ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಂಗಳವಾರ ಭಾರತದೊಂದಿಗೆ ಎಲ್ಲಾ ಗಂಭೀರ ಮತ್ತು ಬಾಕಿ ಇರುವ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ನಡೆಸುವ ಬಗ್ಗೆ ಬೆಳಕು ಚೆಲ್ಲಿದರು.
ಬಡತನ ಮತ್ತು ನಿರುದ್ಯೋಗದ ವಿರುದ್ಧ ಹೋರಾಡುತ್ತಿರುವ ಎರಡೂ ದೇಶಗಳಿಗೆ “ಯುದ್ಧವು ಒಂದು ಆಯ್ಕೆಯಾಗಿಲ್ಲ” ಎಂದು ಹೇಳಿದರು.
ಇಲ್ಲಿ ನಡೆದ ಪಾಕಿಸ್ತಾನ ಮಿನರಲ್ಸ್ ಶೃಂಗಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಷರೀಫ್ ಈ ಹೇಳಿಕೆಯನ್ನು ನೀಡಿದ್ದಾರೆ. ‘ಡಸ್ಟ್ ಟು ಡೆವಲಪ್ ಮೆಂಟ್’ಎಂಬ ಘೋಷವಾಕ್ಯದಡಿಯಲ್ಲಿ ಆಯೋಜಿಸಲಾಗಿದ್ದ ಸಭೆಯು ಪಾಕ್ ಗೆ ವಿದೇಶಿ ಹೂಡಿಕೆ ತರುವ ಗುರಿ ಹೊಂದಿತ್ತು.
” ನೆರೆ ದೇಶದವರು ಗಂಭೀರ ವಿಷಯಗಳನ್ನು ಮಾತನಾಡಲು ಸಿದ್ದರಿದ್ದರೆ ನಾವು ಸಹ ಮಾತನಾಡಲು ಸಿದ್ಧರಿದ್ದೇವೆ, ಏಕೆಂದರೆ ಯುದ್ಧವು ಇನ್ನು ಮುಂದೆ ಒಂದು ಆಯ್ಕೆಯಾಗಿಲ್ಲ” ಎಂದು ಪಾಕ್ ಪ್ರಧಾನಿ ಷರೀಫ್ ಭಾರತವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಹೇಳಿದರು.
ಆಗಸ್ಟ್ 12 ರಂದು ಸಂಸತ್ತಿನ ಐದು ವರ್ಷಗಳ ಅವಧಿ ಪೂರ್ಣಗೊಳ್ಳುವ ಸಂದರ್ಭದಲ್ಲಿ ಅವರ ಸಮ್ಮಿಶ್ರ ಸರ್ಕಾರವು ಚುನಾವಣೆಯನ್ನು ಎದುರಿಸಲು ಸಿದ್ಧವಾಗುತ್ತಿರುವಾಗ ಪ್ರಧಾನಿ ಷರೀಫ್ ಅವರ ಹೇಳಿಕೆಗಳು ಬಂದಿವೆ.
ಮುಂದಿನ ಚುನಾವಣೆಗೆ ಹೆಚ್ಚಿನ ಸಮಯವನ್ನು ಒದಗಿಸಲು ಅವಧಿ ಮುಗಿಯುವ ಕೆಲವು ದಿನಗಳ ಮೊದಲು ಕೆಳಮನೆಯಾದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಲಾಗುವುದು ಎಂದು ವರದಿಯಾಗಿದೆ.