Advertisement

1971ರ ಯುದ್ಧ ವಿವರಿಸಿದ ಬ್ರಿ|ಐ. ಎನ್‌.ರೈ

10:55 AM Dec 16, 2017 | |

ಮಹಾನಗರ : ‘ಅದು 1971ರ ಡಿಸೆಂಬರ್‌ 11ನೇ ತಾರೀಕು ರಾತ್ರಿ 11 ಗಂಟೆ. ಪಾಕಿಸ್ಥಾನದ ಕೈಯಲ್ಲಿದ್ದ ಫತೇಪುರ್‌ ಪ್ರದೇಶವನ್ನು ವಶಪಡಿಸಲು ಎಲ್ಲ ರೀತಿಯ ಸಿದ್ಧತೆಗಳೊಂದಿಗೆ ವೆಸ್ಟರ್ನ್ ಬಾರ್ಡರ್‌ನಲ್ಲಿ ಸೇರಿದ್ದೆವು. ಪಾಕ್‌ ಕಡೆಯಿಂದ ಶೆಲ್‌ ದಾಳಿ ಆಗುತ್ತಲೇ ಇತ್ತು. ಗುಂಡಿನ ಮೊರೆತ ನಿರಂತರ ಕೇಳುತ್ತಿತ್ತು. ರಾತ್ರಿ 11ರಿಂದ ಬೆಳಗಿನ ಜಾವ 3.30ರ ತನಕ ಧೈರ್ಯಗುಂದದೆ ಹೋರಾಡಿದೆವು. ನಾಲ್ಕು ಗಂಟೆ ಹೊತ್ತಿಗೆ ಫತೇಪುರ್‌ ನಮ್ಮದಾಯಿತು. ಶತ್ರುಗಳನ್ನು ಸದೆ ಬಡಿದು ವಿಜಯದ ನಗೆ ಬೀರಿದೆವು. ಡಿ. 16ರ ವರೆಗೂ ಫತೇಪುರವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತ ಕುಳಿತಿದ್ದೆವು!’

Advertisement

1971ರ ಡಿ. 3ರಿಂದ 16ರ ಭಾರತ-ಪಾಕ್‌ ಯುದ್ಧದಲ್ಲಿ ಪಾಲ್ಗೊಂಡ ಮತ್ತು ಫತೇಪುರ್‌ ಅನ್ನು ಪಾಕ್‌ನಿಂದ ವಶಪಡಿಸಲು ಶ್ರಮಿಸಿದ ರೋಚಕ ದಿನಗಳನ್ನು ಮಾಜಿ ಯೋಧ, ಮಂಗಳೂರಿನ ಬ್ರಿ| ಐ. ಎನ್‌. ರೈ ಅವರು ‘ಉದಯವಾಣಿ’ಯೊಂದಿಗೆ ನೆನಪಿಸಿಕೊಂಡರು.

‘ಶಾಂತವಾಗಿದ್ದ ಪಶ್ಚಿಮದ ಗಡಿಯಲ್ಲಿ ಡಿ. 3ರಂದು ಪಾಕ್‌ ಯುದ್ಧ ಆರಂಭಿಸಿತ್ತು. ನಾನು ಸಹಿತ ನಮ್ಮ ಸೈನಿಕರು ವೆಸ್ಟರ್ನ್ ಬಾರ್ಡರ್‌ನಲ್ಲಿದ್ದೆವು. ಪಾಕ್‌ ಯುದ್ಧ ವಿಮಾನಗಳು ನಮ್ಮ ವಾಯು ನೆಲೆಗಳ ಮೇಲೆ ದಾಳಿ ಮಾಡಿದವು. ನಮ್ಮ ತಲೆ ಮೇಲೆಯೇ ವಿಮಾನಗಳು ಹಾರುತ್ತಿದ್ದವು. ತತ್‌ಕ್ಷಣ ಅಲರ್ಟ್‌ ಆದ ನಮ್ಮ ಏರ್‌ ಪೋರ್ಸ್‌ ಪ್ರತಿದಾಳಿ ನಡೆಸಿ ಪಾಕನ್ನು ಹಿಮ್ಮೆಟ್ಟಿಸಿತು’.

