಾಲ್ಕು ತಿಂಗಳು ಸೆರೆವಾಸದಲ್ಲಿದ್ದವರಲ್ಲಿ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಪುತ್ರ ನಿವೃತ್ತ ಏರ್‌ ಮಾರ್ಷಲ್‌ ಕೆ.ಸಿ. ನಂದ ಕಾರ್ಯಪ್ಪ ಅವರೂ ಒಬ್ಬರು. ಮಡಿಕೇರಿ ನಗರದಿಂದ ಸ್ವಲ್ಪ ದೂರದಲ್ಲಿರುವ ಅವರ ನಿವಾಸಕ್ಕೆ ಉದಯವಾಣಿ ಭೇಟಿ ನೀಡಿದಾಗ ಅಂದಿನ ಅನುಭವ ಹಂಚಿಕೊಂಡಿದ್ದು ಇಲ್ಲಿದೆ.

Advertisement

“ಯುದ್ಧ ಖೈದಿಗಳಿಗೆ ಭಯವೆಂಬುದೇ ತಿಳಿದಿರುವುದಿಲ್ಲ’ ಎನ್ನುವ ನಿವೃತ್ತ ಏರ್‌ ಮಾರ್ಷಲ್‌ ಕೆ. ನಂದ ಕಾರ್ಯಪ್ಪ, “ಅಭಿನಂದನ್‌ ಬಿಡುಗಡೆಯ ಸುದ್ದಿ ಬಂದೇ ಬರುತ್ತೆ’ ಎಂದು ಹೇಳುವಾಗಲೇ ಅಭಿನಂದನ್‌ಬಿಡುಗಡೆ ಗೊಳ್ಳುವ ಸುದ್ದಿ ಬಿತ್ತರವಾಯಿತು.

1965ರಲ್ಲಿ ಭಾರತ ಮತ್ತು ಪಾಕಿಸ್ಥಾನ ದ ನಡುವಿನ ಯುದ್ಧದ ಸಂದರ್ಭದಲ್ಲಿ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸಿ  ವಾಪಸಾಗುವಾಗ ಪಾಕ್‌ನ ಯುದ್ಧ ವಿಮಾನಗಳ ದಾಳಿಗೆ ಅವರು ಚಾಲನೆ ಮಾಡುತ್ತಿದ್ದ ಹಾಕರ್‌ ಹಂಟರ್‌ ಏರ್‌ಕ್ರಾಫ್ಟ್ ಧರೆಗುರುಳಿತು.  ಅಂದಿನ ತಮ್ಮ ಅನುಭವವನ್ನು ಹಂಚಿಕೊಂಡ ನಂದ ಕಾರ್ಯಪ್ಪ, “ನನಗೆ ಇನ್ನೂ ಚೆನ್ನಾಗಿ ನೆನಪಿದೆ. 1965ರ ಸೆಪ್ಟೆಂಬರ್‌ 22. ನನಗೆ ಶತ್ರು ಶಿಬಿರಗಳ ಮೇಲೆ ದಾಳಿ ನಡೆಸುವ ಹೊಣೆ ವಹಿಸಲಾಗಿತ್ತು. ಅದರಂತೆ ಹಲ್ವಾರಾ ವಾಯುಕೇಂದ್ರದಿಂದ ನನ್ನ ಗುರಿಯತ್ತ ಹೊರಟೆ. ಕೆಲವೇ ಸಮಯದಲ್ಲಿ ನಿಯೋಜಿತ ಕಾರ್ಯ ಮುಗಿಸಿ ನಮ್ಮ ಏರ್‌ಬೇಸ್‌ಗೆ ವಾಪಸು ಹೊರಟೆ. ಅಷ್ಟರಲ್ಲಿ ಪಾಕಿಸ್ಥಾನ ದ ಯುದ್ಧ ವಿಮಾನಗಳು ನನ್ನತ್ತ ನಿರಂತರ ದಾಳಿ ನಡೆಸಿದವು. ಅದರ ಪರಿಣಾಮ ನಾನು ಚಾಲನೆ ಮಾಡುತ್ತಿದ್ದ ವಿಮಾನ ಧರೆಗುರು ಳಿತು. 100ಕ್ಕೂ ಹೆಚ್ಚು ಅಡಿಎತ್ತರದಿಂದ ಕೆಳಬಿದ್ದೆ. ನನ್ನ ಸೊಂಟ ಮತ್ತು ಕೈಗೆ ಹಾನಿಯಾಯಿತು. ಅಷ್ಟರಲ್ಲಿ ನನ್ನನ್ನು ಪಾಕಿಸ್ಥಾನ ದ ಸೈನಿಕರು ಸುತ್ತುವರಿದರು’ ಎಂದು 53 ವರ್ಷಗಳ ಹಿಂದಿನ ದಿನಗಳಿಗೆ ತೆರಳಿದರು ಅವರು.

