Advertisement

ನೀರಿಗಾಗಿ ವಾರ್‌: ಅಧಿಕಾರಿಗಳಿಂದ ಸಂಧಾನ ಸೂತ್ರ

06:20 AM Feb 11, 2018 | |

ಚಿಕ್ಕಮಗಳೂರು: ಕೆರೆ ನೀರು ಬಿಡುವ ವಿಚಾರವಾಗಿ ಸಖರಾಯಪಟ್ಟಣದಲ್ಲಿ ಉಂಟಾಗಿದ್ದ ಗಲಭೆ ನಿಯಂತ್ರಣಕ್ಕೆ ಬಂದಿದ್ದು, ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಶನಿವಾರ ಶಾಂತಿ ಸಭೆ ನಡೆಸಿದ್ದಾರೆ. ಅಯ್ಯನಕೆರೆಯಲ್ಲಿ ಇರುವ ನೀರನ್ನು ಬ್ರಹ್ಮಸಮುದ್ರ ಕೆರೆಗೆ ಶೇ.50 ಹಾಗೂ ಸಖರಾಯಪಟ್ಟಣ ಕೆರೆಗೆ ಶೇ.50ರಷ್ಟು ಹಂಚಿಕೆ ಮಾಡುವ ಮೂಲಕ ಸಮಸ್ಯೆ ಬಗೆಹರಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

Advertisement

ಬ್ರಹ್ಮಸಮುದ್ರ ಕೆರೆಗೆ ಅಯ್ಯನಕೆರೆಯಿಂದ ನೀರು ಬಿಡುವ ವಿಚಾರವಾಗಿ ವಿವಿಧ ಗ್ರಾಮಗಳ ಗ್ರಾಮಸ್ಥರು ಹಾಗೂ ಸಖರಾಯಪಟ್ಟಣದ ಗ್ರಾಮಸ್ಥರ ನಡುವೆ ಶುಕ್ರವಾರ ಮಾರಾಮಾರಿ ನಡೆದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆ ತರೀಕೆರೆ ಉಪವಿಭಾಗಾಧಿಕಾರಿ ಬಿ.ವಿ. ಸರೋಜ, ಕಡೂರು ತಹಶೀಲ್ದಾರ್‌ ಭಾಗ್ಯ, ತರೀಕೆರೆ ಡಿವೈಎಸ್‌ಪಿ ತಿರುಮಲೇಶ್‌, ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಯು.ವಿ.ನಾರಾಯಣ್‌, ಎಇಇ ಚನ್ನಬಸಪ್ಪ ಅಯ್ಯನಕೆರೆಗೆ ತೆರಳಿ ಅಲ್ಲಿ ಇರುವ ನೀರಿನ ಪ್ರಮಾಣ ಕುರಿತು ಪರಿಶೀಲನೆ ನಡೆಸಿದರು. ನಂತರ ಸಖರಾಯಪಟ್ಟಣ ಪೊಲೀಸ್‌ ಠಾಣೆಯಲ್ಲಿ ಎರಡೂ ಕಡೆಯ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದರು.

ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್‌ ಯು.ವಿ. ನಾರಾಯಣ್‌ ಮಾತನಾಡಿ , ಕೆರೆಯಲ್ಲಿ ಈಗ 4 ಅಡಿ ನೀರು ಲಭ್ಯವಿದೆ. ಕಳೆದ ವರ್ಷ ಮಳೆಗಾಲದ ನಂತರ ಕೆರೆಯಲ್ಲಿ 32 ಅಡಿ ನೀರಿತ್ತು. ಆದರೆ ಈ ವರ್ಷ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕೇವಲ 22 ಅಡಿ ನೀರಿತ್ತು.  ಫೆ.7ರಂದು ಸಖರಾಯಪಟ್ಟಣ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕೆರೆಯಲ್ಲಿ ನೀರು ಕಡಿಮೆ ಇದೆ. ಅದನ್ನೂ ಬಿಟ್ಟರೆ ಸಖರಾಯಪಟ್ಟಣ ಗ್ರಾಮಕ್ಕೆ ಕುಡಿವ ನೀರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು. ಆಗ ಜಿಲ್ಲಾಧಿಕಾರಿಗಳು ನಾಲೆಗೆ ನೀರು ಬಿಡುವುದನ್ನು ನಿಲ್ಲಿಸುವಂತೆ ಸೂಚಿಸಿದ್ದರು ಎಂದು ತಿಳಿಸಿದರು.