‘ವೆಸ್ಟನ್‌ ಬಾರ್ಡರ್‌ನಲ್ಲಿ ಶೆಲ್ಲಿಂಗ್‌ ಶುರುವಾಯಿತು. ಅಮೃತ್‌ಸರ- ಲಾಹೋರ್‌ನ ಗಡಿ ಪ್ರದೇಶದಲ್ಲಿ ನಾನಿದ್ದೆ. ಅಲ್ಲಿಂದ ಡಿ. 10ರ ವರೆಗೆ ಚಿಕ್ಕಪುಟ್ಟ ಯುದ್ಧಗಳು ಆಗುತ್ತಲೇ ಇದ್ದವು. ಆ ಹೊತ್ತಿನಲ್ಲೇ ಫತೇಪುರ್‌ ಅನ್ನು ಆಕ್ರಮಿಸುವಂತೆ ನಮಗೆ ಮೇಲಧಿಕಾರಿಗಳಿಂದ ಆದೇಶ ಬಂತು. ಆ ಮೇಲೆ ನಡೆದದ್ದು ಐತಿಹಾಸಿಕ ಘಟನೆ’ ಎನ್ನುತ್ತಾ ಡಿಸೆಂಬರ್‌ 11ರ ರಾತ್ರಿಯ ಘೋರ ಕ್ಷಣಗಳನ್ನು ನೆನಪಿಸಿಕೊಂಡರು.

‘ಫತೇಪುರ್‌ ಎತ್ತರದ ಜಾಗ. ಕೋಟೆಯಂತಿತ್ತು. ಭಾರತದ ಎಲ್ಲ ಚಲನವಲನಗಳನ್ನು ಗಮನಿಸಲು, ನಮ್ಮ ಮೇಲೆ ದಾಳಿ ನಡೆಸಲು ಅವರಿಗೆ ಅತಿಸೂಕ್ತ ಜಾಗ ಅದಾಗಿತ್ತು. ಅಲ್ಲಿಂದಲೇ ನಮ್ಮ ಮೇಲೆ ಫೈರಿಂಗ್‌ ನಡೆಸುತ್ತಿದ್ದರು.’ 4 ರೈಫಲ್‌ ಕಂಪೆನಿ (ಒಂದರಲ್ಲಿ 120 ಸೈನಿಕರಿರುತ್ತಾರೆ), ಟ್ಯಾಂಕ್‌ಗಳು ಸಹಿತ ನಮ್ಮ 500 ಮಂದಿ ಸೈನಿಕರು ಎಲ್ಲ ರೀತಿಯ ಕಾರ್ಯಯೋಜನೆ ತಯಾರಿಸಿ 11ರ ರಾತ್ರಿ 11 ಗಂಟೆಗೆ ದಾಳಿ ನಡೆಸಿದೆವು.