“ನನ್ನ ಕೈ ಮತ್ತು ಸೊಂಟಕ್ಕೆ ಹಾನಿಯಾಗಿದ್ದರಿಂದ ಕೂಡಲೇ ಸ್ಟ್ರೆಚರ್‌ ಮೂಲಕ ಲಾಹೋರ್‌ನ ಸೇನಾ ಆಸ್ಪತ್ರೆಗೆ ಕರೆದೊಯ್ದರು. 3 ವಾರಗಳ ಚಿಕಿತ್ಸೆ ಬಳಿಕ ಯುದ್ಧ ಖೈದಿಗಳ ಶಿಬಿರಕ್ಕೆ ವರ್ಗಾಯಿಸಿದರು. ಪ್ರತಿದಿನ ಸಸ್ಯಾಹಾರ ನೀಡುತ್ತಿದ್ದರು. ಬೆಳಗ್ಗೆ 7 ಗಂಟೆಗೆ ಪೂರಿ, ಚಹಾ, 11.30ಕ್ಕೆ ಚಪಾತಿ ಊಟ  ಸಂಜೆ 6 ಹೊತ್ತಿಗೆ ರಾತ್ರಿಯ ಊಟ ವಿತರಣೆಯಾಗುತ್ತಿತ್ತು’. 

ಬಿಡುವುದಿದ್ದರೆ ಎಲ್ಲರನ್ನೂ ಬಿಡಿ
ಪಾಕಿಸ್ಥಾನ ದ ಸೇನಾಧಿಕಾರಿ ಅಯೂಬ್‌ ಖಾನ್‌ ಕೆ.ಸಿ. ನಂದಾ ಕಾರ್ಯಪ್ಪನವರನ್ನು ಗುರುತು ಹಚ್ಚಿ, ರೇಡಿಯೋದ ಮೂಲಕ “ಜೂನಿಯರ್‌ ಕಾರಿಯಪ್ಪನವರನ್ನು ಬಂಧಿಸಿರುವುದಾಗಿ’ ಬಿತ್ತರಿಸಿದ್ದ. ವಾಸ್ತವವಾಗಿ ಕೆ.ಎಂ. ಕಾರಿಯಪ್ಪನವರಲ್ಲಿ  ಆಗಿನ ಪಾಕಿಸ್ಥಾನ ದ ಸೇನಾಧಿಕಾರಿ ಅಯೂಬ್‌ ಖಾನ್‌ ಜತೆ ಕೆಲಸ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೆ.ಎಂ. ಕಾರಿಯಪ್ಪನವರನ್ನು ಸಂಪರ್ಕಿಸಿದ ಅಯೂಬ್‌ಖಾನ್‌, “ನಿಮ್ಮ ಮಗನನ್ನು ಸೆರೆ ಹಿಡಿದಿದ್ದೇನೆ. ಸುರಕ್ಷಿತವಾಗಿದ್ದಾರೆ’ ಎಂದಿದ್ದರಂತೆ. ಆಗಲೂ ನನ್ನ ತಂದೆ, “ನನ್ನ ಮಗನೆಂದು ವಿಶೇಷ ಆದರಾತಿಥ್ಯಗಳನ್ನು ಕೊಡಬೇಕಿಲ್ಲ, ಎಲ್ಲರಂತೆ ನಡೆಸಿಕೊಳ್ಳಿ. ಕರೆ ಮಾಡಿ ತೋರಿದ ಕಾಳಜಿಗೆ ಧನ್ಯವಾದ’ ಎಂದಿದ್ದರು. ಜತೆಗೆ ಎಲ್ಲರನ್ನೂ ಬಿಡುವುದಾದರೆ, ಬಿಡಿ. ನನ್ನ ಮಗನೊಬ್ಬನೇ ಅಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ತಂದೆಯನ್ನು ನೆನೆಯುತ್ತಾರೆ ನಂದ ಕಾರ್ಯಪ್ಪ.

Advertisement

ಆದರೆ ನಂದಾ ಕಾರ್ಯಪ್ಪನವರು ಸೇನೆಗೆ ಸಿಕ್ಕಿದ್ದು ಯುದ್ಧ ಸಂದರ್ಭದಲ್ಲಿ. ಅಭಿನಂದನ್‌ ವರ್ಧಮಾನ್‌ ಅವರು ಸೆರೆ ಸಿಕ್ಕಿದ ಸಂದರ್ಭ ಸ್ವಲ್ಪ ಭಿನ್ನ. ಆದರೆ ಒಟ್ಟೂ ಪ್ರಕ್ರಿಯೆ ಬಹಳ ಭಿನ್ನವಾಗಿರುವುದಿಲ್ಲ. ಕೊನೆಗೆ ಎರಡೂ ಸರಕಾರಗಳು ಮಾತುಕತೆ ನಡೆಸಿದವು. ಅದರಂತೆ ನಂದ ಕಾರ್ಯಪ್ಪನವರ ಬಿಡುಗಡೆಗೆ ವೇದಿಕೆ ಸಿದ್ಧವಾಯಿತು. ವಿಶೇಷ ವಿಮಾನದಲ್ಲಿ ಸೇನಾಧಿಕಾರಿ ಮೂಸಾ ಜತೆಗೆ ಇನ್ನೂ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದಿಳಿದರು. 

ಪಾಕಿಸ್ಥಾನದ ಯುದ್ಧ ವಿಮಾನಗಳು ನನ್ನತ್ತ ನಿರಂತರ ದಾಳಿ ನಡೆಸಿದವು. ನನ್ನ ವಿಮಾನ ಧರೆಗುರುಳಿತು. 100ಕ್ಕೂ ಹೆಚ್ಚು ಅಡಿಯಷ್ಟು ಎತ್ತರದಿಂದ ಕೆಳಬಿದ್ದೆ. ನನಗೆ ಗಾಯವಾಯಿತು. ಅಷ್ಟರಲ್ಲಿ ನನ್ನನ್ನು ಪಾಕಿಸ್ಥಾನದ ಸೈನಿಕರು ಸುತ್ತುವರಿದರು.

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next