Advertisement

Islamabad: ಪಾಕ್‌ನ ಇಬ್ಬಂದಿತನಕ್ಕೆ ಕಿಡಿ: ಜೈಶಂಕರ್‌ ನಡೆ ಶ್ಲಾಘನೀಯ

01:00 AM Oct 17, 2024 | Team Udayavani |

ಇಸ್ಲಾಮಾಬಾದ್‌ನಲ್ಲಿ ಬುಧವಾರ ನಡೆದ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಅವರು ಆತಿಥೇಯ ಪಾಕಿಸ್ಥಾನವನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು.

Advertisement

ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್ ಅವರ ಸಮಕ್ಷಮದಲ್ಲಿಯೇ ಗಡಿಯಾಚೆಗಿನ ಭಯೋತ್ಪಾದನೆ, ಉಗ್ರವಾದ ಮತ್ತು ಪ್ರತ್ಯೇಕತಾವಾದದಿಂದ ಯಾವುದೇ ಕ್ಷೇತ್ರದಲ್ಲೂ ಸಹಕಾರ ಹೊಂದುವುದು ಯಾ ನಿರೀಕ್ಷಿಸುವುದು ಅಸಾಧ್ಯದ ಮಾತು ಎಂದು ಹೇಳುವ ಮೂಲಕ ಎಸ್‌ಸಿಒ ಸದಸ್ಯ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಪಾಕಿಸ್ಥಾನದ ಇಬ್ಬಗೆಯ ನೀತಿಗೆ ಕಿಡಿ ಕಾರಿದರು.

9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ಥಾನಕ್ಕೆ ಭೇಟಿ ನೀಡಿದ್ದು, ಈ ಭೇಟಿಯನ್ನು ಎಸ್‌. ಜೈಶಂಕರ್‌ ಅವರು ಅತ್ಯಂತ ಸಮರ್ಥವಾಗಿಯೇ ಬಳಸಿಕೊಂಡರಲ್ಲದೆ ಪಾಕ್‌ ನೆಲದಲ್ಲಿಯೇ ನಿಂತು ಆ ರಾಷ್ಟ್ರಕ್ಕೆ ಕಠಿನ ಸಂದೇಶವನ್ನು ರವಾನಿಸಿದರು.

ಕಳೆದ ಹಲವಾರು ದಶಕಗಳಿಂದ ಪಾಕಿಸ್ಥಾನ ಭಯೋತ್ಪಾದನೆ, ಉಗ್ರವಾದವನ್ನು ಪೋಷಿಸುತ್ತ ಬಂದಿದ್ದು, ತನ್ನ ನೆರೆಯ ರಾಷ್ಟ್ರಗಳ ವಿರುದ್ಧ ಉಗ್ರರನ್ನು ಛೂ ಬಿಡುವ ಕಾರ್ಯವನ್ನು ಮಾಡುತ್ತ ಬಂದಿದೆ. ಇದರ ಜತೆಯಲ್ಲಿ ಈ ರಾಷ್ಟ್ರಗಳಲ್ಲಿ ಪ್ರತ್ಯೇಕತಾವಾದದ ಕೂಗೆದ್ದಾಗಲೆಲ್ಲ ಅದಕ್ಕೆ ನೀರೆರೆದು ಪೋಷಿಸುವ ಕಾರ್ಯದಲ್ಲೂ ನಿರತವಾಗಿದೆ. ಪಾಕಿಸ್ಥಾನದ ಈ ಎಡಬಿಡಂಗಿ ಧೋರಣೆಗಳೇ ಇಂದು ಆ ರಾಷ್ಟ್ರದಲ್ಲಿ ಅರಾಜಕತೆ ತಾಂಡವವಾಡುವಂತೆ ಮಾಡಿದ್ದರೆ, ಆರ್ಥಿಕವಾಗಿ ದಿವಾಳಿಯನ್ನಾಗಿಸಿದೆ. ದೇಶದಲ್ಲಿ ಹೆಸರಿಗೆ ಮಾತ್ರ ಪ್ರಜಾಸತ್ತೆ ಉಳಿದಿದ್ದು ಆಡಳಿತದ ಪ್ರತಿಯೊಂದು ಹಂತದಲ್ಲೂ ಸೇನೆಯ ಹಸ್ತಕ್ಷೇಪ ಹೆಚ್ಚಿದೆ.

ರಾಜಕೀಯ ದ್ವೇಷವಂತೂ ಉಚ್ಛಾಯದ ಸ್ಥಿತಿ ತಲುಪಿದೆ. ಈ ಎಲ್ಲ ವೈರುಧ್ಯಗಳ ಪರಿಣಾಮವನ್ನು ಪಾಕಿಸ್ಥಾನ ಈಗ ಎದುರಿಸುತ್ತಿದ್ದು ಇದರಿಂದ ಹೊರಬರಲು ಒದ್ದಾಟ ನಡೆಸುತ್ತಿದೆ. ಇದರ ಹೊರತಾಗಿಯೂ ಭಾರತದ ವಿರುದ್ಧ ಉಗ್ರರನ್ನು ಎತ್ತಿ ಕಟ್ಟುವ ಮತ್ತು ಗಡಿಯಲ್ಲಿ ಸುಖಾಸುಮ್ಮನೆ ಸಂಘರ್ಷದ ವಾತಾವರಣ ಸೃಷ್ಟಿಸುತ್ತಿದೆ.