Advertisement

ವೆಸ್ಟರ್ನ್ ಬಾರ್ಡರ್‌ನಲ್ಲಿ ಒಂದು ರಾತ್ರಿಯಲ್ಲಿ ಅಂಥ ಭೀಕರ ಕಾಳಗ ಎಲ್ಲೂ ನಡೆದಿಲ್ಲ. ಮುಂಜಾನೆ 4 ಗಂಟೆ ವೇಳೆಗೆ ಫತೇಪುರ್‌ ನಮ್ಮದಾಯಿತು. ಆದರೆ ನಮ್ಮ ಸೇನೆಯ ಮೂವರು ಅಧಿಕಾರಿಗಳು, 42 ಸೈನಿಕರು ವೀರಮರಣ ಹೊಂದಿದರು. 86 ಮಂದಿ ಆಫೀಸರ್ ಮತ್ತು ಸೈನಿಕರು ಗಾಯಗೊಂಡರು ಎನ್ನುತ್ತಾರೆ ಆಗ ಜೂನಿಯರ್‌ ಆಫೀಸರ್‌ ಆಗಿದ್ದ, ಬ್ರಿ| ಐ. ಎನ್‌. ರೈ. 11ರಿಂದ 16ರ ವರೆಗೆ ಫತೇಪುರ್‌ ನಮ್ಮ ವಶದಲ್ಲಿಟ್ಟುಕೊಂಡು ಕಾದಿದ್ದೆವು. ಪೂರ್ವ ಪಾಕಿಸ್ಥಾನವನ್ನು ಉಳಿಸಿಕೊಳ್ಳಲು ಪಾಕ್‌ ಮಾಡಿದ ಸಾಹಸ ಫಲ ನೀಡಲಿಲ್ಲ. ಪಾಕ್‌ನ 93,000 ಸೈನಿಕರು ತಮ್ಮ ರೈಫಲ್‌ಗ‌ಳನ್ನು ಕೆಳಗಿಟ್ಟು ಢಾಕಾದಲ್ಲಿ ಭಾರತ ಸೇನೆಗೆ ಶರಣಾದರು ಮತ್ತು ಇದು ಜಗತ್ತಿನ ಚರಿತ್ರೆಯಲ್ಲಿ ಎರಡನೇ ಅತಿ ದೊಡ್ಡ ಸಿಂಗಲ್‌ ಸರೆಂಡರ್‌ ಆಗಿದೆ ಎಂದರು. 

ಪಾಕ್‌ ಶರಣು
1971ರ ಡಿ. 16ರಂದು ಪಾಕಿ ಸ್ಥಾನದ 93,000 ಸೈನಿಕರು ಭಾರತಕ್ಕೆ ಶರಣಾಗಿದ್ದಲ್ಲದೆ, ಪೂರ್ವ ಪಾಕಿಸ್ಥಾನವು ಬಾಂಗ್ಲಾದೇಶವಾಗಿ ಹೊಸ ರಾಷ್ಟ್ರವಾಯಿತು. ಭಾರತವು ಆಪರೇಶನ್‌ ವಿಜಯ್‌ ಹೆಸರಲ್ಲಿ ವಿಜಯ ಸಾಧಿಸಿ ಪಾಕಿಸ್ಥಾನದ ಸುಮಾರು 14,000 ಚ. ಕಿ.ಮೀ. ಭಾಗವನ್ನು ವಶಪಡಿಸಿಕೊಂಡಿತ್ತು. ಈ ದಿನವನ್ನು ಪ್ರತಿ ವರ್ಷ ಭಾರತದಲ್ಲಿ ವಿಜಯ ದಿವಸವನ್ನಾಗಿ ಆಚರಿಸಲಾಗುತ್ತದೆ. ಈ ಯುದ್ಧದಲ್ಲಿ ಭಾರತದ 1,426 ಸೈನಿಕರು ವೀರ ಮರಣ ಹೊಂದಿದ್ದರು. 3,611 ಮಂದಿ ಸೈನಿಕರು ಗಾಯಾಳುಗಳಾಗಿದ್ದರು.

ಸಿಮ್ಲಾ ಒಪ್ಪಂದ
ಜುಲೈ 1972ರಲ್ಲಿ ಪ್ರಧಾನಿ ಇಂದಿರಾಗಾಂಧಿ ಮತ್ತು ಪಾಕ್‌ ಪ್ರಧಾನಿ ಝಡ್‌ ಎ. ಭುಟ್ಟೋ ನಡುವಿನ ಮಾತುಕತೆ ಮತ್ತು ಸಿಮ್ಲಾ ಒಪ್ಪಂದದ ಪ್ರಕಾರ ಆಕ್ರಮಿತ ಪ್ರದೇಶದ ಸುಮಾರು 13,000 ಚ. ಕಿ.ಮೀ. ಜಾಗ ಮತ್ತು 93,000 ಯುದ್ಧ ಕೈದಿಗಳನ್ನು ಪಾಕಿಸ್ಥಾನಕ್ಕೆ ಮರಳಿಸಲಾಯಿತು. 

ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next