ಈಗ ಕೆರೆಯಲ್ಲಿ ಕೇವಲ 4 ಅಡಿ ನೀರಿದೆ. ನೀರನ್ನು ನಾಲೆಯ ಮೂಲಕ ಬ್ರಹ್ಮಸಮುದ್ರ ಕೆರೆಗೆ ಬಿಟ್ಟರೂ ನೀರು ಇಂಗುವುದರಿಂದ ಪೂರ್ಣ ಪ್ರಮಾಣದ ನೀರು ಬ್ರಹ್ಮಸಮುದ್ರ ಕೆರೆ ತಲುಪುವುದಿಲ್ಲ. ಜತೆಗೆ ಮಾರ್ಗ ಮಧ್ಯೆ ಕೆಲವರು ಮೋಟರ್‌ ಮೂಲಕ ನೀರು ತೆಗೆಯುತ್ತಾರೆ. ನೀರು ಬಿಡುವುದರಿಂದ ಬ್ರಹ್ಮಸಮುದ್ರ ಕೆರೆಗೆ ನೀರು ತಲುಪುವುದೂ ಇಲ್ಲ. ಇತ್ತ ಸಖರಾಯಪಟ್ಟಣ ಗ್ರಾಮಕ್ಕೆ ಕುಡಿವ ನೀರು ಒದಗಿಸಲೂ ಆಗುವುದಿಲ್ಲ ಎಂದು ಹೇಳಿದರು.

ಇದಕ್ಕೆ ಒಪ್ಪದ ಬ್ರಹ್ಮಸಮುದ್ರ ಕೆರೆ ವ್ಯಾಪ್ತಿಯ ಗ್ರಾಮಸ್ಥರು,  ನಿರ್ಣಯದಂತೆ ಊರುಕಾಲುವೆ, ಬಸವನಕಾಲುವೆ, ಕಡೆಕಾಲುವೆಗಳಿಗೆ ನೀರು ಬಿಡಲಾಗಿದೆ. ಆದರೆ ಬ್ರಹ್ಮಸಮುದ್ರ ಕೆರೆಗೆ ಮಾತ್ರ ನೀರು ಬಿಟ್ಟಿಲ್ಲ. ಒಬ್ಬೊಬ್ಬರಿಗೊಂದು ನ್ಯಾಯ ಸರಿಯಲ್ಲ ಎಂದು ಕಿಡಿಕಾಡಿದರು. ಕುಡಿಯುವ ನೀರು ಟ್ಯಾಂಕರ್‌ ಆದರೂ ಸರಿ, ಕೆರೆಗೆ ನೀರು ಹರಿಸುವ ಮೂಲಕವಾದರೂ ಸರಿ, ಒಟ್ಟು ಕುಡಿವ ನೀರು ಬಿಡಿ. ಈವರೆಗೂ ಟ್ಯಾಂಕರ್‌ ಮೂಲಕ ನೀರು ಕೊಟ್ಟಿರುವುದಕ್ಕೆ ಗ್ರಾಪಂನಿಂದ ಹಣವನ್ನೇ ಕೊಟ್ಟಿಲ್ಲ. ಅಯ್ಯನಕೆರೆ ಕೇವಲ ಸಖರಾಯಪಟ್ಟಣಕ್ಕೆ ಮಾತ್ರ ಸೇರಿಲ್ಲ. ಸುತ್ತಲ ಎಲ್ಲ ಗ್ರಾಮಗಳಿಗೂ ಸೇರಿದೆ. ಕುಡಿವ ನೀರು ಕೊಡುವುದಾದರೂ ಎಲ್ಲರಿಗೂ ಕೊಡಿ, ಇಲ್ಲವೇ ಯಾರಿಗೂ ಕೊಡಬೇಡಿ ಎಂದು ಆಗ್ರಹಿಸಿದರು.

Advertisement

ಸಂಧಾನ ಸೂತ್ರ
ಶಾಂತಿಸಭೆಯಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆದ ನಂತರ ಈಗ ಕೆರೆಯಲ್ಲಿ 4 ಅಡಿ ನೀರಿದೆ. ಅದರಲ್ಲಿ 2 ಅಡಿಯಷ್ಟು ನೀರು ಬ್ರಹ್ಮಸಮುದ್ರ ಕೆರೆಗೆ ಬಿಡುವುದು, ಉಳಿದ ನೀರನ್ನು ಸಖರಾಯಪಟ್ಟಣಕ್ಕೆ ಕುಡಿವ ನೀರಿಗಾಗಿ ಬಳಸಿಕೊಳ್ಳುವುದು. ಕೆರೆಯಲ್ಲಿ ಎಷ್ಟು ನೀರಿದೆ, ಎಷ್ಟು ನೀರನ್ನು ಬ್ರಹ್ಮಸಮುದ್ರ ಕೆರೆಗೆ ಬಿಡಬೇಕೆಂಬ ಬಗ್ಗೆ ಎಲ್ಲರೂ ಕೆರೆಯ ಬಳಿ ತೆರಳಿ ಗುರುತು ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next