Advertisement

ಅಲ್ಲದೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಷಯವನ್ನು ಪದೇಪದೆ ಕೆದಕಿ ಭಾರತವನ್ನು ಕೆಣಕುವ ಪ್ರಯತ್ನವನ್ನು ನಡೆಸುತ್ತ ಬಂದಿದೆ.

ಪಾಕಿಸ್ಥಾನದ ಈ ಎಲ್ಲ ಷಡ್ಯಂತ್ರಗಳನ್ನು ಭಾರತ ನಿರಂತರವಾಗಿ ಬಯಲಿಗೆಳೆಯುವ ಮೂಲಕ ಪಾಕಿಸ್ಥಾನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿಸುತ್ತಲೇ ಬಂದಿದೆ. ಈಗ ಮತ್ತೆ ಎಸ್‌ಸಿಒ ಶೃಂಗಸಭೆಯಲ್ಲಿಯೂ ವಿದೇಶಾಂಗ ಸಚಿವರು ಪಾಕಿಸ್ಥಾನವನ್ನು ಒಂದರ್ಥದಲ್ಲಿ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭಯೋತ್ಪಾದನೆ, ಪ್ರತ್ಯೇಕತಾವಾದ, ಉಗ್ರವಾದದಿಂದ ವ್ಯಾಪಾರ, ಇಂಧನ, ಸಂಪರ್ಕ, ತಂತ್ರಜ್ಞಾನ ಸಹಿತ ಯಾವುದೇ ಕ್ಷೇತ್ರದಲ್ಲೂ ರಾಷ್ಟ್ರಗಳ ನಡುವೆ ಸಹಕಾರದ ಮಾತು ಅಸಂಭವವಾಗಿದೆ. ಪರಸ್ಪರ ವಿಶ್ವಾಸ, ನಂಬಿಕೆ, ಗೌರವ ಅತೀಮುಖ್ಯವಾಗಿದೆ. ಜತೆಯಲ್ಲಿ ಪ್ರತಿಯೊಂದು ರಾಷ್ಟ್ರದ ಸಾರ್ವಭೌಮತೆ, ಪ್ರಾದೇಶಿಕ ಸಮಗ್ರತೆಯನ್ನು ಗುರುತಿಸಿದಾಗಲಷ್ಟೇ ಸಹಕಾರ ವೃದ್ಧಿ ಸಾಧ್ಯ. ಉತ್ತಮ ನೆರೆಹೊರೆಯ ವಿನಾ ಸಹಕಾರ ಕಷ್ಟಸಾಧ್ಯ. ಈ ಎಲ್ಲ ವಿಷಯಗಳ ಬಗೆಗೆ ಎಸ್‌ಸಿಒ ಸದಸ್ಯ ರಾಷ್ಟ್ರಗಳು ಸ್ವಯಂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಹೇಳುವ ಮೂಲಕ ಸಚಿವ ಜೈಶಂಕರ್‌ ಪಾಕಿಸ್ಥಾನ ತನ್ನ ಧೋರಣೆಯನ್ನು ಬದಲಾಯಿಸಿದ್ದೇ ಆದಲ್ಲಿ ಅದರೊಂದಿಗೆ ಮಾತುಕತೆಗೆ ಭಾರತ ಸಿದ್ಧವಿದೆ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದ್ದಾರೆ.

ಪಾಕಿಸ್ಥಾನದಲ್ಲಿ ನಡೆದ ಶೃಂಗಸಭೆಯಲ್ಲಿ ಪಾಲ್ಗೊಂಡು ನೆರೆ ರಾಷ್ಟ್ರಗಳೊಂದಿಗಿನ ಬಾಂಧವ್ಯ, ಸಹಕಾರ, ಸಹಭಾಗಿತ್ವದ ವಿಷಯಗಳಲ್ಲಿ ಭಾರತದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಭಯೋತ್ಪಾದನೆ ದಮನದ ವಿನಾ ಸಹಕಾರ ಕನಸಿನ ಮಾತು ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಪಾಕ್‌ ನಾಯಕರಿಗೆ ತಿಳಿ ಹೇಳುವ ಪ್ರಯತ್ನ ಮಾಡಿರುವುದು ಶ್ಲಾಘನೀಯ.

Advertisement

Udayavani is now on Telegram. Click here to join our channel and stay updated with the latest news.

Next